ಸಂಪತ್ ರಾಜ್ ನೂತನ ಮೇಯರ್ !

Kannada News

28-09-2017

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51ನೆ ಮೇಯರ್ ಆಗಿ ಕಾಂಗ್ರೆಸ್‍ ನ ಸಂಪತ್‍ ರಾಜ್ ಹಾಗೂ 50ನೆ ಉಪಮೇಯರ್ ಆಗಿ ಜೆಡಿಎಸ್‍ ನ ಪದ್ಮಾವತಿ ನರಸಿಂಹಮೂರ್ತಿ ಅವರು ಆಯ್ಕೆಯಾದರು. ಪ್ರತಿಪಕ್ಷಗಳ ಪ್ರತಿಭಟನೆ, ವಿರೋಧ, ಸಭಾತ್ಯಾಗದ ನಡುವೆ ಸಂಪತ್‍ ರಾಜ್ ಹಾಗೂ ಪದ್ಮಾವತಿ ನರಸಿಂಹಮೂರ್ತಿ ಮೇಯರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದರು.  ಬಿಜೆಪಿ ಅವರು ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, ಎಂಟು ಜನ ಬೋಗಸ್ ಮತದಾರರಿದ್ದು, ಇದರಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಆರೋಪಿಸಿ ಎಲ್ಲಾ ಸದಸ್ಯರು ಸಭೆಯಿಂದ ಹೊರನಡೆದ ಪರಿಣಾಮ ಕಾಂಗ್ರೆಸ್‍ ನ ಸಂಪತ್‍ ರಾಜ್, ಜೆಡಿಎಸ್‍ ನ ಪದ್ಮಾವತಿ ಅವರು ಕ್ರಮವಾಗಿ ಮೇಯರ್-ಉಪಮೇಯರ್ ಆಗಿ ಆಯ್ಕೆ ಆಗಿದ್ದನ್ನು ಚುನಾವಣಾಧಿಕಾರಿ ಜಯಂತಿ ಅವರು ಘೋಷಿಸಿದರು.

ಇಂದು ನಡೆದ ಚುನಾವಣೆಯಲ್ಲಿ 198 ಪಾಲಿಕೆ ಸದಸ್ಯರು, 28 ಎಂಎಲ್‍ಎ, 25 ಎಂಎಲ್‍ಸಿ, 5 ಲೋಕಸಭಾ ಸದಸ್ಯರು, 10 ರಾಜ್ಯಸಭಾ ಸದಸ್ಯರು ಮತದಾನಕ್ಕೆ ಅರ್ಹತೆ ಹೊಂದಿದ್ದು, ಬಹುಮತಕ್ಕೆ 134 ಮತಗಳ ಅಗತ್ಯವಿತ್ತು. ಕಾಂಗ್ರೆಸ್ ಬಿಬಿಎಂಪಿ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 109 ಹಾಗೂ ಜೆಡಿಎಸ್ 24, ಪಕ್ಷೇತರರು 7 ಸೇರಿ ಬಹುಮತ ಪಡೆಯುವ ಮೂಲಕ ನಿರೀಕ್ಷೆಯಂತೆ ಮೇಯರ್-ಉಪಮೇಯರ್ ಆಯ್ಕೆ ನಡೆಯಿತು.

ಬೆಳಗ್ಗೆ 8.30 ರಿಂದ 9.30ರೊಳಗೆ ನಾಮಪತ್ರ ಸಲ್ಲಿಸಲು ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಜಯಂತಿ ಅವರು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟರು. ನಂತರ ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು 10 ನಿಮಿಷಗಳ ಅವಕಾಶ ನೀಡಲಾಯಿತು. ಕಾಂಗ್ರೆಸ್‍ನಿಂದ ಮೇಯರ್ ಸ್ಥಾನಕ್ಕೆ ಸಂಪತ್‍ ರಾಜ್, ಬಿಜೆಪಿಯಿಂದ ಮುನಿಸ್ವಾಮಿ, ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಮಮತಾ ವಾಸುದೇವ್, ಜೆಡಿಎಸ್‍ ನಿಂದ ಪದ್ಮಾವತಿ ನರಸಿಂಹಮೂರ್ತಿ ನಾಮಪತ್ರ ಸಲ್ಲಿಸಿದರು.  11.30ಕ್ಕೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು. 11.30ರೊಳಗೆ ಮತದಾನದ ಅರ್ಹತೆ ಪಡೆದವರೆಲ್ಲರೂ ಕೌನ್ಸಿಲ್ ಹಾಲ್‍ ನೊಳಗೆ ಬರಲು ಈ ಮೊದಲೇ ಸೂಚನೆ ನೀಡಲಾಗಿತ್ತು. ತಡವಾಗಿ ಬಂದವರಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಗಿತ್ತು.

ಎಲ್ಲಾ ಮತದಾರರು ಬಂದ ಮೇಲೆ ಕೌನ್ಸಿಲ್ ಹಾಲ್‍ ನ ಬಾಗಿಲು ಹಾಕಿ ಕೈ ಎತ್ತುವ ಮೂಲಕ ಮತದಾನದ ಪ್ರಕ್ರಿಯೆ ನಡೆಸಲಾಯಿತು. ಬಹುಮತ ಪಡೆದ ಸಂಪತ್‍ರಾಜ್ ಮೇಯರ್ ಆಗಿ, ಪದ್ಮಾವತಿ ನರಸಿಂಹಮೂರ್ತಿ ಉಪಮೇಯರ್ ಆಗಿ ಆಯ್ಕೆಯಾದರು ಎಂದು ಘೋಷಿಸಲಾಯಿತು.

ಚುನಾವಣಾ ಪ್ರಾರಂಭಕ್ಕೂ ಮುನ್ನ ಹಲವು ನಾಟಕೀಯ ಬೆಳವಣಿಗೆಗಳು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಯಿತು. ಬೋಗಸ್ ಮತದಾರರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯವರು ಸಭೆಯಿಂದ ಹೊರನಡೆದರು. ಗದ್ದಲ, ಗಲಾಟೆ ನಡುವೆಯೇ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರು ಘೋಷಿಸಿದರು. ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ ನ ಮೇಯರ್ ಅಭ್ಯರ್ಥಿ ಸಂಪತ್‍ರಾಜ್ ಪರ 139 ಮತಗಳು ಬಂದವು. ವಿಪರ್ಯಾಸವೆಂದರೆ ಬಿಜೆಪಿ ಪರ ಮತ ಚಲಾಯಿಸಬೇಕಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಿರ್ಮಲಾಸೀತರಾಮನ್, ಅನಂತ್‍ಕುಮಾರ್, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್, ರಾಮಕೃಷ್ಣ ಅವರು ಮತದಾನಕ್ಕೆ ಗೈರು ಹಾಜರಾಗಿದ್ದರು.

ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸಂಪತ್‍ರಾಜ್ ಅವರ ಮೇಯರ್ ಆಯ್ಕೆ ಹಾಗೂ ಪದ್ಮಾವತಿ ನರಸಿಂಹಮೂರ್ತಿ ಅವರ ಉಪಮೇಯರ್ ಆಯ್ಕೆಯನ್ನು ಕೈ ಎತ್ತುವ ಮೂಲಕ ಅಧಿಕೃತಗೊಳಿಸಿದರು. ಇವರಿಬ್ಬರ ಆಯ್ಕೆಯನ್ನು ಚುನಾವಣಾಧಿಕಾರಿ ಜಯಂತಿ ಅವರು ಘೋಷಿಸಿದರು. ನಿರ್ಗಮಿತ ಮೇಯರ್ ಜಿ.ಪದ್ಮಾವತಿ ಹಾಗೂ ಉಪಮೇಯರ್ ಆನಂದ್ ಅವರು ನೂತನ ಮೇಯರ್-ಉಪಮೇಯರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

 


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಸಂಪತ್ ರಾಜ್ ನೂತನ ಮೇಯರ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ