ಕನಸು ಕಂಡರೆ ಸಾಕಾಗಲ್ಲ..!

Kannada News

26-09-2017 480

ಬೆಂಗಳೂರು: ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಡಿಸೆಂಬರ್ ಅಂತ್ಯದ ವೇಳೆಗೆ ನವ ಕರ್ನಾಟಕ 2025 ಮುನ್ನೋಟದ ಸಮಗ್ರ ವರದಿ ಸಿದ್ಧವಾಗಲಿದ್ದು, ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಮುನ್ನೋಟದ ಪ್ರಮುಖ ಅಂಶಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನವ ಕರ್ನಾಟಕ 2025 ಮುನ್ನೋಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿ ಮುನ್ನೋಟದ ವರದಿ ಸಿದ್ಧಪಡಿಸಲಾಗುವುದು. ನವ ಕರ್ನಾಟಕ ಮುನ್ನೋಟ ಯೋಜನೆಯಲ್ಲಿ ಜನರೂ ಭಾಗಿಯಾಗಬೇಕು. ಜನರ ಸಮಸ್ಯೆ, ನಿರೀಕ್ಷೆ ಕೇಳಬೇಕು. ಜನ ಸಾಮಾನ್ಯರ ಜೊತೆಗೆ ಚುನಾಯಿತ ಪ್ರತಿನಿಧಿಗಳು ಎಲ್ಲ ಜಿಲ್ಲೆಗಳಿಗೆ ತೆರಳಿ ಜನ ಸಾಮಾನ್ಯರ ಅಭಿಪ್ರಾಯ ಆಲಿಸಬೇಕು ಎಂದರು.

ನಮಗೆ ಜನರ ಧ್ವನಿ ಮತ್ತು ಅವರ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ. ಇದು ನಮ್ಮ ಕನಸು ಮತ್ತು ಬದ್ಧತೆಯಾಗಿದೆ. ಕೇವಲ ಕನಸು ಕಂಡರೆ ಸಾಲದು. ಅದು ನನಸಾಗಬೇಕಾದರೆ ಒಂದು ಮುನ್ನೋಟ ಅಗತ್ಯ. ಅದಕ್ಕಾಗಿಯೇ ನವ ಕರ್ನಾಟಕ 2025 ರ ಮುನ್ನೋಟ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜನರಿಗೆ ಪ್ರಣಾಳಿಕೆ ಮೂಲಕ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಈ ಅವಧಿಯಲ್ಲಿ ರಾಜ್ಯ ಪ್ರಗತಿ ಸಾಕಷ್ಟು ಪ್ರಗತಿ ಸಾಧಿಸಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಹಲವಾರು ಘೋಷಣೆಗಳನ್ನು ಮಾಡಿದ್ದೇವೆ. ಕರ್ನಾಟಕ ಹಸಿವು ಮುಕ್ತ, ಗುಡಿಸಲು ಮುಕ್ತ, ಅಪೌಷ್ಟಿಕತೆ ಮುಕ್ತ ರಾಜ್ಯ ಆಗಬೇಕು ಎಂಬುದು ನಮ್ಮ ನಿಲುವು ಮತ್ತು ಘೋಷಣೆಯಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯಲ್ಲಿ ತಲಾ ಏಳು ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ನೀಡುತ್ತಿದ್ದೇವೆ. ಇದರ ಪರಿಣಾಮ ಭೀಕರ ಬರಗಾಲದಲ್ಲೂ ಜನ ಗುಳೆ ಹೋಗುತ್ತಿಲ್ಲ. ಗುಳೆ ಹೋಗುವ ಸಮಸ್ಯೆ ಮೊದಲು ಸಾಮಾನ್ಯವಾಗಿತ್ತು. ಈಗ ಕಡಿಮೆ ಆಗಿದೆ.  ಹಸಿವಿನಿಂದ ಯಾರೂ ಸತ್ತ ನಿದರ್ಶನ ಇಲ್ಲ. ಕರ್ನಾಟಕ ಹಸಿವು ಮುಕ್ತ ಆಗಿರುವುದಕ್ಕೆ ಇದು ಉದಾಹರಣೆ ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡರು.

ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಕೆನೆಭರಿತ ಹಾಲು ಕೊಡುತ್ತಿದ್ದೇವೆ. ಇದರಿಂದ ಅಪೌಷ್ಟಿಕತೆ ಸಮಸ್ಯೆ ಸಹ ಕಡಿಮೆಯಾಗಿದೆ. ನಾಲ್ಕೂವರೆ ವರ್ಷದಲ್ಲಿ 12 ಲಕ್ಷ ಮನೆಗಳನ್ನು ಕಟ್ಟಿದ್ದೇವೆ. ರಾಜ್ಯವನ್ನು ಗುಡಿಸಲು ಮುಕ್ತ ಮಾಡುವ ಪ್ರಯತ್ನ ಇದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನೀರಾವರಿಗೆ ಯೋಜನೆಗಳಿಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ವೆಚ್ವ ಮಾಡುತ್ತಿದ್ದೇವೆ. 1.75 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದೇವೆ. ಇದು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ವಿನೂತನ ಕಾರ್ಯಕ್ರಮ. ಎಪಿಎಂಸಿಗಳಲ್ಲಿ ಆನ್ ಲೈನ್ ಪದ್ಧತಿ ಜಾರಿಗೆ ತಂದು ದೇಶಕ್ಕೇ ಮಾದರಿಯಾಗಿದ್ದೇವೆ. ರೇಷ್ಮೆ ಗೂಡು ಮಾರಾಟಕ್ಕೂ ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದರಿಂದ ಮಧ್ಯವರ್ತಿಗಳ ಹಾವಳಿ ನಿವಾರಣೆಯಾಗಿ ರೈತರಿಗೆ ಭಾರಿ ಅನುಕೂಲವಾಗಿದೆ ಎಂದು ಹೇಳಿದರು.

ಬಂಡವಾಳ ಹೂಡಿಕೆಯಲ್ಲೂ ರಾಜ್ಯ ಮೊದಲ ಸ್ಥಾನದಲ್ಲಿದೆ. ಕೈಗಾರಿಕೆ ಸ್ನೇಹಿ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ. ಪರಿಶಿಷ್ಟರ ಕಲ್ಯಾಣ ವಿಚಾರದಲ್ಲಿಯೂ ನಾವು ಹಿಂದೆ ಬಿದ್ದಿಲ್ಲ. ಅವರಿಗಾಗಿ ವಿಶೇಷ ಕಾಯಿದೆ ಜಾರಿಗೆ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಇದರಿಂದ ಪರಿಶಿಷ್ಟರ ಕಾಲೋನಿಗಳ ಸ್ವರೂಪವೇ ಬದಲಾಗಿದೆ ಎಂದು ತಿಳಿಸಿದರು.

ಬಯಲು ಬಹಿರ್ದೆಸೆ ಮುಕ್ತ ರಾಜ್ಯಕ್ಕಾಗಿ 30 ಲಕ್ಷಕ್ಕೂಹೆಚ್ವು ಶೌಚಾಲಯಗಳನ್ನು ನಿರ್ಮಿಸಿದ್ದು, ಬರುವ 2018ರ ಅಕ್ಟೋಬರ್ 2ಕ್ಕೆ 50 ಲಕ್ಷ ಶೌಚಾಲಯಗಳೊಂದಿಗೆ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ