‘ಪುನೀತ ಯಾತ್ರೆಗೆ’ ಚಾಲನೆ

Kannada News

27-09-2017

ಬೆಂಗಳೂರು: ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಪ್ರವಾಸೋದ್ಯಮ ಇಲಾಖೆ ಮೂಲಕ ರಾಜ್ಯ ಸರ್ಕಾರ ರೂಪಿಸಿರುವ ‘ಪುನೀತ ಯಾತ್ರೆ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಪುನೀತ ಯಾತ್ರೆ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಪ್ರಮುಖ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ರಿಯಾಯಿತಿ ದರಗಳಲ್ಲಿ ಕರೆದೊಯ್ಯಲು ಈ ಯೋಜನೆಯನ್ನು ರೂಪಿಸಲಾಗಿದೆ. ಎಲ್ಲಾ ಧರ್ಮದ ಪುಣ್ಯ ಕ್ಷೇತ್ರಗಳನ್ನು ಒಳಗೊಂಡಂತೆ ರಾಜ್ಯ ಮತ್ತು ಹೊರ ರಾಜ್ಯಗಳ 21 ಮಾರ್ಗಗಳನ್ನು ಪ್ರವಾಸೋದ್ಯಮ ಇಲಾಖೆ ಈಗಾಗಲೇ ಗುರುತಿಸಿದೆ.

ಮೊದಲ ವರ್ಷ 1 ಲಕ್ಷ 38 ಸಾವಿರ ಪ್ರವಾಸಿಗರನ್ನು ಪುನೀತ ಯಾತ್ರೆಗೆ ಕರೆದೊಯ್ಯುವ ಗುರಿಯನ್ನು ಸರ್ಕಾರ ಹಮ್ಮಿಕೊಂಡಿದೆ. ಪ್ರವಾಸ ಕೈಗೊಳ್ಳಲಿರುವ ಪ್ರತಿಯೊಬ್ಬರಿಗೆ 2,844 ರೂ. ನೆರವನ್ನು ಸರ್ಕಾರ ನೀಡಲಿದ್ದು, ಉಳಿದ ವೆಚ್ಚವನ್ನು ಪ್ರವಾಸಿಗರು ಬರಿಸಬೇಕಾಗಿದೆ

ಈ ಯೋಜನೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ರೂಪಿಸಿರುವ ವಿನೂತನ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಧರ್ಮಿಯರೂ ತಮ್ಮ ತಮ್ಮ ಧಾರ್ಮಿಕ ಸ್ಥಳಗಳಿಗೆ ಮಾತ್ರವಲ್ಲದೆ, ಪಾರಂಪರಿಕ ಹಾಗೂ ಐತಿಹಾಸಿಕ ಸ್ಥಳಗಳಿಗೆ ರಿಯಾಯಿತಿ ದರದಲ್ಲಿ ಪ್ರವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಹಿಂದೂಗಳಲ್ಲದೆ, ಮುಸಲ್ಮಾನರು, ಅಲ್ಪಸಂಖ್ಯಾತರು, ಸಿಖ್ಖರು, ಜೈನರು, ಬೌದ್ಧ ಧರ್ಮದವರು ಸೇರಿದಂತೆ ಎಲ್ಲಾ ಧರ್ಮಿಯರು ಈ ಯೋಜನೆಯ ಲಾಭವನ್ನು ಪಡೆದುಕೊಂಡು ಧಾರ್ಮಿಕ ಮತ್ತು ಐತಿಹಾಸಿಕ ಸ್ಥಗಳಿಗೆ ಭೇಟಿ ನೀಡಬಹುದಾಗಿದೆ ಎಂದರು.

1 ಲಕ್ಷ 38 ಸಾವಿರ ಜನರನ್ನು ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯುವ ಗುರಿ ಹೊಂದಲಾಗಿದೆ. ಇದು ಇಡೀ ವರ್ಷದ ಕಾರ್ಯಕ್ರಮವಾಗಿದ್ದು, ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಇನ್ನು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕರ್ನಾಟಕ ಹಾಗೂ ಇತರೆ ರಾಜ್ಯಗಳ 21 ತಾಣಗಳಿಗೆ ರಿಯಾಯಿತಿ ದರದಲ್ಲಿ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಖಾಸಗಿಯವರಿಗೆ ಹೋಲಿಕೆ ಮಾಡಿದರೆ ಶೇ. 25 ರಷ್ಟು ರಿಯಾಯಿತಿ ದರದಲ್ಲಿ ಪುನೀತ ಯಾತ್ರೆಯ ಅಡಿಯಲ್ಲಿ ಧಾರ್ಮಿಕ, ಪಾರಂಪರಿಕ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ ಎಂದರು.

ಪ್ರಯಾಣ ಮತ್ತು ವಸತಿ ಸೌಲಭ್ಯವನ್ನು ಇಲಾಖೆ ವ್ಯವಸ್ಥೆ ಮಾಡಲಿದ್ದು, ಊಟದ ವ್ಯವಸ್ಥೆಯನ್ನು ಪ್ರವಾಸಿಗರು ಮಾಡಿಕೊಳ್ಳಬೇಕಾಗುತ್ತದೆ. ವಿವಿಧ ಧರ್ಮಗಳ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಶೀಘ್ರ ದರ್ಶನ’ ವ್ಯವಸ್ಥೆಯನ್ನು ಮಾಡಿಸುತ್ತೇವೆ ಎಂದರು.

21 ತಾಣಗಳ ಪೈಕಿ ಇಂದಿನಿಂದ 9 ತಾಣಗಳಿಗೆ ಪುನೀತ ಯಾತ್ರೆ ಆರಂಭವಾಗಿದ್ದು, 2ನೇ ಹಂತದಲ್ಲಿ 12 ತಾಣಗಳಿಗೆ ಪ್ರವಾಸ ಏರ್ಪಡಿಸಲಾಗುವುದು. ಈ ಪೈಕಿ 8 ಹೊರ ರಾಜ್ಯಗಳ ತಾಣಗಳಾಗಿವೆ .ಬೆಂಗಳೂರು ಮತ್ತು ಗುಲ್ಬರ್ಗಾದಿಂದ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ