ಎದೆಗೆ ಚೂರಿ ಇರಿದುಕೊಂಡ ರೌಡಿ !

Kannada News

25-09-2017

ಬೆಂಗಳೂರು: ಶ್ರೀರಾಮಪುರದ ಕ್ರೈಸ್ತರ ಕಾಲೋನಿಯಲ್ಲಿ ಇಂದು ಬೆಳಿಗ್ಗೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡ ರೌಡಿ ಅರವಿಂದ್ ಕ್ಲಿಂಟನ್ ಎದೆಗೆ ಚಾಕುವಿನಿಂದ ಇರಿದುಕೊಂಡು ಮೃತಪಟ್ಟಿದ್ದಾನೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕ್ಲಿಂಟನ್ (30) ಕುಡಿತದ ಚಟ ಅಂಟಿಸಿಕೊಂಡಿದ್ದು, ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಪ್ರತಿ ದಿನ ಪತ್ನಿಯ ಜತೆ ಜಗಳ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಕ್ಲಿಂಟನ್ ನ ಕಿರುಕುಳದಿಂದ ಆತನ ಪತ್ನಿ ಮಾಯಾ ಬೇಸತ್ತಿದ್ದಳು.

ಕ್ಲಿಂಟನ್ ಬೆಳಿಗ್ಗೆ 10ರ ವೇಳೆ ಕೆಲಸಕ್ಕೆ ಹೋಗದೆ ಮನೆಗೆ ಬಂದು ಪತ್ನಿಯ ಜತೆ ಜಗಳ ಮಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಅಣ್ಣನಿಗೆ ಕರೆ ಮಾಡಿದ ಆತ ಜಗಳ ಸಾಕಾಗಿದೆ, ನಾನು ಬದುಕಿರುವುದಿಲ್ಲ ಎಂದು ಹೇಳಿದ್ದಾನೆ.

ಕ್ಲಿಂಟನದ್ದು ಯಾವಾಗಲೂ ಇದೇ ರೀತಿಯ ವರ್ತನೆ ಎಂದು ತಿಳಿದು ಸಹೋದರ ಸುಮ್ಮನಾಗಿದ್ದು, ಇದಾದ ಸ್ವಲ್ಪ ಹೊತ್ತಿನಲ್ಲೇ ಕ್ಲಿಂಟನ್ ಎದೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಗಲಭೆ, ಜಗಳ, ದೊಂಬಿ ಸೇರಿದಂತೆ 4ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕ್ಲಿಂಟನ್ ಶ್ರೀರಾಮಪುರ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ. ಪ್ರಕರಣ ದಾಖಲಿಸಿರುವ ಶ್ರೀರಾಮಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ