ಬಿಜೆಪಿ-ಕಾಂಗ್ರೆಸ್ ನಿಂದ ರಾಜ್ಯಕ್ಕೆ ಅನ್ಯಾಯ..?

Kannada News

21-09-2017

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳನ್ನು ಬಿಟ್ಟು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಬಯಸಿರುವುದೇ ಅವರು ಹೆದರಿಕೊಂಡಿದ್ದಾರೆ ಎಂಬುದರ ಸಂಕೇತ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

ವಿಧಾನಸೌಧದಲ್ಲಿಂದು ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ನಾಯಕ ಎನ್.ಹೆಚ್.ಕೋನರೆಡ್ಡಿ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೂರೈವತ್ತು ಕ್ಷೇತ್ರ ಗೆಲ್ಲುವುದಾಗಿ ಬಿಜೆಪಿ ಸಮೀಕ್ಷೆ ಮಾಡಿಸಿದೆ. ನೂರಾ ಮೂವತ್ತಕ್ಕೂ ಹೆಚ್ಚು ಸೀಟು ಗೆಲ್ಲುವುದಾಗಿ ಕಾಂಗ್ರೆಸ್ ಸಮೀಕ್ಷೆ ಮಾಡಿಸಿದೆ ಎಂದರು.

ಹೀಗೆ ಸ್ವಯಂಬಲದ ಮೇಲೆ ಗೆಲ್ಲುವ ವಿಶ್ವಾಸವಿದ್ದವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಯಾಕೆ ಓಡಿ ಬರುತ್ತಿದ್ದಾರೆ? ಅದೇನು ಉಪಕಾರ ಮಾಡಿದ್ದಾರೆ?ಎಂದು ಆ ಭಾಗಕ್ಕೆ ಬರುತ್ತಿದ್ದಾರೆ?ಎಂದು ಪ್ರಶ್ನಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇವತ್ತು ಈ ನಾಡಿಗೆ ಏನಾದರೂ ಒಳ್ಳೆಯದಾಗುವುದಿದ್ದರೆ ಅದು ಜೆಡಿಎಸ್‍ ನಂತಹ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಇವತ್ತು ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಕುರಿತು ಮಾತು ಕೇಳಿ ಬರುತ್ತಿದೆ. ಇದು ಬಿಜೆಪಿಯವರು ನಮಗೆ ಮಾಡುತ್ತಿರುವ ಅನ್ಯಾಯ. ಒಂದು ಸಲ ಇದನ್ನು ಒಪ್ಪಿಕೊಂಡರೆ ರಾಜ್ಯದ ಎಲ್ಲ ಆಣೆಕಟ್ಟುಗಳನ್ನು ನಿಯಂತ್ರಣ ಮಾಡಲು ಇವರು ಸಜ್ಜಾಗುತ್ತಾರೆ.

ಹೀಗಾಗಿ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಏನಾದರೂ ಮುಂದಡಿ ಇಟ್ಟರೆ ರಾಜ್ಯಾದ್ಯಂತ ಜೆಡಿಎಸ್ ಉಗ್ರ ಪ್ರತಿಭಟನೆ ಮಾಡಲಿದೆ. ಕಾವೇರಿ ನದಿ ನೀರಿನ ಮೇಲಿನ ನಮ್ಮ ಹಕ್ಕನ್ನು ಉಳಿಸಿಕೊಳ್ಳಲಿದೆ ಎಂದು ನುಡಿದರು.

ಕಳಸಾ-ಬಂಡೋರಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‍ ಗಳೆರಡರಿಂದಲೂ ಅನ್ಯಾಯವಾಗಿದೆ. ಇವತ್ತಿಗೂ ವಿವಾದ ಬಗೆಹರಿದಿಲ್ಲ. ವಿವಾದ ಬಗೆಹರಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರಾದರೂ ಯಾವ ರೀತಿಯ ಪ್ರಗತಿಯೂ ಆಗಿಲ್ಲ ಎಂದರು.

ಇದೇ ರೀತಿ ಡಾ|| ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ನೀಡುವ ಕೆಲಸ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರದಿಂದ ಆಗುತ್ತಿಲ್ಲ. ಆಗುವ ಲಕ್ಷಣಗಳೂ ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಹೈದ್ರಾಬಾದ್-ಕರ್ನಾಟಕ ಭಾಗವನ್ನು 371(ಜೆ)ಅಡಿ ಅಭಿವೃದ್ಧಿ ಪಡಿಸುವ ವಿಷಯದಲ್ಲೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಹೀಗೆ ಪ್ರತಿಯೊಂದು ವಿಷಯವನ್ನು ತೆಗೆದುಕೊಂಡರೂ ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಇಷ್ಟಾದರೂ ತಮ್ಮ ತಮ್ಮ ಕ್ಷೇತ್ರಗಳನ್ನು ಬಿಟ್ಟು ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧಿಸಿದರೆ ಜನ ಇವರಿಗೆ ಮನ್ನಣೆ ನೀಡುತ್ತಾರೆ ಎಂದು ಭ್ರಮಿಸಿದ್ದಾರೆ. ಆದರೆ ಕಾದು ನೋಡುತ್ತಿರಿ. ಪವಾಡ ಸದೃಶವಾದ ತೀರ್ಪೋಂದನ್ನು ಉತ್ತರ ಕರ್ನಾಟಕದ ಜನ ನೀಡಲಿದ್ದಾರೆ ಎಂದು ನುಡಿದರು.

ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿಯವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದಾಗ ಇವೇ ರಾಷ್ಟ್ರೀಯ ಪಕ್ಷಗಳು ವ್ಯಂಗ್ಯವಾಡಿದ್ದವು. ಈಗ ತಾವೇ ಓಡೋಡಿ ಉತ್ತರ ಕರ್ನಾಟಕ ಭಾಗಕ್ಕೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಾಲ ಮನ್ನಾ ವಿಷಯದಲ್ಲೂ ಇದೇ ಕತೆ. ಹೆಸರಿಗೆ ಸರ್ಕಾರ ಸಾಲ ಮನ್ನಾ ಆದೇಶ ಹೊರಡಿಸಿದೆ. ಆದರೆ ಸಾಲ ಮನ್ನಾ ಆಗಿಲ್ಲ. ಬ್ಯಾಂಕುಗಳಿಗೆ ದುಡ್ಡು ನೀಡಿಲ್ಲ. ಇವತ್ತು ಹಳ್ಳಿಗಾಡಿನಲ್ಲಿ ಎಂತಹ ಪರಿಸ್ಥಿತಿ ಇದೆ ಎಂದರೆ ಒಂದು-ಎರಡು ಸಾವಿರ ರೂಪಾಯಿಗಳೂ ಇಲ್ಲದೆ ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿ ಕೂರಿಸುವ ಸ್ಥಿತಿಯಿದೆ ಎಂದು ನುಡಿದರು.

ಇದೇ ತಿಂಗಳ ಇಪ್ಪತ್ಮೂರರಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಣ್ಣ ಶಸ್ತ್ರ ಚಿಕಿತ್ಸೆ ನಡೆಯಲಿದ್ದು ಇದಕ್ಕಾಗಿ ಯಾರೂ ಆತಂಕಪಡಬೇಕಾಗಿಲ್ಲ. ಇವತ್ತು ಹಳ್ಳಿಗಳಲ್ಲಿ ರೈತರು ಕುಮಾರಸ್ವಾಮಿಯವರ ಆರೋಗ್ಯಕ್ಕಾಗಿ ಪೂಜೆ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ