ಆರೋಗ್ಯ ಮೊದಲು: ರಾಜಕೀಯ ಇದ್ದಿದ್ದೇ !

Kannada News

25-09-2017

ಬೆಂಗಳೂರು: ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜಕೀಯವನ್ನೇ ಉಸಿರಾಡಿರುವ, ಮಾಜಿ ಪ್ರಧಾನಿ ದೇವೇಗೌಡ ಇದೀಗ, ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾದ ಪುತ್ರ ಕುಮಾರಸ್ವಾಮಿ ಅವರಿಗೆ, ಸಧ್ಯಕ್ಕೆ ರಾಜಕೀಯದ ಚಿಂತೆ ನಿನಗೆ ಬೇಡ. ನೆಮ್ಮದಿಯಾಗಿರು ಎಂದು ಭೋಧಿಸಿದ್ದಾರೆ.

ಇಂದು ಬೆಳಿಗ್ಗೆ ಅಪೋಲೋ ಆಸ್ಪತ್ರೆಯಲ್ಲಿರುವ ಪುತ್ರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು, ರಾಜಕೀಯದ ಪ್ರಸಕ್ತ ವಿದ್ಯಮಾನಗಳ ಕುರಿತು ಪ್ರಸ್ತಾಪಿಸಲು ಯತ್ನಿಸಿದಾಗ, ಕೈ ಅಡ್ಡ ಆಡಿಸಿದ ದೇವೇಗೌಡ, ಆ ಕುರಿತು ಯಾವ ಚಿಂತೆಯೂ ಬೇಡ. ಅದರ ಪಾಡಿಗೆ ಅದು ನಡೆಯುತ್ತದೆ ಎಂದು ಹೇಳಿದ್ದಾರೆ. ಮೊದಲು ನೀನು ನಿನ್ನ ಆರೋಗ್ಯದ ಮೇಲೆ ಗಮನ ಹರಿಸು, ಆನಂತರ ರಾಜಕೀಯ ಇದ್ದಿದ್ದೇ. ಹೊರಗೇನೇ ಇದ್ದರೂ ನಾವು ನೋಡಿಕೊಳ್ಳುತ್ತೇವೆ. ನೀನು ಆರೋಗ್ಯದ ಮೇಲೆ ಕಾಳಜಿ ಇಡು ಸಾಕು ಎಂದು ದೇವೇಗೌಡರು ಮಗನ ಬಳಿ ಮಾತನಾಡಿದ್ದಾರೆ.

ಪಕ್ಷ ಕಟ್ಟಲು ದುಡಿಯಬೇಕಾದವರು ನಾವು. ಆದರೆ ನೀವು ಈ ವಯಸ್ಸಿನಲ್ಲಿ ಕಷ್ಟಪಡಬೇಕಾಗಿದೆ ಎಂದು ಕುಮಾರಸ್ವಾಮಿ ಮೆಲ್ಲಗೆ ಹೇಳಿದರಾದರೂ, ಯಾರು ಯಾವ ಕಾಲದಲ್ಲಿ ಏನೇನು ಮಾಡಬೇಕೋ ಮಾಡಿಕೊಂಡು ಹೋಗೋಣ. ನೀನೀಗ ಗುಣ ಮುಖನಾಗುವತ್ತ ಗಮನ ಹರಿಸು. ರಾಜಕೀಯದ ಚಿಂತೆ ಮಾಡಬೇಡ ಎಂದು ದೇವೇಗೌಡರು ಹೇಳಿದರು.

ತದ ನಂತರ ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಗುಣಮುಖರಾಗುತ್ತಿದ್ದಾರೆ. ಅವರಿಗೆ ಹೃದಯದ ಟಿಶ್ಯೂ ವಾಲ್ವ್ ಬದಲಿಸಿ ನಲವತ್ತೆಂಟು ಗಂಟೆ ಕಳೆದಿದೆ ಎಂದರು. ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆಯಾಗಿದೆ. ಸಧ್ಯಕ್ಕೆ ಯಾರೂ ಅವರನ್ನು ಭೇಟಿ ಮಾಡುವುದು ಬೇಡ. ಮೊದಲು ಅವರು ಸಂಪೂರ್ಣ ಗುಣಮುಖರಾಗಲಿ. ನಂತರ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದರು.

ಹೊರಗಡೆ ವಿಚಾರವನ್ನು ಅವರು ಕೇಳುತ್ತಾರೆ. ಆದರೆ ಅದೆಲ್ಲವನ್ನೂ ಮರೆಯಲು ಹೇಳಿದ್ದೇನೆ. ವೈದ್ಯರು ಅವರನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿವರಿಸಿದರು. ಪ್ರತಿದಿನ ನಾನು ವೈದ್ಯರ ಸಂಪರ್ಕದಲ್ಲಿ ಇದ್ದೇನೆ. ಆಸ್ಪತ್ರೆಯಿಂದ ಬಿಡುಗಡೆಯಾಗಲೂ ನಾಲ್ಕೈದು ದಿನಗಳು ಬೇಕಾಗಬಹುದು. ಒಂದೆರಡು ದಿನಗಳಲ್ಲಿ ಅವರನ್ನು ವಾರ್ಡ್‍ಗೆ ಶಿಫ್ಟ್ ಮಾಡುತ್ತಾರೆ ಎಂದು ವಿವರಿಸಿದರು.

ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪತಿ ಕುಮಾರಸ್ವಾಮಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮಾತನಾಡುತ್ತಿದ್ದಾರೆ ಎಂದರು. ಅವರಿಗೀಗ ಪೂರ್ಣ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ತುಂಬ ಜನ ಭೇಟಿಯಾಗಲು ಶುರು ಮಾಡಿದರೆ ಅವರಿಗೆ ಇನ್ಪೆಕ್ಷನ್ ಆಗುತ್ತದೆ. ಹೀಗಾಗಿ ಅವರು ಯಾವುದೇ ತೊಂದರೆಯಿಲ್ಲದೆ ಚೇತರಿಸಿಕೊಳ್ಳಲಿ ಎಂದರು.

ರಾಜ್ಯದ ಜನ ಅವರು ಬೇಗ ಗುಣಮುಖರಾಗಲಿ ಎಂದು ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ಅವರ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನುಡಿದ ಅವರು, ಮುಂದಿನ ಕೆಲವೇ ದಿನಗಳಲ್ಲಿ ಎಲ್ಲವೂ ಎಂದಿನಂತೆ ಸಹಜವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ