ಅರಮನೆಗೆ ಒಯ್ಯುವಂತಿಲ್ಲ ಬ್ಯಾಗ್ ಗಳು !

Kannada News

29-09-2017 417

ಮೈಸೂರು: ಸೆಪ್ಟೆಂಬರ್ 30ರಂದು ನಡೆಯಲಿರುವ ಜಂಬೂ ಸವಾರಿ ವೀಕ್ಷಣೆಗೆ ಅರಮನೆ ಆವರಣದಲ್ಲಿ ಕಳೆದ ಬಾರಿ 22,400 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ 3000 ಹೆಚ್ಚುವರಿ ಆಸನಗಳನ್ನು ಏರಿಕೆ ಮಾಡಲಾಗಿದ್ದು, ಅಂದು ನಡೆಯುವ ಪಂಜಿನ ಕವಾಯತ್‍ ಗಾಗಿ ಬನ್ನಿ ಮಂಟಪದಲ್ಲಿ 26,200 ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮಾಹಿತಿ ನೀಡಿದರು.

ಈ ಬಾರಿ ಸಾರ್ವಜನಿಕರಿಗೆ ನೀಡಲಾಗಿರುವ ಪಾಸ್‍ ಗಳಿಗೆ ಬಾರ್ ಕೋಡಿಂಗ್ ವ್ಯವಸ್ಥೆ ಮಾಡಿದ್ದು, ಆಯಾ ದ್ವಾರದ ಪಾಸ್‍ ಗಳ ಮೂಲಕ ಪ್ರವೇಶಿಸಬೇಕು. ಅದನ್ನು ಹೊರತುಪಡಿಸಿ ಬೇರೆ ದ್ವಾರಗಳಲ್ಲಿ ಪ್ರವೇಶ ಇರುವುದಿಲ್ಲ. ನಕಲಿ ಪಾಸ್‍ ಗಳನ್ನು ತಡೆಗಟ್ಟುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸೆಪ್ಟೆಂಬರ್ 30ರಂದು ಜಂಬೂ ಸವಾರಿ ದಿನ ಮಧ್ಯಾಹ್ನ 2.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆ 2.30ಕ್ಕೆ ಆರಂಭವಾಗಲಿದೆ. ಅಂದು ಸಂಜೆ 4.30ಕ್ಕೆ ಅಂಬಾರಿ ಹೊರುವ ಅರ್ಜುನನಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಲಿದ್ದಾರೆ.

ಈ ಬಾರಿಯ ದಸರಾದಲ್ಲಿ ಒಂದು ಸಾವಿರ ಗೋಲ್ಡ್ ಪಾಸ್‍ ಗಳು ಈಗಾಗಲೇ ಮಾರಾಟವಾಗಿದ್ದು , ಇದರಿಂದ 80 ಲಕ್ಷ ಆದಾಯ ಬಂದಿದೆ ಎಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಜಂಬೂ ಸವಾರಿ ವೇಳೆ ಒಂದು ಗಂಟೆ ಮುಂಚಿತವಾಗಿ ಸಾರ್ವಜನಿಕರು ಅರಮನೆ ಆವರಣಕ್ಕೆ ಪ್ರವೇಶಿಸಬಹುದು. ಈ ಸಂದರ್ಭದಲ್ಲಿ ಜನರು ಯಾವುದೇ ಬ್ಯಾಗ್ ಇನ್ನಿತರ ವಸ್ತುಗಳನ್ನು ನಿಷೇಧಿಸಲಾಗಿದೆ. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ