ಬಿಬಿಎಂಪಿಗೆ ಅಶೋಕ್ ಎಚ್ಚರಿಕೆ !

Kannada News

28-09-2017

ಬೆಂಗಳೂರು: ನಗರದಲ್ಲಿ ಮಳೆ ಬಂದಾಗ ಯಾವುದೇ ಅನಾಹುತಗಳು ಸಂಭವಿಸದಂತೆ ಸರ್ಕಾರ ಕೂಡಲೇ ಸಮಾರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಅಕ್ಟೋಬರ್ 8 ರೊಳಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಇಲ್ಲವಾದಲ್ಲಿ 9 ರಂದು ಬಿಬಿಎಂಪಿಗೆ ಬೀಗ ಜಡಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಉಂಟಾಗಿರುವ ಮಳೆ ಅನಾಹುತಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬಿಬಿಎಂಪಿ ಕೇಂದ್ರ ಕಚೇರಿಯ ಮುಂದಿರುವ ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ 3 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಡಾಂಬರೀಕರಣದ ಹೆಸರಿನಲ್ಲಿ ಕಬಳಿಸಿದೆ ಎಂದು ಆಪಾದಿಸಿದರು. ಮಳೆಯ ಅನಾಹುತಕ್ಕೊಳಗಾಗಿ ತೊಂದರೆಗೆ ಒಳಗಾಗಿರುವ ಪ್ರತಿ ಮನೆಯ ಯಜಮಾನರಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ನೀಡುವಂತೆ ಆಗ್ರಹ ಪಡಿಸಿದ್ದರು.

ನಗರದ ಪ್ರತಿಷ್ಠಿತ ದೇವತೆ ಅಣ್ಣಮ್ಮ ಗರ್ಭ ಗುಡಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಸರ್ಕಾರ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಎಸ್.ರಘು, ಮುನಿರಾಜು, ವಿಜಯ್ ಕುಮಾರ್, ಬಿ.ಬಿ.ಎಂ.ಪಿ. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಬೆಂಗಳೂರು ನಗರಾಧ್ಯಕ್ಷ ಪಿ.ಎನ್.ಸದಾಶಿವ ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ