ಕುಖ್ಯಾತ ಮನೆಗಳ್ಳ ಬಂಧನ

Kannada News

28-09-2017

ಬೆಂಗಳೂರು: ಒಂಟಿಯಾಗಿ ಬೀಗ ಹಾಕಿದ ಅಂಗಡಿ ಮತ್ತು ಮನೆಗಳನ್ನು ಗುರುತಿಸಿ ಕಳವು ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ ಕುಖ್ಯಾತ ಕನ್ನಗಳ್ಳನನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಸಿಕೆ ಪಾಳ್ಯದ ಆನಂದ್ (33) ಬಂಧಿತ ಆರೋಪಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಬಂಧಿತನಿಂದ ಬಾಗಲಗುಂಟೆಯ ಬಟ್ಟೆ ಅಂಗಡಿಯೊಂದರಲ್ಲಿ 10 ಲಕ್ಷ ಕಳ್ಳತನ ಮಾಡಿರುವುದೂ ಸೇರಿದಂತೆ 5 ಕನ್ನಗಳವು ಪ್ರಕರಣದಲ್ಲಿ ದೋಚಿದ್ದ 25 ಲಕ್ಷ ಮೌಲ್ಯದ 450 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, 1 ಸ್ಯಾಂಟ್ರೊ ಹಾಗೂ 1 ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಒಬ್ಬಂಟಿಯಾಗಿ ಪರಪ್ಪನ ಅಗ್ರಹಾರ, ಬಾಗಲಗುಂಟೆ, ಅತ್ತಿಬೆಲೆ ಇನ್ನಿತರ ಹೊರ ವಲಯದ ಪ್ರದೇಶಗಳಲ್ಲಿ ಸಂಚರಿಸುತ್ತ ಬೀಗ ಹಾಕಿದ್ದ ಮನೆಗಳು ಹಾಗೂ ಅಂಗಡಿಗಳನ್ನು ಗುರುತಿಸಿ ರಾತ್ರಿ ವೇಳೆ ಕನ್ನಗಳ್ಳತನ ಮಾಡುತ್ತಿದ್ದ. ಪರಪ್ಪನ ಅಗ್ರಹಾರದಲ್ಲಿ ನಡೆದ ಮನೆಗಳ್ಳತನದ ಜಾಡು ಹಿಡಿದ ಪೊಲೀಸರು ವೈಜ್ಞಾನಿಕ ತನಿಖಾ ವಿಧಾನಗಳನ್ನು ಅಳವಡಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರ ಅಲ್ಲದೆ ತಮಿಳುನಾಡಿನ ಹಲವೆಡೆ ಆರೋಪಿಯು ಕನ್ನಗಳವು ಮಾಡಿ ಜೈಲಿಗೆ ಹೋಗಿ ಬಂದಿರುವುದು ಪತ್ತೆಯಾಗಿದೆ. ಈತನ ಬಂಧನದಿಂದ 6 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕುಖ್ಯಾತ ಮನೆಗಳ್ಳ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ