'ತಪ್ಪಾಯಿತು ಕ್ಷಮಿಸಿ' ಕಳ್ಳರ ಪತ್ರ !

Kannada News

19-09-2017 532

ಮಂಗಳೂರು: ಮನೆಯಿಂದ ಕದ್ದ ಚಿನ್ನಾಭರಣಗಳನ್ನು ಮೂರೇ ದಿನಗಳಲ್ಲಿ ಕಳ್ಳರು ವಾಪಸ್ ಅದೇ ಮನೆಯ ಅಂಗಳಕ್ಕೆ ಎಸೆದು ಮನೆ ಮಂದಿಗೆ ಹಾಗೂ ಪೊಲೀಸರಿಗೆ ಆಶ್ಚರ್ಯ ಉಂಟು ಮಾಡಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ನಗರದ ಅಡುಮರೋಳಿಯ ಮಾರಿಕಾಂಬಾ ದೇವಸ್ಥಾನದ ಬಳಿಯ ಶೇಖರ್ ಕುಂದರ್ ಅವರ ಮನೆಯಿಂದ ಕಳೆದ ಶನಿವಾರ ಹಾಡಹಗಲೇ ಬೆಲೆಬಾಳುವ ಚಿನ್ನಾಭರಣಗಳು ಮತ್ತು 13,000 ರೂ. ನಗದು ಕಳವಾಗಿತ್ತು. ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಷ್ಟೂ ಚಿನ್ನ ಮತ್ತು ನಗದನ್ನು ಚೀಟಿ ಯೊಂದಿಗೆ ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ.

ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಯ ಅಂಗಳಕ್ಕೆ ಕಾಗದದಲ್ಲಿ ಸುತ್ತಿದ ಕಟ್ಟೊಂದು ದಿಢೀರನೆ ಬಂದು ಬಿದ್ದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಮನೆ ಮಾಲಿಕ ಮತ್ತು ಸಂಬಂಧಿಕರು ಇದ್ದರು, ಅಂಗಳದಲ್ಲಿ ಬಿದ್ದದ್ದೇನೆಂದು ಮನೆಯ ಬಾಗಿಲು ತೆರೆದು ನೋಡುವಷ್ಟರಲ್ಲಿ ಬೈಕ್ ನಲ್ಲಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮನೆಯಲ್ಲಿದ್ದವರು ಅಂಗಳಕ್ಕೆ ಹೋಗಿ ಕಟ್ಟು ಬಿಚ್ಚಿ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಶನಿವಾರ ಮನೆಯಿಂದ ಕಳವಾಗಿದ್ದ ಪೂರ್ತಿ ಚಿನ್ನಾಭರಣ ಅದರಲ್ಲಿದ್ದವು. ಜತೆಗೆ ಒಂದು ಕಾಗದದಲ್ಲಿ ನೋಟ್ ಬರೆಯಲಾಗಿತ್ತು. ಚಿನ್ನವನ್ನು ಪ್ಲಾಸ್ಟಿಕ್ ತಟ್ಟೆಯಲ್ಲಿ ಹಾಕಿ ಅದನ್ನು ಹೊರಗಿನಿಂದ ಪೇಪರ್ನಲ್ಲಿ ಸುತ್ತಲಾಗಿತ್ತು.

ಬರಹದಲ್ಲೇನಿದೆ: "ನಮ್ಮದು ತಪ್ಪಾಯಿತು. ಕ್ಷಮಿಸಿ. ಇಷ್ಟೊಂದು ಚಿನ್ನವನ್ನು ಬ್ಯಾಂಕಿನಲ್ಲಿ ಇಡಬೇಕಿತ್ತು. ಮನೆಯಲ್ಲಿ ಯಾಕಿಟ್ಟಿರಿ? ಇನ್ನಾದರೂ ಜಾಗ್ರತೆ ವಹಿಸಿ' ಎಂದು ಕಾಗದದಲ್ಲಿ ಬರೆಯಲಾಗಿದೆ. ಚಿನ್ನವನ್ನು ಕೊಂಡೊಯ್ದವವರು ಯಾರು, ವಾಪಸ್ ತಂದದ್ದೇಕೆ ಎನ್ನುವುದು ತಿಳಿದು ಬಂದಿಲ್ಲ. ಬೈಕ್ ನಲ್ಲಿ ಬಂದವರ ಸುಳಿವು ಲಭ್ಯವಾಗಿದೆ ಎಂದು ತನಿಖೆ ನಡೆಸುತ್ತಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ: ಶೇಖರ್ ಕುಂದರ್ (60) ಕಳೆದ ಶನಿವಾರ ಬೆಳಗ್ಗೆ 9.10ರ ವೇಳೆಗೆ ಕೋಡಕಲ್ ಶೋರೂಂಗೆ ಮೆಕಾನಿಕಲ್ ಕೆಲಸಕ್ಕೆ ಹಾಗೂ ಅವರ ಪತ್ನಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಟೈಪಿಸ್ಟ್ ಆಗಿರುವ ತಿಲೋತ್ತಮ ಅವರು 9.50ರ ವೇಳೆಗೆ ಮನೆಯಿಂದ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ, ಬೆಳಗ್ಗೆ 9.50ರಿಂದ ಮಧ್ಯಾಹ್ನ 1.20ರ ವೇಳೆಗೆ ಕಳವು ನಡೆದಿತ್ತು. ಮಧ್ಯಾಹ್ನ 1.20ರ ಹೊತ್ತಿಗೆ ಶೇಖರ್ ಅವರು ಮನೆಗೆ ಊಟಕ್ಕೆ ಬಂದು ಬಾಗಿಲು ತೆಗೆದು ಒಳಪ್ರವೇಶಿಸಿದಾಗ ರೂಮಿನಲ್ಲಿ ಎಲ್ಲ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಪಾಟು ಬಾಗಿಲು ತೆರೆದಿದ್ದು, ಚಿನ್ನ ಇಡುತ್ತಿದ್ದ ಲಾಕರ್ನಲ್ಲಿ ಕರಂಡಿಗೆ ಖಾಲಿ ಬಿದ್ದಿತ್ತು. ಇದರಿಂದ ಕಳವು ನಡೆದಿರುವುದು ಸ್ಪಷ್ಟವಾದ ಕೂಡಲೇ ಶೇಖರ್ ಅವರು ಪತ್ನಿಗೆ ಫೋನ್ ಮಾಡಿ ಕರೆಸಿಕೊಂಡಿದ್ದರು. ಪತ್ನಿ ಮನೆಗೆ ಬಂದು ನೋಡುವಾಗ ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು 13,000 ರೂ. ಕಳವಾಗಿರುವುದು ತಿಳಿದು ಬಂದಿತ್ತು. ಇದೀಗ ಚಿನ್ನಾಭರಣ ಮನೆಗೆ ವಾಪಸ್ ಬಂದಿದ್ದು ಕುಟುಂಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ