ಬೆಂಬಿಡದ ಡಿನೋಟಿಫಿಕೇಷನ್ !

Kannada News

26-09-2017 409

ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣದ ಸಂಬಂಧ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯಿಂದ ನಿರಾಳರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಮತ್ತೊಂದು ಶಾಕ್ ನೀಡಲು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಮುಂದಾಗಿದ್ದಾರೆ.

ಶಿವರಾಮ್‍ ಕಾರಂತ ಬಡವಾಣೆಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡಿರುವ ಎಸಿಬಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವಂತೆ ಮನವಿ ಮಾಡಿದ್ದು, ಅಧಿಕಾರಿಗಳು ಸಲ್ಲಿಸಿರುವ ಪತ್ರದ ಸಾಧಕ-ಬಾಧಕಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ಬಳಿ ಚರ್ಚೆ ನಡೆಸಿ ಕಾನೂನು ಸಲಹೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವರಾಮ್‍ ಕಾರಂತ ಬಡವಾಣೆಯ ಡಿನೋಟಿಫಿಕೇಷನ್ ಪ್ರಕರಣದ ಸಂಬಂಧ ಈಗಾಗಲೇ ಒಂದು ಹಂತದ ತನಿಖೆ ಮಾಡಲಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಿರುವುದು ಸರಿಯಲ್ಲ. ಅಷ್ಟೇ ಅಲ್ಲದೇ ಆರೋಪಿತರು ಪ್ರಭಾವಿ ವ್ಯಕ್ತಿಯಾಗಿದ್ದು, ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದಾರೆ, ಸಾಕ್ಷಿಗಳಿಗೆ ಬೆದರಿಕೆ ಹಾಗು ದಾಖಲಾತಿಗಳನ್ನು ನಾಶ ಮಾಡುವ ಸಾಧ್ಯತೆಯಿರುವುದನ್ನು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿತ್ತು. ಪ್ರಕರಣ ಕುರಿತು ಹೆಚ್ಚಿನ ತನಿಖೆ ಮಾಡುವ ಅಗತ್ಯವಿರುವುದರಿಂದ ಕೂಡಲೇ ತಡೆಯಾಜ್ಞೆ ತೆರುವುಗೊಳಿಸಲು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲು ಮನವಿ ಮಾಡಲಾಗಿದೆ.

ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಇದೇ ವಾರದಲ್ಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ