ಬಿ.ಎಸ್.ವೈ ಸಿಎಂ ಆಗುವುದು ಬರೀ ಕನಸು…!

Kannada News

25-09-2017 412

ಲಿಂಗಾಯತ ಮತಗಳನ್ನ ಒಟ್ಟೊಟ್ಟಿಗೆ ಬಿಜೆಪಿಗೆ ತರುತ್ತಾರೆ ಎಂದೇ ಯಡಿಯೂರಪ್ಪನವರನ್ನು ಪಕ್ಷಾಧ್ಯಕ್ಷರನ್ನಾಗಿ ಮಾಡಿದ್ದರೂ, ಅವರನ್ನ ಏಕಮೇವ ಬಲಾಢ್ಯರನ್ನಾಗಿ ಬಿಡಬಾರದೆಂದು ಈಶ್ವರಪ್ಪರನ್ನು ಅವರ ವಿರುದ್ಧ ಛೂ ಬಿಡಲಾಗಿದೆ.

ಈ ನಡುವೆ ಧರ್ಮ ರಾಜಕಾರಣದಿಂದಾಗಿ ಯಡಿಯೂರಪ್ಪ, ಮೊದಲಿನಂತೆ ಸಮುದಾಯದ ನಾಯಕರಾಗಿ ಉಳಿದಿಲ್ಲ. ಇನ್ನೊಂದೆಡೆ ಡಿನೋಟಿಫಿಕೇಷನ್ ಪ್ರಕರಣ ಸೇರಿದಂತೆ ಹೊಸ ಹೊಸ ಕೇಸ್ ದಾಖಲಿಸಿ ಚುನಾವಣೆ ವೇಳೆಗಾದರೂ ಯಡಿಯೂರಪ್ಪರನ್ನು ಜೈಲಿಗಟ್ಟುವ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಹೀಗಿರುವಾಗ, ಬಿಎಸ್ವೈಗೆ ಆದ್ಯತೆ ಅನಗತ್ಯ, ಎಂಬ ಲೆಕ್ಕದಿಂದ ಇವರ ವಿರೋಧಿ ಗುಂಪಿನ ಸಂತೋಷ್ ಅವರಿಗೆ ಮನ್ನಣೆ ನೀಡಲಾಗಿದೆ ಎಂದೇ ಹೇಳಲಾಗುತ್ತಿದೆ. ಸಂಘ ಪರಿವಾರದ ಪ್ರಮುಖ ಸಂತೋಷ್ ಅವರು ಹಿಂದೆ, ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸುವ ಸಂದರ್ಭದಲ್ಲಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಆಗಲು ಯತ್ನಿಸಿದ್ದವರು. ಅವರ ವಿರುದ್ಧ ಯಡಿಯೂರಪ್ಪ ಗುಂಪು ವರಿಷ್ಠರಿಗೆ ದೂರು ನೀಡಿತ್ತು.

ಈಗ ಮತ್ತೆ ಸಂತೋಷ್ ಚಲಾವಣೆಗೆ ಬಂದು, ಪಕ್ಷದ ಪದಾಧಿಕಾರಿಗಳಲ್ಲಿ ತಮ್ಮವರನ್ನೇ ತುಂಬಿಕೊಂಡಿದ್ದಾರೆ. ಇದು ಬಿಎಸ್ವೈಗೆ ಮತ್ತೊಂದು ಹಿನ್ನಡೆ. ಯಡಿಯೂರಪ್ಪರನ್ನು ಕೇವಲ ಉತ್ಸವ ಮೂರ್ತಿಯಾಗಿ ಬಳಸಿಕೊಂಡು ಸಿಎಂ ಗಾದಿಯಿಂದ ದೂರವಿಡುವ ಸೂಚನೆಗಳು ದಟ್ಟವಾಗಿವೆ.

ಸಿದ್ದು ಸರ್ಕಾರದ ವಿರುದ್ದ ಗಟ್ಟಿಯಾಗಿ ಹೋರಾಡಿಲ್ಲ, ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಡಿಕೆಶಿ ಪರ ಎಂಬಂತೆ ಮಾತಾಡಿದ್ದು, ಲಿಂಗಾಯತ ವೀರಶೈವ ಒಡಕಿನಿಂದಾಗಿ ಬಿಎಸ್ವೈಗೆ ಬೆಲೆ ಇಲ್ಲದ್ದು, ಯಾವಾಗ ಬೇಕಾದರೂ ಕಾನೂನಿನ ಕುಣಿಕೆಗೆ ಸಿಕ್ಕಬಹುದಾದದ್ದು ಮತ್ತು ಇದಕ್ಕೂ ಮಿಗಿಲಾಗಿ ಪಕ್ಕಾ ಸಂಘ ಪರಿವಾರದವರನ್ನ ಸಿಎಂ ಮಾಡಬೇಕು ಎಂಬ ಕಾರಣಗಳಿಂದ ಯಡಿಯೂರಪ್ಪಗೆ ವ್ಯವಸ್ಥಿತವಾಗಿ ಕೈ ಎತ್ತಲಾಗುತ್ತಿದೆ, ಒಟ್ಟಿನಲ್ಲಿ ಬಿಜೆಪಿ ಬಿಕ್ಕಟ್ಟಿನಲ್ಲಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ