ಆತ್ಮಹತ್ಯೆಗೆ ಯತ್ನಿಸಿದ ಬಿ.ಎಂ.ಟಿ.ಸಿ ಚಾಲಕ !

Kannada News

19-09-2017

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶಾಂತಿನಗರದ ಡಿಪೋ 2ಕ್ಕೆ ಸೇರಿದ ಬಸ್ ಚಾಲಕನೊಬ್ಬ, ಡಿಪೋ ಮ್ಯಾನೇಜರ್ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ಸಿಟ್ಟಿಗೆದ್ದಿರುವ ಸಿಬ್ಬಂದಿ ಸೋಮವಾರ ಧರಣಿ ನಡೆಸಿದ್ದರಿಂದ ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು. ಹಿರಿಯ ಅಧಿಕಾರಿಗಳ ಸಂಧಾನದಿಂದ ಸಿಬ್ಬಂದಿ ಪ್ರತಿಭಟನೆ ಹಿಂಪಡೆದರು.

ಶಾಂತಿನಗರದ ಬಸ್ ಡಿಪೋ, ಚಾಲಕ ಮಧು ಎಂಬುವರು ಡಿಪೋ ಮ್ಯಾನೇಜರ್ ಅವರ ಕಿರುಕುಳ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ತಕ್ಷಣವೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬದುಕು- ಸಾವಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಸಹೋದ್ಯೋಗಿ ಬಸ್ ಚಾಲಕ ಆತ್ಮಹತ್ಯಾ ಯತ್ನ ವಿಚಾರ ತಿಳಿದ ಬಸ್ ಡಿಪೋದ ಸಿಬ್ಬಂದಿ, ಚಾಲಕ ಹಾಗೂ ನಿರ್ವಾಹಕರು ಸೋಮವಾರ ಬೆಳಿಗ್ಗೆನಿಂದಲೇ ಡಿಪೋ ಮ್ಯಾನೇಜರ್ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಸ್ ಚಾಲಕರ ಹಾಗೂ ನಿರ್ವಾಹಕರ ಪ್ರತಿಭಟನೆಯಿಂದ ಈ ಡಿಪೋದಿಂದ ಹೊರಡುವ ಬಸ್ ಗಳ ಸಂಚಾರ ವ್ಯತ್ಯಯವಾಗಿತ್ತು.

ಬಸ್ ಚಾಲಕ ಹಾಗೂ ನಿರ್ವಾಹಕ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಪೋ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಿಬ್ಬಂದಿಗಳ ಮನವೊಲಿಸಿ, ಪ್ರತಿಭಟನೆಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರು.

ಪ್ರತಿಭಟನಾ ನಿರತ ಬೇಡಿಕೆಯಂತೆ ಡಿಪೋ ಮೆಕ್ಯಾನಿಕ್ ಶಿವಪ್ರಕಾಶ್ ಎತ್ತಂಗಡಿಗೆ ಹಾಗೂ ಟ್ರಾಫಿಕ್ ನಿರ್ವಾಹಣೆಗಾರ ಉಗ್ರಪ್ಪ ಅವರ ವರ್ಗಾವಣೆಗೆ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದ್ದು, ಪ್ರತಿಭಟನೆ ಅಂತ್ಯವಾಗಲು ಸಹಕಾರಿಯಾಯಿತು. ಬಿಎಂಟಿಸಿ ಪ್ರಧಾನ ವ್ಯವಸ್ಥಾಪಕ ವಿಶ್ವನಾಥಯ್ಯ ಅವರೇ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾ ವಿರುದ್ಧ ಸಿಬ್ಬಂದಿಯೊಂದಿಗೆ ಸಂಧಾನ ನಡೆಸಿ ಪರಿಸ್ಥಿತಿ ಅತಿರೇಕಕ್ಕೆ ಹೋಗದಂತೆ ಎಲ್ಲವನ್ನು ತಿಳಿಗೊಳಿಸಿದರು.

ಪ್ರತಿಭಟನಾ ವಾಪಸ್ಸು ನಂತರ ಬಸ್ ಚಾಲಕರು ಹಾಗೂ ಸಿಬ್ಬಂದಿ ಬಸ್‍ ಗಳನ್ನು ಡಿಪೋದಿಂದ ಹೊರತೆಗೆದ ಮೇಲೆ ಬಸ್ ಸಂಚಾರ ಮಾಮೂಲಿಯಂತೆ ನಡೆಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ