ರಸ್ತೆ ಅಪಘಾತ ಮೂವರು ಬಲಿ !

Kannada News

22-09-2017

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ದಂಪತಿ ಮತ್ತು ಅವರ ಪುತ್ರ ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಹೊಸೂರು ರಸ್ತೆಯ ಸೇಂಟ್ ಜಾನ್ಸ್ ಸಿಗ್ನಲ್ ಬಳಿ ನಡೆದಿದೆ.

ನಗರದ ರಾಮಚಂದ್ರಪುರದ ನಿವಾಸಿಗಳಾದ ಬಟ್ಟೆ ವ್ಯಾಪಾರಿ ಫಯಾಜ್ (34) ಆತನ ಪತ್ನಿ ಸುಲ್ತಾನ (28) ಇವರ ಪುತ್ರ ಅಬ್ದುಲ್ (7) ಮೃತ ದುರ್ದೈವಿಗಳು. ಹೊಸೂರು ರಸ್ತೆಯ ಸೇಂಟ್ ಜಾನ್ಸ್ ಬಳಿ ನಿಂತಿದ್ದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಲಾರಿ ಚಕ್ರ ಹರಿದು ದ್ವಿಚಕ್ರ ವಾಹನದಲ್ಲಿದ್ದ ಮೂವರು ಮೃತಪಟ್ಟರು ಎನ್ನಲಾಗಿದೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಶ್ರೀರಾಮಪುರ ನಿವಾಸಿಗಳಾದ ಮೃತರು ಮಡಿವಾಳದಲ್ಲಿರುವ ಅಜ್ಜಿ ಮನೆಗೆ ತೆರಳುತ್ತಿದ್ದು, ಸಿಗ್ನಲ್ ಬಳಿ ಹೋಂಡಾ ಆಕ್ಟಿವಾ ಬರುತ್ತಿದ್ದಂತೆಯೇ ಹಿಂದಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ.

ಕೆಳಗೆ ಬಿದ್ದ ಮೂವರ ಮೇಲೂ ಟ್ರಕ್ ನ ಹಿಂದಿನ ಚಕ್ರ ಹರಿದು ಫಯಾಜ್ ಮತ್ತು ಅವರ ಪುತ್ರ ಅಬ್ದುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾಗಿದ್ದ ಸುಲ್ತಾನ ಅವರನ್ನು ಪಕ್ಕದಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ತೀವ್ರ ರಕ್ತಸ್ರಾವದಿಂದ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಸಂಡೆ ಬಜಾರಿನಲ್ಲಿ ಬಟ್ಟೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಫಯಾಜ್ ತನ್ನ ಮಗನನ್ನು ಮಡಿವಾಳದಲ್ಲಿರುವ ಅಜ್ಜಿ ನೋಡಬೇಕು ಎಂದಿದ್ದಕ್ಕೆ ಕುಟುಂಬ ಸಮೇತರಾಗಿ ಹೋಗುತ್ತಿದ್ದರು ಎನ್ನಲಾಗಿದೆ.  ಅಪಘಾತ ಆದ ತಕ್ಷಣವೇ ಲಾರಿ ಚಾಲಕ ಲಾರಿ ನಿಲ್ಲಿಸಿ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಮಡಿವಾಳ ಸಂಚಾರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ರಸ್ತೆ ಅಪಘಾತ ಅಪಘಾತ ಬಲಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ