ಅಧಿಕಾರಿಗಳ ದಸರಾ..!

Kannada News

26-09-2017

ದಸರಾ ಇನ್ನೆರಡು ದಿನ ಎನ್ನುವಾಗಲೇ ಉಪಸಮಿತಿಗಳಿಗೆ ತನ್ನ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ. ಆದರೆ ನಾಮಮಾತ್ರದ ಅಧ್ಯಕ್ಷ-ಸದಸ್ಯರಾಗಿರುವವರಿಗೆ ಈ ಹುದ್ದೆಗಳು ನುಂಗಲಾಗದ-ಉಗಿಯಲಾಗದ ತುಪ್ಪವಾಗಿಬಿಟ್ಟಿದೆ.

ಯಾವ ಕಾರ್ಯಕ್ರಮ, ಯಾರಿಂದ, ಎಷ್ಟು ಹಣಕ್ಕೆ ಎಂಬುದೆಲ್ಲವನ್ನ ಅಧಿಕಾರಿಗಳೇ ನಿರ್ಧರಿಸಿಬಿಟ್ಟಿದ್ದು, ತೋರಿಕೆಗಾಗಿ ನೇಮಕವಾಗಿರುವ ಉಪಸಮಿತಿ ಅಧ್ಯಕ್ಷರು-ಸದಸ್ಯರಿಗೆ ಯಾವ ಅಧಿಕಾರವೂ ಇಲ್ಲ. ಕಾಟಾಚಾರಕ್ಕೆ ನಡೆಯುವ ಸಭೆಗೆ ಹೋಗಿ ಉಪ್ಪಿಟ್ಟು ತಿಂದು ಕಾಫಿ ಕುಡಿದು, ಮಾಧ್ಯಮಗಳಿಗೆ ಪೋಸು ಕೊಡುವುದನ್ನ ಹೊರತಾಗಿಸಿದರೆ ಇವರಿಗೆ ಇನ್ನೇನು ಇಲ್ಲ. ಮೆರವಣಿಗೆ ನೋಡಲು ಒಂದಷ್ಟು ಪಾಸುಗಳಷ್ಟೇ ಇವರಿಗೆ ಸಿಗುವುದು.

ಏನೇನು ಕೆಲಸವಿಲ್ಲದಿದ್ದರೂ, ಉಪಸಮಿತಿಗಳಿಗೆ ಅಧ್ಯಕ್ಷರಾಗಿದ್ದು ಏಕೆ ಎಂಬ ಪ್ರಶ್ನೆಗಳು ಅವರಲ್ಲೇ ಇವೆ. ಎಲ್ಲವೂ ಅಧಿಕಾರಿಗಳ ದಸರಾ ಆಗುತ್ತಿದೆ, ನಮ್ಮದೇನೂ ಇಲ್ಲವೇ ಇಲ್ಲ ಇಲ್ಲಿ ಎಂದು ಕೆಲ ಸಮಿತಿಗಳ ಅಧ್ಯಕ್ಷರು ರಾಜೀನಾಮೆ ಒಗೆದಿದ್ದರೆ, ಇನ್ನು ಕೆಲವರು ನಾವೂ ರಾಜೀನಾಮೆ ಕೊಡಬೇಕೆನ್ನಿಸಿದೆ, ಆದರೆ ಪಕ್ಷದ ಮತ್ತು ಸರ್ಕಾರದ ಮರ್ಯಾದೆ ಪ್ರಶ್ನೆ ಎಂದು ಸುಮ್ಮನಿದ್ದೇವೆ ಎಂಬ ಕಹಿಸತ್ಯವನ್ನೇಳಿಕೊಂಡು, ತಮ್ಮ ಮರ್ಯಾದೆಯನ್ನ ಅಡವಿಟ್ಟಿದ್ದಾರೆ.

ಸಮಿತಿಗಳ ಅಧ್ಯಕ್ಷರ ಸಣ್ಣ ಮಾತಿಗೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಸಭೆಗೆ ಬನ್ನಿ, ಫೋಟೋ ತೆಗೆಸಿಕೊಂಡು ಹೋಗಿ ಎಂಬ ಕಠೋರ ನುಡಿಗಳನ್ನಾಡುತ್ತಾ, ತಮ್ಮದೇ ದರ್ಬಾರ್ ನಡೆಸುತ್ತಿರುವುದು ಸಾಗಿದೆ. ಇದು ಜನರ ದಸರಾ ಅಲ್ಲ, ಅಧಿಕಾರಿಗಳ ದಸರಾ ಎಂಬುದು ಮಾತ್ರ ಬೇಸರದ ಸಂಗತಿ ಎಂದಿದ್ದಾರೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ