ಖಾಸಗಿ ಆಸ್ಪತ್ರೆಗಳಿಗೆ ಟ್ರೇಡ್ ಲೈಸೆನ್ಸ್ ಕಡ್ಡಾಯವಲ್ಲ…

Kannada News

25-09-2017

ಮಹತ್ವದ ನಿರ್ಧಾರವೊಂದರಲ್ಲಿ ಕರ್ನಾಟಕ ಸರ್ಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಅಂದರೆ ವ್ಯಾಪಾರ ಅಥವ ವಾಣಿಜ್ಯ ಪರವಾನಗಿ ಪಡೆಯುವುದರಿಂದ ವಿನಾಯತಿ ನೀಡಿ ಆದೇಶ ಹೊರಡಿಸಿದೆ.

ಸಾರ್ವಜನಿಕರಿಗೆ ವೈದ್ಯಕೀಯ ಸೇವೆಗಳನ್ನು ಸುಸೂತ್ರವಾಗಿ ನೀಡಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ, ಖಾಸಗಿ ವೈದ್ಯಕೀಯ ಸಂಸ್ಥೆಗಳವರು, ವಾಣಿಜ್ಯ ಪರವಾನಗಿ ಪಡೆಯದಿದ್ದರೂ ಕೂಡ ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.  

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಅಡಿಯಲ್ಲಿ ಇಲ್ಲಿಯವರೆಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸರ್ಕಾರದಿಂದ ವ್ಯಾಪಾರ ಪರವಾನಗಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ವ್ಯಾಪಾರ ಪರವಾನಗಿ ಪಡೆಯುವುದು ಕಡ್ಡಾಯವಾಗಿರುವುದರಿಂದ ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡುವುದಕ್ಕೆ ತೊಡಕಾಗುತ್ತಾದೆ, ಸುಗಮವಾದ ರೀತಿಯಲ್ಲಿ ಜನತೆಗೆ ಸೇವೆ ನೀಡುವುದಕ್ಕಾಗಿ ಟ್ರೇಡ್ ಲೈಸೆನ್ಸ್ ಕಡ್ಡಾಯ ಮಾಡಿರುವುದನ್ನು ಕೈ ಬಿಡಬೇಕು ಎಂದು ಖಾಸಗಿ ವೈದ್ಯಕೀಯ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದವು. ಆ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಇದೀಗ, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಪಡೆಯುವುದರಿಂದ ವಿನಾಯತಿ ನೀಡಿ ಆದೇಶ ಹೊರಡಿಸಿದೆ. ಇದು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮತ್ತು ರಾಜ್ಯದಲ್ಲಿ ಆರೋಗ್ಯ ಸೇವೆ ಪಡೆಯುವ ಎಲ್ಲರಿಗೂ ಲಾಭದಾಯಕವಾಗುವ ನಿರ್ಧಾರವೆಂದು ಹೇಳಲಾಗಿದೆ.

ತಮ್ಮ ಮನವಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಮತ್ತು ವೈದ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ