ಗೌರಿ ಹತ್ಯೆ: ಶಂಕಿತರಿಬ್ಬರ ವಿಚಾರಣೆ !

Kannada News

25-09-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಅಧಿಕಾರಿಗಳು ಇಬ್ಬರು ಶಂಕಿತ ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರದ ನಿವಾಸದ ಬಳಿ ಗೌರಿ ಲಂಕೇಶ್ ಅವರ ಹತ್ಯೆ ನಡೆದ ದಿನದಂದು ಅದೇ ಸ್ಥಳದಲ್ಲಿ ನಾಲ್ಕೈದು ಬಾರಿ ಅನುಮಾನಾಸ್ಪದವಾಗಿ ಓಡಾಡಿದ ಇಬ್ಬರನ್ನು ಶಂಕಿತರನ್ನು ನಿನ್ನೆ ರಾತ್ರಿ ಅಧಿಕಾರಿಗಳು ವಶಕ್ಕೆ ಪಡೆದು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ವಶಕ್ಕೆ ಪಡೆದುಕೊಂಡಿರುವ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಗೌರಿ ಲಂಕೇಶ್ ಅವರ ನಿವಾಸ ಹಾಗೂ ಅಕ್ಕಪಕ್ಕದ ಮನೆ ಹಾಗೂ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆ ಸಂಬಂಧ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಹಂತಕರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಅನುಮಾನಾಸ್ಪವಾಗಿ ಕಂಡುಬರುವ ಎಲ್ಲಾ ಸಂಗತಿಗಳನ್ನು ಆದರಿಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರತಿ ದಿನ ಬೆಳಿಗ್ಗೆ ಸಭೆ ನಡೆಸುವ ಅಧಿಕಾರಿಗಳು ಇಡೀ ದಿನದ ಕಾರ್ಯಾಚರಣೆಯ ವಿವರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದು, ಇಲ್ಲಿಯವರೆಗೆ ತನಿಖೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆಯಾದರೂ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ