ಮಂಡಳಿ‌‌ ರಚನೆಗೆ ಆದೇಶ ಮಾಡಿಲ್ಲ..?

Kannada News

21-09-2017

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಮೊದಲಿನಿಂದಲೂ ನಮ್ಮ ವಿರೋಧವಿದ್ದು, ಈ ನಿಲುವನ್ನು ಸುಪ್ರೀಂಕೋರ್ಟ್ ನಲ್ಲಿ ಬಲವಾಗಿ ಪ್ರತಿಪಾದಿಸುವಂತೆ ನಮ್ಮ ವಕೀಲರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ವಿಶ್ವಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರು ಮಾತನಾಡಿ, ‌ ಮಂಡಳಿ ರಚನೆಗೆ ಅವಕಾಶ ಮಾಡಿಕೊಟ್ಟು ಕಾವೇರಿ ಕಣಿವೆಯ ರೈತರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ. ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದ್ದು ಆತಂಕ ಬೇಡ ಎಂದರು.  ವಿಚಾರಣೆ ವೇಳೆ ನ್ಯಾಯಾಲಯದಲ್ಲಿ‌ ನ್ಯಾಯಮೂರ್ತಿಗಳು  ಸಾಂದರ್ಭಿಕವಾಗಿ ಮಂಡಳಿ‌‌ ರಚನೆ ವಿಚಾರ ಪ್ರಸ್ತಾಪ ಮಾಡಿದ್ದಾರೆಯೇ ಹೊರತು ಆದೇಶ ಮಾಡಿಲ್ಲ ಎಂದು ತಿಳಿಸಿದರು.

ಇನ್ನು ನಾಡಿನ ಸಮಸ್ತ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದ ಸಿಎಂ ಸಿದ್ದರಾಮಯ್ಯ, ನಾಡೋಜ ಕೆ.ಎಸ್.ನಿಸಾರ್ ಅಹಮದ್ ಅವರು ಕವಿ ಮಾತ್ರವಲ್ಲ, ವೈಚಾರಿಕ ಬರಹಗಾರರು. ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟವರು. ಬಹಳ ವರ್ಷಗಳಿಂದ ನನಗೆ ಅವರ ಸಂಪರ್ಕ ಇದೆ.

ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ನಿಸಾರ್ ಅಹಮದ್ ಸೇರಿದಂತೆ ಅನೇಕ ಖ್ಯಾತ ಸಾಹಿತಿಗಳು ಸಮಿತಿಯಲ್ಲಿದ್ದರು, ನನ್ನ ಬಗ್ಗೆ ಅವರಿಗೆ ಅಪಾರ ಅಭಿಮಾನ ಇದೆ. ಸೌಮ್ಯ ಸ್ವಭಾವದ ನಿಸಾರ್ ಅಹಮದ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ಸಾಹಿತಿಗಳ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವವರು. ಅವರಿಗೆ ನಾಡಿನ ಜನರ ಪರವಾಗಿ ಅಭಿನಂದನೆಗಳು ತಿಳಿಸಿದರು.

ಮೈಸೂರು ದಸರಾ ಆರಂಭವಾಗಿ 400 ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ನಮ್ಮಪ್ಪನ ಹೆಗಲ ಮೇಲೆ ಕುಳಿತು ನಾನು ಮೊದಲ ಬಾರಿಗೆ ದಸರಾ ನೋಡಿದ್ದೆ. ಮುಖ್ಯಮಂತ್ರಿಯಾಗಿ ಐದು ದಸರಾ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇನ್ನೂ ಐದು ವರ್ಷ ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಭಾಗವಹಿಸುವ ಆಶಯ ಇದೆ. ರಾಜ್ಯದ ಜನ ಆಶೀರ್ವಾದ ಮಾಡಿದರೆ ಆ ಆಶಯ ನೆರವೇರುತ್ತದೆ. ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದರು.

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರು ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಿಸಿದೆ. ಆದರೆ, ರೈತರ ಬೆಳೆಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀರು ಕೊಡಲಾಗಿಲ್ಲ. ಬದಲಿಗೆ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಪಯತ್ನ ಮಾಡುತ್ತಿದ್ದೇವೆ. ಈಗ ಮಳೆ ಆಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯಾದ್ಯಂತ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. 60 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ಮಾಹಿತಿ ನೀಡಿದರು.

ನಾಡಿನ ಹಲವಾರು ಜಲಾಶಯಗಳು ಭರ್ತಿ ಆಗಿಲ್ಲ.‌ ಕಬಿನಿ ಸೆಪ್ಟೆಂಬರ್ ತಿಂಗಳಲ್ಲಿ ಭರ್ತಿಯಾಗಿರುವುದು ವಿಶೇಷ. ಕೆ.ಆರ್.ಎಸ್. ಸಹ ತುಂಬಲಿ ಎಂದು ಪ್ರಾರ್ಥಿಸೋಣ.  ವಿಶೇಷ ಪೂಜೆ ಮಾಡೋಣ ಎಂದರು.

ಮೈಸೂರು ಸಾಂಸ್ಕೃತಿಕ ರಾಜಧಾನಿ. ಯದುವಂಶದ ರಾಜರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರು. ಮೈಸೂರು ಪ್ರವಾಸೋದ್ಯಮದ ಭೂಪಟದಲ್ಲಿ ಅಗ್ರ ಸ್ಥಾನದಲ್ಲಿದೆ. ದೇಶ, ವಿದೇಶದ ಪ್ರವಾಸಿಗರು ಪ್ರತಿವರ್ಷ ಬಂದು ದಸರೆಯ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಮೈಸೂರು ನಗರವನ್ನು ವಿದ್ಯುತ್ ದೀಪಗಳ ಮೂಲಕ ಅದರಲ್ಲೂ ಎಲ್.ಇ.ಡಿ ಬಲ್ಬ್ ಗಳನ್ನು ಬಳಸಿ ವಿಶೇಷವಾಗಿ ಸಿಂಗರಿಸುವಂತೆ ಸೂಚಿಸಿದ್ದೇನೆ ಎಂದರು.

ಬುದ್ದ, ಬಸವ, ಅಂಬೇಡ್ಕರ್, ಕುವೆಂಪು ಮಹಾತ್ಮ ಗಾಂದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿತ್ರಗಳನ್ನು ಬಿಂಬಿಸಲು ಹೇಳಿದ್ದೇನೆ. ಸಹಬಾಳ್ವೆ, ಸಮಾನತೆ ಸಾರಿದ ಈ ಮಹಾನ್ ಪುರುಷರನ್ನು ನೆನೆಯುವುದು ಅಗತ್ಯ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ, ದಸರಾ ಮೆರವಣಿಗೆ ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿರುತ್ತದೆ. ಮೆರವಣಿಗೆಗೆ ರಕ್ಷಣಾ ಪಡೆಯ ಒಂದು ತುಕಡಿ ಕಳುಹಿಸುವಂತೆ ರಕ್ಷಣಾ ಸಚಿವರನ್ನು ಕೋರಿದ್ದೇನೆ. ದಸರೆಯ ಸಂದರ್ಭದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದ್ದೇನೆ.

ದಸರಾ ಉತ್ಸವ ಜನರ ಹಬ್ಬ. ಈ ಹಬ್ಬವನ್ನು ನಿಸಾರ್ ಅಹಮದ್ ಅವರು ಉದ್ಘಾಟನೆ ಮಾಡಿರುವುದು ಹೆಚ್ಚು ಸಂತಸ ತಂದಿದೆ. ಉತ್ಸವಕ್ಕೆ ಅರ್ಥ ಬಂದಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ಮಂಡಳಿ‌‌ ಆದೇಶ ಮಾಡಿಲ್ಲ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ