ಬಜೆಟ್ ಅಲ್ಲಾ ಚುನಾವಣಾ ರಾಕೆಟ್..?

Kannada News

24-03-2017 475

      ರಾಜ್ಯದ ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  ಬಜೆಟ್ ಮಂಡನೆ ವಿಷಯದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದಾರೆ. 12 ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.  ವಿಶೇಷವೆಂದರೆ ಸಿದ್ದರಾಮಯ್ಯ ಆರ್ಥಿಕ ಶಿಸ್ತಿನ ಮೂಲಕ ಸಂಪನ್ಮೂಲ ಕ್ರೋಢಿಕರಣಕ್ಕೆ ಒತ್ತು ನೀಡಿ ಸಮಾಜ ಕಲ್ಯಾಣ ಯೋಜನೆಗಳನ್ನೂ ಅನುಷ್ಟಾನಗೊಳಿಸುವಲ್ಲಿ ಸಿದ್ದ ಹಸ್ತರು ಸಿದ್ದರಾಮಯ್ಯ.  ಅವರ ಕಡು ವಿರೋಧಿಗಳೂ ಕೂಡಾ ಹಣಕಾಸು ಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಸಂಶಿಸುತ್ತಾರೆ. 
ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಂಡಿಸಿರುವ 12 ಬಜೆಟ್‍ಗಳೂ ಒಂದಕ್ಕಿಂತ ಒಂದು ಭಿನ್ನವಾಗಿದೆ. ಎಲ್ಲದರಲ್ಲೂ ವಿತ್ತೀಯ ಕೊರತೆಯಲ್ಲಿ ಶಿಸ್ತು ಕಾಪಾಡುವ ಮೂಲಕ ವಾಸ್ತವಕ್ಕೆ ಹತ್ತಿರವಾದ ಅನುಷ್ಟಾನ, ಯೋಗ್ಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸಿದ್ದರಾಮಯ್ಯ ಅವರ 12 ಬಜೆಟ್‍ಗಳನ್ನು ಗಮನಿಸಿದಾಗ ಅನುಷ್ಟಾನಕ್ಕೆ ಬಾರದೆ ಕೇವಲ ಘೋಷಣೆಯಲ್ಲೇ ಉಳಿದ ಯೋಜನೆಗಳ ಸಂಖ್ಯೆ ಕೇವಲ ಕೆಲವೇ ಮಾತ್ರ. ಬಜೆಟ್‍ನಲ್ಲಿ ಘೋಷಿಸುವ ಬಹುತೇಕ ಎಲ್ಲಾ ಯೋಜನೆಗಳು ಅನುಷ್ಟಾನಕ್ಕೆ ಬರುವ ಮೂಲಕ 12 ಬಜೆಟ್‍ಗಳೂ ವಾಸ್ತವವಾದಿ ಬಜೆಟ್‍ಗಳು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಇನ್ನು ಬಜೆಟ್‍ಗಳಲ್ಲೂ ಲಿಂಗಾಧಾರಿತ ತಾರತಮ್ಯ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ವಸತಿಯನ್ನು ಆದ್ಯತಾ ವಲಯಗಳನ್ನಾಗಿ ಪರಿಗಣಿಸಿ ಈ ವಲಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದು, ಸಿಎಂ ಆಗಿ ಮಂಡಿಸಿದ ಐದು ಬಜೆಟ್‍ನಲ್ಲಿ ನೀರಾವರಿಗೆ ಹೆಚ್ಚಿನ ಅನುದಾನ ಸಿಕ್ಕಿದೆ.
ಈ ಮೂಲಕ ಆರ್ಥಿಕ ತಜ್ಞನೆಂಬ ಹೆಗ್ಗಳಿಕೆ ಪಡೆದಿರುವ ಸಿದ್ದರಾಮಯ್ಯ ಚುನಾವಣಾ ವರ್ಷದಲ್ಲಿ ಮಂಡಿಸಲಾಗುವ ಬಜೆಟ್  ಹೇಗಿರಲಿದೆ, ಸಿಎಂ ಆಗಿ ಇವರ ದೃಷ್ಠಿಕೋನ ಹೇಗಿದೆ ಎಂಬ ಪ್ರಶ್ನೆಗೆ 20 17-18ನೇ ಸಾಲಿನ ಬಜೆಟ್ ಉತ್ತರ ಸಿಕ್ಕಿದೆ. ಸಿಎಂ ಆಗಿ ಇವರಿಗೆ ಮತ್ತೊಂದು ಬಜೆಟ್ ಮಂಡನೆಗೆ ಅವಕಾಶ ಇದ್ದರೂ ಅನುಷ್ಟಾನಕ್ಕೆ ಅವಕಾಶವಿರುವ ಇದು ಇವರ ಅತ್ಯಂತ ಮಹತ್ವದ ಬಜೆಟ್ ಆಗಿದೆ.
ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ಕಾಡುತ್ತಿರುವ ಬರಗಾಲ, ರೈತನ ಆತ್ಮಹತ್ಯೆ, ನಿರುದ್ಯೋಗ, ನೋಟು ಚಲಾವಣೆ ನಿಶೇಧದ ನಂತರ ಉಂಟಾಗಿರುವ ಹಣಕಾಸಿನ ಮುಗ್ಗಟ್ಟು ಹಾಗೂ ಸದ್ಯದಲ್ಲೇ ಜಾರಿಗೆ ಬರಲಿರುವ ಸಮಗ್ರ ಸರಕು ಸೇವಾ ತೆರಿಗೆ ಕಾಯಿದೆಯ ಬೆನ್ನಲೇ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುವ ಬಜೆಟ್ ಹೇಗಿರಲಿದೆ ಎಂಬ ನಿರೀಕ್ಷೆ ಎಲ್ಲಾ ವಲಯದಲ್ಲೂ ಇತ್ತು. ಅದರಲ್ಲೂ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಸೋಲು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ದೊಡ್ಡ ಸವಾಲಾಗಿಯೇ ಪರಿಣಮಿಸಿತ್ತು. 
ರಾಜ್ಯದ ಮಟ್ಟಿಗೆ ದಾಖಲೆ ಎನಿಸುವ 1.86 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿರುವ ಸಿಎಂ ಕೃಷಿ, ಸಾಮಾಜಿಕ ವಲಯ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಗರಿಷ್ಠ ಮೊತ್ತ ತೆಗೆದಿರಿಸಿದ್ದಾರೆ. ತಮ್ಮ ಬಜೆಟ್ ಭಾಷಣದ ಆರಂಭದಲ್ಲೇ ತಮ್ಮದು ಸರ್ವರನ್ನು ಒಳಗೊಳ್ಳುವ ಮಾನವೀಯ ಮುಖವುಳ್ಳ ಸರ್ವೋದಯದ ಅಭಿವೃದ್ಧಿ ಮಾದರಿ ಬಜೆಟ್ ಎಂದು ಹೇಳುವ ಮೂಲಕ ಎಲ್ಲ ವರ್ಗ, ಪ್ರದೇಶಗಳಿಗೂ ಅನುದಾನ ಇಲ್ಲವೇ ಯೋಜನೆಗಳನ್ನು ಘೋಷಿಸುವ ಪ್ರಯತ್ನ ಮಾಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್, ಅಪಘಾತದಲ್ಲಿ ಸತ್ತ ಹಸು, ಎಮ್ಮೆಗಳಿಗೆ ಪರಿಹಾರ, ಉಪನ್ಯಾಸಕರ ನೇಮಕಕ್ಕೆ ಕ್ರಮ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚನೆ. ಇದೇ ಮೊದಲ ಬಾರಿಗೆ ಶಿಕ್ಷಕರನ್ನು ವೇತನ ಆಯೋಗದ ವ್ಯಾಪ್ತಿಗೆ ತರುವ ಭರವಸೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಕರ್ನಾಟಕ ಒನ್ ಕೇಂದ್ರಗಳ ಸ್ಥಾಪನೆ, ಬೆಂಗಳೂರಿನಲ್ಲಿ ಅಗ್ಗದ ದರದಲ್ಲಿ ಕ್ಯಾಂಟೀನ್ ಸೌಲಭ್ಯ, ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ವೃಕ್ಷ ಉದ್ಯಾನವನ, ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಗರ್ಬಿಣಿಯರಿಗೆ ಬಿಸಿಯೂಟ, ಪರಿಶಿಷ್ಟ ವರ್ಗದ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಆಶಾದೀಪದಂತಹ ಯೋಜನೆ ಘೋಷಿಸುವ ಮೂಲಕ ಸಿಎಂ ತಮ್ಮ ಬಜೆಟ್‍ನಲ್ಲಿ ಸಾಮಾಜಿಕ ನ್ಯಾಯ ವಿರೋಧಿಸುವವರಿಂದ ರಾಮರಾಜ್ಯ ನಿರ್ಮಾಣ ಸಾಧ್ಯವಿಲ್ಲ ಎಂದು ಬಿಜೆಪಿಯನ್ನು ಟೀಕಿಸುವುದನ್ನೂ ಮರೆತಿಲ್ಲ.
ಇಂತಹ ಹಲವು ಹೊಸ ಯೋಜನೆಗಳೊಂದಿಗೆ ಹಳೆಯ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ವಸ್ತ್ರಭಾಗ್ಯ, ಮನಸ್ವಿನಿ, ಮೈತ್ರಿ ಮೊದಲಾದ ಯೋಜನೆಗಳನ್ನು ಮುಂದುವರೆಸಿದ್ದಾರೆ. ಅನ್ನಭಾಗ್ಯದ ಜೊತೆಗೆ ಅಕ್ಷರ, ಆರೋಗ್ಯ, ಆಶ್ರಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕಳೆದ ವರ್ಷಕ್ಕಿಂತ ಶೇ. 14ರಷ್ಟು ಹೆಚ್ಚಿನ ಗಾತ್ರ ಹೊಂದಿರುವ ಈ ಬಜೆಟ್‍ನಲ್ಲಿ ಕೃಷಿಗೆ 5 ಸಾವಿರದ 80 ಕೋಟಿ, ತೋಟಕಾರಿಕೆಗೆ 1091 ಕೋಟಿ, ಪಶುಸಂಗೋಪನೆಗೆ 2ಸಾವಿರದ 245 ಕೋಟಿ, ರೇಷ್ಮೆ ಇಲಾಖೆಗೆ 421 ಕೋಟಿ ರೂಪಾಯಿ, ಮೀನುಗಾರಿಕೆಗೆ 337 ಕೋಟಿ ರೂಪಾಯಿ, ಸಹಕಾರ ಇಲಾಖೆಗೆ ಒಂದು ಸಾವಿರದ 663 ಕೋಟಿ ರೂಪಾಯಿ, ಜಲಸಂಪನ್ಮೂಲಕ್ಕೆ 18 ಸಾವಿರದ 28 ಕೋಟಿ ರೂಪಾಯಿ ನೀಡುವ ಮೂಲಕ ಪ್ರತಿ ವರ್ಷ ಬೃಹತ್ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ನೀಡುವ ವಾಗ್ಧಾನವನ್ನು ಈಡೇರಿಸಿದ್ದಾರೆ. 
ಅರಣ್ಯ ಇಲಾಖೆಗೆ ಒಂದು ಸಾವಿರದ 732 ಕೋಟಿ, ಶಿಕ್ಷಣ ಇಲಾಖೆಗೆ 18 ಸಾವಿರದ 266 ಕೋಟಿ, ಉನ್ನತ ಶಿಕ್ಷಣಕ್ಕೆ ನಾಲ್ಕು ಸಾವಿರದ 401 ಕೋಟಿ ರೂಪಾಯಿ ನಿಗದಿಪಡಿಸುವ ಮೂಲಕ ಶಿಕ್ಷಣ ತಮ್ಮ ಸರ್ಕಾರದ ಆದ್ಯತೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಪ್ರಾಥಮಿಕ ಒಂದನೇ ತರಗತಿಯಿಂದ ಇಂಗ್ಲೀಷ್ ಒಂದು ಭಾಷೆಯನ್ನಾಗಿ ಕಲಿಸಬೇಕೆನ್ನುವ ಬಹುದಿನದ ಬೇಡಿಕೆ ಈ ಬಜೆಟ್‍ನಲ್ಲಿ ಈಡೇರಿದೆ.
ವೈದ್ಯಕೀಯ ಶಿಕ್ಷಣಕ್ಕೆ 2 ಸಾವಿರದ 4ಕೋಟಿ, ಆರೋಗ್ಯ ಇಲಾಖೆಗೆ 5ಸಾವಿರದ 118 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಾಲ್ಕು ಸಾವಿರದ 928 ಕೋಟಿ ರೂಪಾಯಿ, ಸಮಾಜ ಕಲ್ಯಾಣ ಇಲಾಖೆಗೆ ಆರು ಸಾವಿರದ 363 ಕೋಟಿ, ಹಿಂದುಳಿದ ವರ್ಗಗಳ ಇಲಾಖೆಗೆ ಮೂರು ಸಾವಿರದ 154 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 2,200 ಕೋಟಿ, ವಸತಿ ಇಲಾಖೆಗೆ ದಾಖಲೆಯ ನಾಲ್ಕು ಸಾವಿರದ 708 ಕೋಟಿ ರೂಪಾಯಿ ನಿಗದಿ ಪಡಿಸುವ ಮೂಲಕ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಘೋಷಣೆ ಅನುಷ್ಟಾನದ ವಿಷಯದಲ್ಲಿ ದಾಪುಗಾಲಿಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ 14 ಸಾವಿರದ 61 ಕೋಟಿ, ನಗರಾಭಿವೃದ್ಧಿ ಇಲಾಖೆಗೆ 18 ಸಾವಿರದ 127 ಕೋಟಿ, ಇಂಧನ ಇಲಾಖೆಗೆ 14 ಸಾವಿರದ 94 ಕೋಟಿ ರೂಪಾಯಿ ಅನುದಾನ ಘೋಷಿಸುವ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಸ್ವಾವಲಂಬಿ ರಾಜ್ಯವನ್ನಾಗಿಸಬೇಕೆಂಬ ಮಹತ್ವಾಕಾಂಕ್ಷೆ ಈಡೇರಿಸುವ ಪಣಕ್ಕೆ ನೆರವು ಘೋಷಿಸಿದ್ದಾರೆ. ಬೆಳೆಯುತ್ತಿರುವ ಬೆಂಗಳೂರಿಗೂ ಹತ್ತು-ಹಲವಾರು ಯೋಜನೆ ಪ್ರಕಟಿಸುವ ಮೂಲಕ ತಮ್ಮ ಬಜೆಟ್ ಗ್ರಾಮೀಣ ಮತ್ತು ನಗರ ಪ್ರದೇಶದ ಅಭಿವೃದ್ಧಿಗೆ ಪೂರಕ ಎಂದು ಸಾಬೀತು ಪಡಿಸಿದ್ದಾರೆ.
ಇಂತಹ ಹಲವು ಕಸರತ್ತಿನ ನಡುವೆಯೂ ಸಿಎಂ ತಮ್ಮ ಬಜೆಟ್‍ನಲ್ಲಿ ಸಂಪನ್ಮೂಲ ಕ್ರೋಢಿಕರಣಕ್ಕೆ ಒತ್ತು ನೀಡಿದ್ದಾರೆ. ಸಹಜವಾಗಿ ಚುನಾವಣಾ ವರ್ಷದಲ್ಲಿ ಮಂಡಿಸುವ ಬಜೆಟ್ ಅಗ್ಗದ ಜನಪ್ರಿಯ ಯೋಜನೆಗಳಿಗೆ ಸೀಮಿತ ಎಂಬ ಸಂಪ್ರದಾಯವನ್ನು ಮುಂದಿಟ್ಟಿದ್ದಾರೆ. ಇದರಿಂದಾಗಿ ರಾಜ್ಯದ ಆದಾಯ ಸಂಗ್ರಹಣೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ನಿರೀಕ್ಷಿಸಲಾಗಿದೆ.

ಬಂಡವಾಳ ವೆಚ್ಚದಲ್ಲಿ ರಸ್ತೆ, ಶಾಲೆ, ಆಸ್ಪತ್ರೆ, ವಸತಿ ಮೊದಲಾದ ಆದ್ಯತಾ ವಲಯಕ್ಕೆ ನೀಡಲಾಗಿರುವ ಅನುದಾನ 32 ಸಾವಿರದ 33 ಕೋಟಿ ರೂಪಾಯಿ ಆಗಿದ್ದು ಒಟ್ಟಾರೆ ಶೇ.29ರಷ್ಟು ಹೆಚ್ಚಳವಾಗಿದೆ. ವೇತನ, ಪಿಂಚಣಿ ಮತ್ತಿತರ ಯೋಜನೇತರ ವಲಯಕ್ಕೆ ಒಂದು ಲಕ್ಷದ 44 ಸಾವಿರದ 755 ಕೋಟಿ ವೆಚ್ಚ ಮಾಡುತ್ತಿದ್ದು ಶೇ 9 ರಷ್ಟು ಅನುದಾನ ಹೆಚ್ಚಳವಾಗಿದೆ.
ಒಟ್ಟಾರೆ ನಗರಾಭಿವೃದ್ಧಿ ನೀರಾವರಿ, ನೀರು ಪೂರೈಕೆ, ನೈರ್ಮಲ್ಯ, ಬರ ಮತ್ತು ಪ್ರವಾಹದಂತಹ ಪ್ರಕೃತಿ ವಿಕೋಪಗಳಿಗೆ ನೀಡುವ ಅನುದಾನದಲ್ಲಿ ಬಾರಿ ಪ್ರಮಾಣದ ಹೆಚ್ಚಳ ಮಾಡಲಾಗಿದೆ. ಜಲ ಸಂಪನ್ಮೂಲ ಇಲಾಖೆಗೆ ಬಾರಿ ಅನುದಾನ ಲಭಿಸಿದೆ. ಇದರಲ್ಲಿ ಹೊಸ ನೀರಾವರಿ ಯೋಜನೆಗಳಿಗೆ 3 ಸಾವಿರ ಕೋಟಿ ರೂಪಾಯಿ ನಿಗದಿ ಪಡಿಸಿರುವುದು ಗಮನಾರ್ಹ. ಇದಲ್ಲದೆ ಸಣ್ಣ ನೀರಾವರಿ ಇಲಾಖೆಯು ಯೋಜನೆಗಳಿಗೆ ಪ್ರತ್ಯೇಕ ಹಣ ಮೀಸಲಿಡಲಾಗಿದೆ. ಏತ ನೀರಾವರಿ ಯೋಜನೆಯ ಮೂಲಕ ಹಲವು ಕೆರಗಳನ್ನು ತುಂಬಿಸುವ ಯೋಜನೆಗೆ ಆದ್ಯತೆ ನೀಡಿದ್ದು, ಅಂತರ್ಜಾಲ ಅಭಿವೃದ್ಧಿ ದೃಷ್ಠಿಯಿಂದ ಇದು ಅತ್ಯಂತ ಮಹತ್ವದ ಘೋಷಣೆಯಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಮೋಡಬಿತ್ತನೆ ಯೋಜನೆ ರೂಪಿಸಲಾಗುತ್ತಿದೆ. ಮಳೆನೀರು ಸಂಗ್ರಹ ಮತ್ತು ಅಂತರ್ಜಾಲ ಮರುಪೂರಣ ಕಾರ್ಯಕ್ರಮಗಳಿಗೆ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ ಪೂರೈಸುವ ಯೋಜನೆ ಮೂಲಕ ಅಪೌಷ್ಠಿಕತೆ ನಿವಾರಣೆಗೆ ಒತ್ತು ನೀಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೂ ಈ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಸಿಕ್ಕಿದೆ ಈ ಮೂಲಕ ಸಿದ್ದರಾಮಯ್ಯ ಸದಾ ಗ್ರಾಮೀಣ ಪ್ರದೇಶದ ಪರ, ಬೆಂಗಳೂರಿನ ಬಗ್ಗೆ ವಿಶೇಷ ಕಾಳಜಿಯಿಲ್ಲ ಎಂಬ ಸಾಂಪ್ರದಾಯಿಕ ಆರೋಪಗಳನ್ನು ದೂರ ಮಾಡುವ ದೃಷ್ಟಾಂತಗಳು ಈ ಬಜೆಟ್‍ನಲ್ಲಿ ಹೇರಳವಾಗಿವೆ.
ಬಿಬಿಎಂಪಿ ಕೈಗೊಂಡಿರುವ ಹಲವು ಅಭಿವೃದ್ಧಿ ಯೋಜನೆಗಳು ಅರ್ಧದಲ್ಲೇ ನಿಂತಿವೆ. ಇನ್ನು ಕೆಲವು ಆರಂಭವೇ ಆಗಿಲ್ಲ ಇದರ ನಡುವೆ ಮತ್ತೆ ಕೆಲವು ಹೊಸ ಯೋಜನೆ ಕೈಗೆತ್ತಿಕೊಳ್ಳಬೇಕಾದ ಅನಿವಾಂiÀರ್iತೆಯಿದೆ. ಇದನ್ನು ಮನಗಂಡಿರುವ ಸಿಎಂ ಬಜೆಟ್‍ನಲ್ಲಿ 4 ಸಾವಿರದ 700 ಕೋಟಿ ರೂಪಾಯಿ ಅನುದಾನ ಪ್ರಕಟಿಸಿದ್ದಾರೆ.
ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಎತ್ತಿನ ಹೊಳೆಯೋಜನೆಗೆ ಕರಾವಳಿ ಪ್ರದೇಶದ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರ ಅಸಮದಾನ ಶಮನಗೊಳಿಸುವ ದೃಷ್ಟಿಯಿಂದ ಪಶ್ಚಿಮ ವಾಹಿನಿ ಯೋಜನೆ ಪ್ರಕಟಿಸಿದ್ದಾರೆ. ಸುಮಾರು ಒಂದು ಸಾವಿರ ಕೋಟಿ ವೆಚ್ಚದ ಈ ಯೋಜನೆಗೆ ಆರಂಭಿಕವಾಗಿ 100 ಕೋಟಿ ರೂ ತೆಗೆದಿರಿಸಿದ್ದಾರೆ.
ವೃದ್ದಾಪ್ಯ ವೇತನ ಹೆಚ್ಚಳ, ವಿಕಲಚೇತನರಿಗೆ ಸೌಲಭ್ಯಗಳು, ವಿಧವೆಯರಿಗೆ ನೆರವು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಬಲೀಕರಣಕ್ಕೆ ಕ್ರಮದ ಮೂಲಕ ಇಲ್ಲಿಯವರೆಗೆ ಯಾರೂ ಗುರುತಿಸಲೇ ಇದ್ದ ಸುಮದಾಯಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ ಮೊದಲಾದ ಆದಿವಾಸಿ ಗಿರಿಜನರಿಗೆ ಈ ಬಜೆಟ್‍ನಲ್ಲಿ ಅನುದಾನ ಪ್ರಕಟಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಬಜೆಟ್ ಗಮನಿಸಿದಾಗ ಮತಗಟ್ಟೆಗೆ ದೊಡ್ಡ ಸಂಖ್ಯೆಯಲ್ಲಿ ಬರುವ ಜನರನ್ನು ಗುರಿಯಾಗಿಸಿಕೊಂಡು ಬಜೆಟ್ ಸಿದ್ದಪಡಿಸಲಾಗಿದೆ  ಎಂಬ ಅಂಶ ಮೇಲ್ನೋಟಕ್ಕೆ ಕಂಡರೂ ವಾಸ್ತವ ಪರಿಸ್ಥತಿ ಹಾಗಿಲ್ಲ. ಇದೇ ಬಜೆಟ್ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೊಳಗೊಂಡಿದೆ. ನಮ್ಮ ಕ್ಯಾಂಟೀನ್ ಎಂಬ ಯೋಜನೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೋಡಿದರೆ ಈ ಬಜೆಟ್ ಅನ್ನೂ ಚುನಾವಣಾ ಬಜೆಟ್ ಎಂದು ಅತ್ಯಂತ ಸುಲಭವಾಗಿ ವರ್ಗೀಕರಿಸಬಹುದು.
ಆದರೆ ಮದ್ಯ ಮತ್ತು ದ್ವಿಚಕ್ರವಾಹನಗಳ ತೆರಿಗೆಯನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡಿ, ಯಾವ ವಲಯದಲ್ಲೂ ತೆರಿಗೆ ಹೆಚ್ಚಳ ಮಾಡದೇ ನಿಗದಿತ ಗುರಿ ಮುಟ್ಟಲು ಕೈಗೊಂಡಿರುವ ಕ್ರಮಗಳನ್ನು, ಇದನ್ನು ಚುನಾವಣಾ ಬಜೆಟ್ ಎಂದು ಹೇಳಲು ಸಾದ್ಯವಿಲ್ಲ. ಈ ಬಜೆಟ್ ಜಾರಿಯ ಸಂಪೂರ್ಣ ಹೊಣೆಗಾಗಿಕೆ ಸಿದ್ದರಾಮಯ್ಯ ಅವರ ಮೇಲೆ ಇರುವುದರಿಂದ ತಾನೇ ಘೋಷಿಸಿದ ಯೋಜನೆ ಜಾರಿಗೊಳಿಸಲು ಸಾದ್ಯವಾಗಿಲ್ಲ ಎಂಬ ಪ್ರತಿಪಕ್ಷಗಳ ಟೀಕೆಗೆ ಅವಕಾಶ ನೀಡಬಾರದೆಂಬ ವಾಸ್ತವತೆಯ ಆಧಾರದಲ್ಲಿ ಬಜೆಟ್ ಮಂಡಿಸಲಾಗಿದೆ. 
89 ಸಾವಿರದ 957 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆ ಗುರಿ ಹೊಂದಿರುವ ಸಿದ್ದರಾಮಯ್ಯ ಇದರ ಹಂಚಿಕೆಗೆ ವೈಜ್ಞಾನಿಕ ಮಾರ್ಗಗಳನ್ನೂ ಬಳಸಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸೃಷ್ಠಿಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿದ್ದು, ಇದರಿಂದ ನೇರವಾಗಿ 10 ಲಕ್ಷ ಮತ್ತು ಪರೋಕ್ಷವಾಗಿ 30 ಲಕ್ಷ ಜನರಿಗೆ ಉದ್ಯೋಗ ಸೃಷ್ಠಿಯ ಭರವಸೆ ಹೊಂದಿದ್ದಾರೆ. ರೈತರ ಸಾಲ ಮನ್ನಾ ವಿಷಯದಲ್ಲಿ ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ರಾಜ್ಯ ಸರ್ಕಾರ ಕೃಷಿ ಸಾಲ ಮನ್ನಾ ಮಾಡಿದರೆ ಕೇವಲ ಸಹಕಾರಿ ಬ್ಯಾಂಕ್‍ಗಳ ರೈತರಿಗೆ ಮಾತ್ರ ಲಾಭ ಸಿಗಲಿದೆ.
ಇದರ ಬದಲಿಗೆ ಕೇಂದ್ರ ಸರ್ಕಾರ ರಾಷ್ಟ್ರೀಕತ ಮತ್ತು ವಾಣಿಜ್ಯ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿದರೆ, ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ ಸಾಲ ಮನ್ನಾ ಮಾಡಬಹುದು. ಆಗ ಎಲ್ಲಾ ರೈತರಿಗೂ ಸಹಕಾರಿಯಾಗಲಿದೆ. ಇಲ್ಲವಾದರೆ ಇದೊಂದು ರೀತಿಯಲ್ಲಿ ಮಲತಾಯಿ ಧೋರಣೆಯಂತಾಗುತ್ತದೆ ಎಂಬ ವಾದ ಮಂಡಿಸುತ್ತಿದ್ದಾರೆ.
ಸಾಲ ಮನ್ನದ ಬದಲಿಗೆ ರೈತ ಸಮುದಾಯದಲ್ಲಿ ಆರ್ಥಿಕ ಧೈರ್ಯ ಬರುವಂತೆ ಮಾಡಲು ಕೃಷಿ ಯಂತ್ರಧಾರೆ ಕಾರ್ಯಕ್ರಮ, ಎಲ್ಲಾ ಹಳ್ಳಿಗಳಿಗೆ ಪರಿಣಿತ ಹಾಗು ಸುಧಾರಿತ ಪಶು ವೈದ್ಯಕೀಯ ಸೌಲಭ್ಯ ಕಲ್ಪಿಸುವ ದೃಷ್ಠಿಯಿಂದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪಶು ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸುವುದು, ಕೆರೆಗಳ ಹೂಳೆತ್ತುವುದು, ರೈತ ಸಾರಥಿ ಯೋಜನೆ, ಕೃಷಿ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ, ಬೆಂಬಲ ಬೆಲೆ ನೀಡಲು  ಆವರ್ತ ನಿಧಿ ಹೆಚ್ಚಳ, ಉಪ್ಪಾರ ಮೊದಲಾದ ಉಪಜಾತಿಗಳ ಕಲ್ಯಾಣಕ್ಕೆ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ, ಗಂಗಾ ಮತಸ್ಥರ ಕಲ್ಯಾಣಕ್ಕಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಸ್ವಾಗತಾರ್ಹ ಕ್ರಮಗಳಾಗಿವೆ.
ಇಂತಹ ಎಲ್ಲಾ ಯೋಜನೆಗಳ ಮೂಲಕ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಸಿಎಂ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅಸಮತೋಲನ ನಿವಾರಣೆಗೆ ಆದ್ಯತೆ ನೀಡಿದ್ದಾರೆ. ಹೊಸದಾಗಿ 49 ತಾಲೂಕುಗಳ ರಚನೆಯ ಘೋಷಣೆ ಮೂಲಕ ಜನಸಾಮಾನ್ಯರು ತಮ್ಮ ದಿನ ನಿತ್ಯದ ಅಗತ್ಯತೆಗಾಗಿ ದೂರದ ತಾಲೂಕು ಕೇಂದ್ರಕ್ಕೆ ಎಡತಾಕುವುದನ್ನು ತಪ್ಪಿಸುವ ಪ್ರಯತ್ನ ನಡೆಸಲಾಗಿದೆ. ಈ ಮೂಲಕ ಇದೊಂದು ಚುನಾವಣಾ ಪೂರ್ವ ವಾಸ್ತವವಾದಿ ಬಜೆಟ್ ಎಂದರೆ ತಪ್ಪಾಗಲಿಕ್ಕಿಲ್ಲ.
 

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ