ಹೂವಿಗೆ ಭಾರೀ ಬೇಡಿಕೆ..

Kannada News

29-09-2017

ಬೆಂಗಳೂರು: ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ಮೋಡಕವಿದ ವಾತಾವರಣ ಜೊತೆಗೆ ಆಗಾಗ ಬೀಳುವ ಮಳೆಯನ್ನೂ ಲೆಕ್ಕಿಸದೆ ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ತಯಾರಿ ನಡೆಸಲಾಗಿದೆ. ಅಲ್ಲದೆ ಕುಂಬಳಕಾಯಿ, ಬಾಳೆಕಂದ, ನಿಂಬೆಹಣ್ಣು, ಹೂವಿಗೆ ಎಲ್ಲೆಡೆ ಭಾರೀ ಬೇಡಿಕೆ ಹೆಚ್ಚಿದೆ.

ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ಪೂರೈಕೆಯಾಗಬೇಕಿದ್ದ ನಿಂಬೆಹಣ್ಣು, ಕುಂಬಳಕಾಯಿ, ಹೂವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆ ಎಲ್ಲೆಡೆ ಭಾರಿ ಬೇಡಿಕೆ ಇರವುದು ಕಂಡು ಬಂತು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಜನ ಆಯುಧಪೂಜೆ ಹಾಗೂ ವಿಜಯದಶಮಿಗೆ ಹೂ, ಬೂದುಕುಂಬಳ ಕಾಯಿ, ಬಾಳೆಕಂದ ಮತ್ತಿತರ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.

ಮಾರುಕಟ್ಟೆಯಲ್ಲಿ ಸೇವಂತಿ, ರೋಜ್, ಚೆಂಡು ಹೂಗಳ ರಾಶಿಯೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಒಂದು ಕೆಜಿಗೆ 100 ರಿಂದ 150 ರೂ. ಇದೆ. ಒಂದು ಮಾರು ಹೂಗೆ 200 ರಿಂದ 300 ರೂ.ವರೆಗೂ ಇದೆ. ಕುಂಬಳಕಾಯಿ ಒಂದಕ್ಕೆ 80 ರೂ. ನಂತೆ ಮಾರಲಾಗುತ್ತಿದೆ. ಇನ್ನು ನಿಂಬೆಹಣ್ಣು, ಮೆಣಸುಗಳ ಮಾರಾಟವೂ ಭರ್ಜರಿಯಾಗಿಯೇ ನಡೆದಿದೆ. ಒಟ್ಟಿನಲ್ಲಿ ಆಯುಧಪೂಜೆ ಮತ್ತು ವಿಜಯದಶಮಿಯ ಸಂಭ್ರಮಕ್ಕೆ ಸಿದ್ಧತೆಗಳು ಜೋರಾಗಿದೆ.

ಆಯುಧ ಪೂಜೆಯ ಈ ದಿನ ನಾವು ಉಪಯೋಗಿಸುವ ಪ್ರಮುಖ ವಸ್ತುಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಈ ದಿನ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ನಡೆದ ಪವಿತ್ರ ದಿನ. ಪಾಂಡವರು ಅಜ್ಞಾತವಾಸ ಮುಗಿಸಿದ ಪವಿತ್ರ ದಿನವೆಂದೂ ಹೇಳಲಾಗುತ್ತದೆ. ಪಾಂಡವರು ಅಜ್ಞಾತವಾಸ ಹೋಗುವಾಗ ಬನ್ನಿಗಿಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಇಟ್ಟಿ, ಅಜ್ಞಾತವಾಸ ಮುಗಿಸಿ ಬನ್ನಿ ಗಿಡವನ್ನು ಪೂಜಿಸಿ, ಶಸ್ತ್ರಾಸ್ತ್ರಗಳನ್ನು ಬಿಡಿಸಿಕೊಂಡ ಪವಿತ್ರ ದಿನವೆಂದು ಹೇಳುತ್ತಾರೆ.

ವಿಜಯದಶಮಿಯಂದು ಬೆಳೆ ತುಂಬಿದ ಭೂಮಿ, ಕಾಡನ್ನು ಬಿಟ್ಟು ಊರನ್ನು ಸೇರುವುದೆಂದು ಕೃಷಿಕರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿಕರು ಹಾಗೂ ವ್ಯಾಪಾರಿಗಳು ಆಯುಧಗಳನ್ನು ಪೂಜಿಸಿ, ಬನ್ನಿಯನ್ನು ನೆಟ್ಟು, ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳುತ್ತಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ