ಹಣಕ್ಕಾಗಿ ಸ್ನೇಹಿತನನ್ನೇ ಕೊಂದರು..

Kannada News

22-09-2017 389

ಬೆಂಗಳೂರು: ಹಣದ ಆಸೆಗಾಗಿ ಸ್ನೇಹಿತನನ್ನು ಅಪಹರಿಸಿ ಕೊಲೆಗೈದಿದ್ದ ವಿಶಾಲ್ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 12 ರಂದು ಆದಾಯ ತೆರಿಗೆ ಅಧಿಕಾರಿ ಪುತ್ರ ಶರತ್ ನನ್ನು ಅಪಹರಿಸಿದ್ದ ದುಷ್ಕರ್ಮಿಗಳು ಅಪಹರಣಕ್ಕೆ ಬಳಸಿದ್ದ ಸ್ವಿಫ್ಟ್ ಕಾರಿನಲ್ಲಿಯೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ನಗರದ ಹೊರ ವಲಯದಲ್ಲಿರುವ ರಾಮೋಹಳ್ಳಿ ಕೆರೆಗೆ ಕಲ್ಲುಕಟ್ಟಿ ಎಸೆದು ಏನೂ ನಡೆದಿಲ್ಲವೆಂಬಂತೆ ನಟಿಸುತ್ತಿದ್ದ ವಿಶಾಲ್ (21) ಆತನ ಸಹಚರರಾದ ವಿನಯ್ ಪ್ರಸಾದ್ (24), ಕರಣ್ (22), ವಿನೋದ್ ಕುಮಾರ್ (24) ಅವರುಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಶಾಂತಕುಮಾರ್ನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.  ಹತ್ಯೆಯ ಸೂತ್ರಧಾರ ವಿಶಾಲ್ ಶರತ್ ನ ಸಹೋದರಿಯ ಸಹಪಾಠಿ, ನಗರದ ಸಮೀಪವಿರುವ ಉಲ್ಲಾಳದಲ್ಲಿ ವಾಸಿಸುತ್ತಿರುವ ಆದಾಯ ತೆರಿಗೆ ಅಧಿಕಾರಿ ಮನೆಯ ಸಮೀಪದಲ್ಲೇ ವಿಶಾಲ್ ವಾಸವಿದ್ದ. ಹೀಗಾಗಿ ಶರತ್ ಅವರ ಸಹೋದರಿ ಸೇರಿದಂತೆ ಮನೆ ಮಂದಿಯೊಂದಿಗೆ ಒಡನಾಟ ಇಟ್ಟುಕೊಂಡಿದ್ದ. ಮನೆಯವರೊಂದಿಗೆ ನಂಬಿಕಸ್ತನಂತೆ ನಟಿಸಿ ಮನೆಯ ಏಕೈಕ ಪುತ್ರನನ್ನೇ ಅಪಹರಿಸಿ ಕೊಲೆಗೈದಿದ್ದಾರೆ. ಏಕೈಕ ಪುತ್ರನನ್ನು ಕಳೆದುಕೊಂಡಿರುವ ಪೋಷಕರ ಹಾಗೂ ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊಲೆಯಾದ ಶರತ್ ನ ಸ್ನೇಹಿತನಾಗಿದ್ದ ಅಕ್ಕನ ಸಹಪಾಠಿ ಎನ್ನಲಾದ ವಿಶಾಲ್, ಶರತ್ನ ಸ್ನೇಹಿತ ವಿನಯ್ ಇವರುಗಳೇ ಈ ಪ್ರಕರಣದ ರೂವಾರಿಗಳಾಗಿದ್ದು, ಹಣದ ಆಮಿಷವೊಡ್ಡಿ ತನ್ನ ಪರಿಚಿತ ಹುಡುಗರನ್ನು ಬಳಸಿಕೊಂಡು ಶರತ್ ನನ್ನು ಅಪಹರಿಸಿದ್ದರು. 9 ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ ಶರತ್ ನ ಶವ ಶುಕ್ರವಾರ ಪತ್ತೆಯಾಗಿದ್ದು, ಶವ ಪರೀಕ್ಷೆಗೆ ಕಳುಹಿಸಲಾಗಿದೆ.

ಅಪಹರಣ ನಡೆದ ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಬಂಧಿತರು, ಶರತ್ ನ ತಂದೆ ಪೊಲೀಸರಿಗೆ ದೂರು ನೀಡಿದ ಮಾಹಿತಿ ಪಡೆದು ತಾವು ಸಿಕ್ಕಿ ಬೀಳುತ್ತೇವೆ ಎಂಬ ಭಯದಿಂದ ಶರತ್ ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಬಂಧಿತ ವಿಶಾಲ್ ನ ಭಾವ ಶಾಂತಕುಮಾರ್ 4 ಲಕ್ಷ ರೂ. ಸಾಲ ಮಾಡಿದ್ದು, ಈ ಸಾಲ ತೀರಿಸಲು ಈ ಅಪಹರಣದ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ಕೊಲೆಯಾದ ಶರತ್ ಆಚಾರ್ಯ ಕಾಲೇಜಿನಲ್ಲಿ ಡಿಪ್ಲಮೋ ವಿದ್ಯಾರ್ಥಿಯಾಗಿದ್ದು, ಈತನ ಅಕ್ಕ ಎಂಜಿನಿಯರಿಂಗ್ ಓದುತ್ತಿದ್ದಾರೆ. ಈಕೆಯ ಸಹಪಾಟಿ ವಿಶಾಲ್ ಆಗಾಗ್ಗೆ ಮನೆಗೆ ಬರುತ್ತಿದ್ದು, ಇವರ ಬಳಿ ಹೆಚ್ಚಿನ ಹಣ ಇದೆ ಎಂದು ಶರತ್ ನನ್ನು ಅಪಹರಿಸಿ ಹಣ ಪಡೆಯುವ ಸಂಚು ರೂಪಿಸಿದ್ದ ಎನ್ನಲಾಗಿದೆ.

ಕೊಲೆಯಾದ ನಂತರವೂ ವಿಶಾಲ್ ಇವರ ಮನೆಗೆ ಬರುತ್ತಿದ್ದು, ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಪೊಲೀಸರು ಈತನ ಮೇಲೆ ಶಂಕೆ ವ್ಯಕ್ತಪಡಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.

ಕಳೆದ ಸೆಪ್ಟೆಂಬರ್ 12 ರಂದು ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ನಿರಂಜನ್ ಎಂಬುವರ ಪುತ್ರ ಶರತ್ನ ಅಪಹರಿಸಿದ್ದ ಬಂಧಿತರು 50 ಲಕ್ಷ ರೂಪಾಯಿ ಹಣ ಕೊಡುವ ಬೇಡಿಕೆಯ ವಿಡಿಯೋ ವಾಟ್ಸಪ್ ಮಾಡಿ, ಶರತ್ ಫೋನಿನಿಂದ ಸಂದೇಶ ಕಳುಹಿಸಿದ್ದರು. ಈ ರೀತಿಯ ಎರಡು ವಿಡಿಯೊ ವಾಟ್ಸಪ್ ಸಂದೇಶಗಳು ಶರತ್ ಫೋನಿನಿಂದ ಐಟಿ ಅಧಿಕಾರಿಗೆ ಬಂದಿತ್ತು.  ಈ ವಾಟ್ಸಪ್ ನಲ್ಲಿ ಹಣಕೊಟ್ಟು ಹೇಗಾದರೂ ಮಾಡಿ ನನ್ನನ್ನು ಉಳಿಸಿಕೊಳ್ಳಿ, ನನ್ನ ಅಕ್ಕನನ್ನು ಸೇಫ್ ಮಾಡಿ, ಇವರ ಬಳಿ ದೊಡ್ಡ ವೆಪನ್ ಇದೆ ಎಂದು ವಾಟ್ಸಪ್ ಸಂದೇಶದಲ್ಲಿ ಶರತ್ ಹೇಳಿದ್ದ.

ಈ ವಾಟ್ಸಪ್ ಸಂದೇಶ ಬಂದ ನಂತರ ಐಟಿ ಅಧಿಕಾರಿ ನಿರಂಜನ್ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣಕಾರರ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಬಂಧಿತರನ್ನು ಪೊಲೀಸರು ವಿಚಾರಿಸಿದ್ದರಾದರೂ ಏನು ಗೊತ್ತಿಲ್ಲ ಎಂಬಂತೆ ನಾಟಕ ಆಡಿ ಪೊಲೀಸರಿಗೆ ದಾರಿ ತಪ್ಪಿಸಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ