ಎಲ್ಲಿ ರಾಜಕಾರಣಿ ಉಪೇಂದ್ರ..?

Kannada News

03-10-2017

ರಾಜಕಾರಣಿ ಎಂದರೆ ಜನಸೇವಕ ಅದಕ್ಕೇ ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ, ರಾಜಕೀಯದಲ್ಲಿ ಹೊಸತನ್ನ ತರುತ್ತೇನೆ, ಕೈ ಜೋಡಿಸುವವರು ಸಂಪರ್ಕಿಸಿ ಎಂದು ಅಂತರ್ಜಾಲದ ಐಡಿಗಳನ್ನ ನೀಡಿದ್ದ ನಟ ಉಪೇಂದ್ರ ಎಲ್ಲಿಗೆ ಹೋದರು?

ದೇವರಾಜ ಅರಸು, ರಾಮಕೃಷ್ಣ ಹೆಗ್ಗಡೆ, ಬಂಗಾರಪ್ಪ, ಯಡಿಯೂರಪ್ಪ ಇಂಥವರೆಲ್ಲ ಬೇರೆಬೇರೆ ಪಕ್ಷ ಸ್ಥಾಪಿಸಿಕೊಂಡರೂ ಯಶಸ್ಸಾಗಲಿಲ್ಲ. ಸಧ್ಯಕ್ಕೆ ಹಾಗೂ ಹೀಗೂ ದೇವೇಗೌಡರು ಜನತಾದಳವನ್ನ ಉಳಿಸಿಕೊಂಡು ಬರುತ್ತಿದ್ದಾರೆ. ಇಂಥದ್ದರ ನಡುವೆ ಉಪೇಂದ್ರ ಸಿನಿಮಾಕ್ಕೆ ವಿರಾಮ ಕೊಟ್ಟು ರಾಜಕೀಯ ಪಕ್ಷ ಕಟ್ಟುವೆ ಎಂದೇಳಿ ತಿಂಗಳುಗಳು ಉರುಳಿದವೇ ಹೊರತು, ಹೊಸಾ ಪಕ್ಷದ ದಿಕ್ಕು ದಿಶೆ ಗೊತ್ತಾಗುತ್ತಲೇ ಇಲ್ಲ.

ಅನಂತನಾಗ್, ಶಶಿಕುಮಾರ್, ಮುಖ್ಯಮಂತ್ರಿ ಚಂದ್ರು ರಾಜಕಾರಣ ಮಾಡಿ ಈಗ ನೇಪಥ್ಯ ಸೇರಿದ್ದಾರೆ. ಇನ್ನು ಚುನಾವಣೆಗೆ ನಿಂತು ಸೋತ ಜಯಂತಿ, ಶ್ರೀನಿವಾಸಮೂರ್ತಿ, ದ್ವಾರಕೀಶ್, ಗೀತಾ ಶಿವರಾಜ ಕುಮಾರ್, ಶೃತಿಯವರಂಥ ದಂಡೇ ಇದೆ.

ತೆರೆಯ ಮೇಲೆ ಮಿಂಚುವವರನ್ನು ರಾಜಕಾರಣದಲ್ಲಿ ಬೆಳೆಸಿರುವುದು ತಮಿಳುನಾಡು, ಆಂಧ್ರದಲ್ಲಷ್ಟೇ ಕಾಣಬಹುದು. ಈಗಲೂ ಕಮಲ್ ಹಾಸನ್, ರಜನೀಕಾಂತ್ ಒಂದು ರೀತಿಯಲ್ಲಿ ಹವಾ ಎಬ್ಬಿಸುತ್ತಿದ್ದು, ವಿವಿಧ ಪಕ್ಷಗಳವರು ಸಾಲು ಸಾಲಾಗಿ ಇವರನ್ನು ಭೇಟಿಯಾಗುತ್ತಿದ್ದಾರೆ, ಚರ್ಚಿಸುತ್ತಿದ್ದಾರೆ.

ಆದರೆ ಉಪೇಂದ್ರ ಅವರನ್ನು ಯಾವ ರಾಜಕಾರಣಿಯೂ ಭೇಟಿಯಾಗಿಲ್ಲ. ರಾಜಕೀಯ ಮಾಡುವ ಇವರ ಆಲೋಚನೆಯನ್ನ ಯಾರೂ ಸೀರಿಯಸ್ಸಾಗಿ ತೆಗೆದುಕೊಂಡೂ ಇಲ್ಲ. ಇದರಿಂದಾಗಿಯೇ ಉಪೇಂದ್ರ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರತಿಕ್ರಿಯಿಸಬಹುದಾದಂಥ ಘಟನೆಗಳು ನಡೆದರೂ, ಮೌನವಾಗಿದ್ದಾರೆ. ಪ್ರತಿಕ್ರಿಯೆ ನೀಡಿದರೂ ಅದನ್ನ ಸಾಮಾಜಿಕ ಜಾಲತಾಣಗಳಿಗಷ್ಟೆ ಸೀಮಿತಗೊಳಿಸಿದ್ದಾರೆ.

 ಜಾಲತಾಣದ ಮೂಲಕವೇ ರಾಜಕಾರಣ ಮಾಡುವಂಥ ಪರಿಸ್ಥಿತಿ ಇಲ್ಲ. ಉಪೇಂದ್ರ ಸಿನಿಮಾ ಗಿಮಿಕ್‍ ಗಳು ರಾಜಕೀಯದಲ್ಲಿ ವರ್ಕ್ ಔಟ್ ಆಗುತ್ತಿಲ್ಲ. ಕೊನೆಗಿವರು ರಾಜಕೀಯದ ತನ್ನಾಸೆಯನ್ನು ಪೂರೈಸಿಕೊಳ್ಳಲು ರಾಜಕೀಯ ಪಕ್ಷಕ್ಕೆ ಸೇರುವುದೇ ಅನಿವಾರ್ಯವಾಗಲಿದೆಯಾ ನೋಡಬೇಕಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ