ಕಲ್ಯಾಣಿಯಲ್ಲಿ ಮೃತಪಟ್ಟ ವಿದ್ಯಾರ್ಥಿ !

Kannada News

25-09-2017

ಬೆಂಗಳೂರು: ನಗರದ ಹೊರವಲಯದ ಕನಕಪುರದ ರಾವಗೊಂಡ್ಲು ಬೆಟ್ಟದ ಬಳಿ ಎನ್.ಸಿ.ಸಿ ಕ್ಯಾಂಪ್‍ ಗೆ ತೆರಳಿದ್ದ ಜಯನಗರದ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ಹನುಮಂತನಗರದ ವಿಶ್ವಾಸ್ (17)ಎಂದು ಮೃತ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿಶ್ವಾಸ್ ಸೇರಿ 25 ವಿದ್ಯಾರ್ಥಿಗಳನ್ನು ನಿನ್ನೆ ಎನ್.ಸಿ.ಸಿ ಕ್ಯಾಂಪ್‍ ಗೆ ಕನಕಪುರದ ರಾವಗೊಂಡ್ಲು ಬೆಟ್ಟಕ್ಕೆ ಕರೆದೊಯ್ಯಲಾಗಿತ್ತು.

ರಾವಗೊಂಡ್ಲು ಬೆಟ್ಟದ ಬಳಿಯ ಕಲ್ಯಾಣಿಯಲ್ಲಿ ಮಧ್ಯಾಹ್ನ ಬಿಸಿಲಿನ ತಾಪ ತಾಳಲಾರದೇ ಕ್ಯಾಂಪ್‍ ಗೆ ಬಂದಿದ್ದ ಬಹುತೇಕ ವಿದ್ಯಾರ್ಥಿಗಳು ಈಜಲು ಹೋಗಿದ್ದಾರೆ. ಸ್ನೇಹಿತರ ಜೊತೆ ಈಜುತ್ತಿದ್ದ ವಿಶ್ವಾಸ್ ಸೆಲ್ಫಿ ತೆಗೆಸಿಕೊಂಡಿದ್ದು ಆನಂತರ ಮುಳುಗಿ ಮೃತಪಟ್ಟಿದ್ದಾನೆ.

ಆತ ಮೃತಪಟ್ಟಿರುವುದು ಜೊತೆಯಲ್ಲಿದ್ದ ವಿದ್ಯಾರ್ಥಿಗಳ ಗಮನಕ್ಕೆ ಬಂದಿಲ್ಲ ಸ್ವಲ್ಪ ಸಮಯದ ನಂತರ ಕಲ್ಯಾಣಿಯಿಂದ ಹೊರಬಂದ ವಿದ್ಯಾರ್ಥಿಗಳಿಗೆ ವಿಶ್ವಾಸ್‍ ನ ಬಟ್ಟೆಗಳು ಮಾತ್ರ ಕಾಣಿಸಿದ್ದು ಆತನ ಸುಳಿವಿರಲಿಲ್ಲ. ಆತಂಕಗೊಂಡ ವಿದ್ಯಾರ್ಥಿಗಳು ಎಷ್ಟೇ ಹುಡುಕಾಟ ನಡೆಸಿದರೂ ವಿಶ್ವಾಸ್ ಪತ್ತೆಯಾಗಲಿಲ್ಲ.

ಸುದ್ದಿ ತಿಳಿದ ತಕ್ಷಣ ಮುಳುಗು ತಜ್ಞರೊಂದಿಗೆ ಧಾವಿಸಿದ ಕಗ್ಗಲಿಪುರ ಪೊಲೀಸರು ಕಲ್ಯಾಣಿಯಲ್ಲಿ ಶೋಧಿಸಿದಾಗ ಸಂಜೆ ವೇಳೆಗೆ ವಿಶ್ವಾಸ್‍ ನ ಮೃತದೇಹ ಪತ್ತೆಯಾಗಿದೆ. ಈಜುವಾಗಲೇ ಆಳಕ್ಕೆ ಮುಳುಗಿದ್ದ ವಿಶ್ವಾಸ್ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಗ್ಗಲಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೇರೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಂಡ ಫೋಟೋಗಳಲ್ಲಿ ವಿಶ್ವಾಸ್ ಮುಳುಗುತ್ತಿರುವುದು ಕಾಣಿಸುತ್ತದೆ. ಹನುಮಂತನನಗರದ ಆಟೋ ಚಾಲಕ ಗೋವಿಂದ ಅವರ ಪುತ್ರನಾಗಿದ್ದ ವಿಶ್ವಾಸ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದ್ದು ಕಾಲೇಜಿನ ಮುಂಭಾಗ ಪೋಷಕರು ಹಾಗು ಸಂಬಂಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ