ಮೇಯರ್: ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ !

Kannada News

28-09-2017

ಬೆಂಗಳೂರು: ಮೇಯರ್ ಸ್ಥಾನದ ಚುನಾವಣೆಗೆ ಸಂಪತ್ ರಾಜ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸೇರಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಹಾಗಾಗಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಹಿಂದಿನ ಮೇಯರ್‌ಗಳಂತೆಯೇ ಹೊಸ ಮೇಯರ್‌ ಕೂಡ ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ. ಮಳೆ ಬರುತ್ತಿರುವ ಕಾರಣ ಸಮಸ್ಯೆ ನಿಭಾಯಿಸುವ ಹೊಣೆಗಾರಿಕೆ ಇದೆ. ರಸ್ತೆ ಗುಂಡಿ ಮುಚ್ಚುವುದು, ಟಾರ್ ಹಾಕಿಸುವುದು, ಚುನಾವಣಾ ವರ್ಷವಾಗಿರುವ ಕಾರಣ ಅವರು ಹೆಚ್ಚು ಕೆಲಸ ಮಾಡಬೇಕಾಗಲಿದೆ. ಕಾಮಗಾರಿಗಳ ಗುಣಮಟ್ಟ ಕಾಪಾಡಬೇಕಿದೆ. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಅನಿಷ್ಠಾನಕ್ಕೆ ತರಬೇಕಿದೆ ಎಂದರು.

ಕಳೆದ ಬಾರಿ ಜೆಡಿಎಸ್‌ನೊಂದಿಗೆ ಸಣ್ಣ-ಪುಟ್ಟ ಭಿನ್ನಮತವಿತ್ತು. ಆದರೆ, ಈ ಬಾರಿ ನಾವು ಕುಳಿತು ಮಾತುಕತೆ ಮೂಲಕ ಅವನ್ನು ಪರಿಹರಿಸಿಕೊಂಡಿದ್ದೇವೆ. ಜೆಡಿಎಸ್‌ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಸಂಪತ್ ರಾಜ್‌ ಗೂ ಸೂಚನೆ ನೀಡಿದ್ದೇವೆ. ಹಾಗಾಗಿ ಈ ಬಾರಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಅಪಸ್ವರ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ