ಮಾಹಿತಿ ಬೇಕೆಂದರೆ ಮನೆಗೆ ಬನ್ನಿ !

Kannada News

28-09-2017

ಬೆಂಗಳೂರು: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ತಮ್ಮ ಮನೆಗೆ ಬಂದು ಮಾಹಿತಿ ಪಡೆಯಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ಮಹಾಲಕ್ಷ್ಮಿಲೇಔಟ್‍ ನ ಎಸಿಪಿ ಬಡಿಗೇರ್ ಅವರು ಯಡಿಯೂರಪ್ಪನವರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್‍ ಗೆ ಇದೇ 26ರಂದು ಪತ್ರ ಬರೆದಿರುವ ಯಡಿಯೂರಪ್ಪ, ನಿಮಗೆ ಮಾಹಿತಿ ಬೇಕೆಂದರೆ ನನ್ನ ಮನೆಗೆ ಬಂದು ಯಾವುದೇ ರೀತಿಯ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕೆ ನಾನು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಆದರೆ, ಇಂತಹ ಇಳಿವಯಸ್ಸಿನಲ್ಲಿ ನಾನು ಠಾಣೆಗೆ ಬಂದು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಬಗ್ಗೆ ನನಗೆ ತಿಳಿದಿರುವ ಮಾಹಿತಿಯನ್ನು ತನಿಖಾ ಅಧಿಕಾರಿಗಳ ಮುಂದೆ ಹಂಚಿಕೊಳ್ಳಲು ಸಿದ್ಧನಿದ್ದೇನೆ. 75 ವರ್ಷ ಸಮೀಸುತ್ತಿರುವ ನನ್ನನ್ನು ಠಾಣೆಗೆ ಬಂದು ಮಾಹಿತಿ ನೀಡುವಂತೆ ನೋಟಿಸ್ ನೀಡುವುದು ಸರಿಯೇ ಎಂದು ಎಸಿಪಿ ಬಡಿಗೇರ್ ವಿರುದ್ಧ ಕಿಡಿಕಾರಿದ್ದಾರೆ.

ಐಪಿಸಿ ಸೆಕ್ಷನ್ 160ನೇ ಕಲಂ ಪ್ರಕಾರ ನೀವು ಕಳುಹಿಸಿರುವ ನೋಟಿಸ್‍ ಗೆ ನನ್ನ ವಿಳಾಸ ನಿಮಗೆ ಗೊತ್ತಿದೆ. ನಮ್ಮ ಮನೆಗೆ ಬಂದರೆ ನಾನು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುವೆ. ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅನಗತ್ಯವಾಗಿ ನೋಟಿಸ್ ನೀಡಿ ನನ್ನನ್ನು ಠಾಣೆಗೆ ಬಂದು ಮಾಹಿತಿ ನೀಡುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ನನ್ನ ಮನೆಯ ಕಾರಿಡಾರ್‍ ನಲ್ಲೇ ವಿನಯ್ ಅಪಹರಣಕ್ಕೆ ಸಂಚು ನಡೆದಿತ್ತು ಎಂಬುದು ಆಧಾರ ರಹಿತ ಆರೋಪ. ಮನೆಗೆ ಪ್ರತೀ ದಿನ ನೂರಾರು ಕಾರ್ಯಕರ್ತರು ಬಂದು ಭೇಟಿ ಮಾಡಿ ಹೋಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಯಾರು ಏನು ಮಾಡುತ್ತಾರೆ ಎಂಬುದನ್ನು ವೈಯಕ್ತಿಕವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ. ನಿಮಗೆ ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಎಲ್ಲಾ ರೀತಿಯ ಮಾಹಿತಿ ನೀಡಿದ್ದಾರೆ. ಆದಾಗ್ಯೂ ನನ್ನನ್ನು ಠಾಣೆಗೆ ಬರುವಂತೆ ನೋಟಿಸ್ ನೀಡಿರುವ ಹಿಂದಿನ ಉದ್ದೇಶ ಕಾಣದ ಕೈಗಳ ಷಡ್ಯಂತ್ರವೆಂದು ಆರೋಪಿಸಿದ್ದಾರೆ.

ನಿಮ್ಮ ವಿಚಾರಣೆಯಲ್ಲಿ ನಾನು ಅನಗತ್ಯವಾಗಿ ಹಸ್ತಕ್ಷೇಪಮಾಡುವುದಾಗಲಿ, ಇಲ್ಲವೇ ಯಾವುದೇ ರೀತಿಯ ಪ್ರಭಾವ ಬೀರುವ ಕೀಳುಮಟ್ಟಕ್ಕೆ ಇಳಿಯುವುದಿಲ್ಲ. ಯಾವುದೇ ಅಧಿಕಾರಿ ಬಂದರೂ ನಾನು ಮಾಹಿತಿ ನೀಡಲು ಸಿದ್ದನಿದ್ದೇನೆ. ಬರುವ ಮುನ್ನ ನನಗೆ ಮಾಹಿತಿ ನೀಡಿದರೆ ನಿಮ್ಮ ಆಗಮನಕ್ಕೆ ಎದುರುನೋಡುತ್ತೇನೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ