ಹಂತಕನ ರೇಖಾ ಚಿತ್ರ ರೆಡಿ !

Kannada News

21-09-2017

ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಹಂತಕರ ಪತ್ತೆಗೆ ಮಹತ್ವದ ಮಾಹಿತಿಯನ್ನು ಕಲೆ ಹಾಕಿರುವ ನಡುವೆಯೇ ಹಂತಕನ ರೇಖಾಚಿತ್ರವನ್ನು ಬಿಡಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.

ಗೌರಿ ಲಂಕೇಶ್ ಅವರ ಮನೆಯ ಮುಂದಿನ ಸಿಸಿಟಿವಿಯ ದೃಶ್ಯದ ಆಧಾರದ ಮೇಲೆ ಹಾಗೂ ಪ್ರತ್ಯೇಕದರ್ಶಿಗಳು ನೀಡಿರುವ ಮಾಹಿತಿ ಆಧರಿಸಿ ನುರಿತ ರೇಖಾಚಿತ್ರಕಾರರಿಂದ ಪೊಲೀಸರು ಹಂತಕನ ರೇಖಾಚಿತ್ರವನ್ನು ಬರೆಸಿದ್ದಾರೆ ಎನ್ನಲಾಗಿದೆ.

ಈ ರೇಖಾಚಿತ್ರವನ್ನು ತನಿಖಾ ದಳದ ಅಧಿಕಾರಿಗಳು ವಿಚಾರವಾದಿ ಪನ್ಸಾರೆ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ಕಳುಹಿಸಿ ಅಲ್ಲಿಂದಲೂ ಮಾಹಿತಿ ಪಡೆಯುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಗೊತ್ತಾಗಿದೆ.  ಈ ಹಂತಕನ ರೇಖಾಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದು ತನಿಖಾ ದಳದ ಮೂಲಗಳು ಹೇಳಿವೆ.

ತನಿಖಾಧಿಕಾರಿಗಳು ಈಗ ಬರೆಸಿರುವ ರೇಖಾಚಿತ್ರದಲ್ಲಿ ಹಂತಕ ಫಾರ್ಮಲ್ ಶರ್ಟ್ ಧರಿಸಿದ್ದು, ಬಿಳಿ ಬಣ್ಣದ ಹೆಲ್ಮೆಟ್ ಹಾಕಿರುವ ಆತ ಕೈಗೆ ರಿಸ್ಟ್ ಬ್ಯಾಂಡ್ ಹಾಗೂ ಕೈಗಡಿಯಾರ ಕಟ್ಟಿಕೊಂಡಿರುವ ರೀತಿಯಲ್ಲಿ ಚಿತ್ರ ಇದ್ದು, ಜತೆಗೆ ಕತ್ತಿನಲ್ಲಿ ಕೆಲಸ ಮಾಡುವ ಕಂಪನಿಯ ಐಡಿ ಕಾರ್ಡ್ ಕೂಡ ಬಿಡಿಸಲಾಗಿದೆ.  ಈ ರೇಖಾಚಿತ್ರವನ್ನು ಗಮನಿಸಿದರೆ ಹಂತಕ ತನ್ನ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಬಂದು ಗೌರಿ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನುವ ರೀತಿಯಲ್ಲಿ ಬಿಂಬಿತವಾಗಿದೆ.

ಕಂಪನಿಯಲ್ಲಿ ಕೆಲಸ ಶಂಕೆ : ಗೌರಿ ಹತ್ಯೆಯಲ್ಲಿ ಭಾಗಿಯಾಗಿರುವ ಹಂತಕ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿರಬಹುದು ಎಂಬ ಶಂಕೆಯನ್ನೂ ಎಸ್‍ಐಟಿ ಅಧಿಕಾರಿಗಳು ವ್ಯಕ್ತಪಡಿಸಿ ಈ ನಿಟ್ಟಿನಲ್ಲೂ ತನಿಖೆಯನ್ನು ಮುಂದುವರೆಸಿದ್ದಾರೆ.  ಐಡಿ ಕಾರ್ಡ್ ನ ವಿವರಗಳು ಸಿಸಿಟಿವಿಯ ದೃಶ್ಯದಲ್ಲಿ ಸೆರೆಯಾಗಿಲ್ಲ, ಹೆಲ್ಮೆಟ್ ಹಾಕಿರುವ ಕಾರಣ ಹಂತಕನ ಮುಖ ಕೂಡ ಪೂರ್ಣವಾಗಿ ಸಿಸಿಟಿವಿಯಲ್ಲಿ ಕಾಣಿಸುತ್ತಿಲ್ಲ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ