ಕಾನ್ಫರೆನ್ಸ್ ಕಾಲ್ ಮಾತನಾಡಿದ್ದರಾ ಹಂತಕರು..?

Kannada News

19-09-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿರುವ ಹಂತಕರ ಬಗ್ಗೆ ಪೊಲೀಸರಿಗೆ ಮಹತ್ವ ಸುಳಿವು ಲಭ್ಯವಾಗಿದೆ.

ಗೌರಿ ಹತ್ಯೆಯಲ್ಲಿ 8 ಜನರ ಕೈವಾಡವಿರುವ ಸುಳಿವು ದೊರಕಿದ್ದು, ಈ 8 ಮಂದಿ ಹತ್ಯೆಗೂ ಮೊದಲು ಪರಸ್ಪರ `ಗ್ರೂಪ್ ಕಾಲ್'ನಲ್ಲಿ ಸಂಭಾಷಿಸಿರುವ ಮಾಹಿತಿ ವಿಶೇಷ ತನಿಖಾ ತಂಡ ಕಲೆ ಹಾಕಿ ತನಿಖೆಯನ್ನು ಮತ್ತಷ್ಟು ಚುರುಕುಗಳಿಸಿದೆ.

ಸೆ. 5ರ ರಾತ್ರಿ 7 ರಿಂದ 8 ಗಂಟೆ ಅವದಿಯಲ್ಲಿ ಗೌರಿ ಹತ್ಯೆಯಾಗಿತ್ತು. ಇದೇ ಸಂದರ್ಭದಲ್ಲಿ ಈ 8 ಮಂದಿ ಶಂಕಿತ ಹಂತಕರು ಹಲವಾರು ಬಾರಿ `ಕಾನ್ಫರೆನ್ಸ್ ಕಾಲ್' ನಲ್ಲಿ ಮಾತನಾಡಿರುವ ಸ್ಫೋಟಕ ಮಾಹಿತಿ ಸಿಕ್ಕಿದೆ ಎಂದು ವಿಶೇಷ ತನಿಖಾ ದಳದ ಉನ್ನತ ಮೂಲಗಳು ತಿಳಿಸಿವೆ.

ಈ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿರುವ ವಿಶೇಷ ತನಿಖಾದಳ ಹಂತಕರನ್ನು ಶೀಘ್ರದಲ್ಲಿ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಗಾಂಧಿ ನಗರದಿಂದ ರಾಜರಾಜೇಶ್ವರಿ ನಗರವರೆಗಿನ ಮೊಬೈಲ್ ಟವರ್ಗಳ ಕರೆ ವಿವರಗಳನ್ನು ಎಲ್ಲ 25 ಲಕ್ಷ ಕರೆ ವಿವರಗಳ ಮಾಹಿತಿ ಕಲೆ ಹಾಕಿದ್ದ, ತನಿಖಾ ದಳ ಒಂದೊಂದೇ ಕರೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಒಂದೇ ಕರೆಯಲ್ಲಿ 8 ಮಂದಿ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿರುವ ಮಾಹಿತಿ ಲಭ್ಯವಾಗಿವೆ.

ಈ ಕಾನ್ಫರೆನ್ಸ್ ಕಾಲ್ ನಲ್ಲಿ ಹೊರ ರಾಜ್ಯಗಳಿಂದಲೂ ಮಾತನಾಡಲಾಗಿದ್ದು, ಬೆಂಗಳೂರಿನ 2-3 ಸ್ಥಳ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧೆಡೆಯಿಂದ ಕಾನ್ಫರೆನ್ಸ್ ಕಾಲ್ ನಲ್ಲಿ ಸಂಭಾಷಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆಯಾದ ನಂತರ ಈ ದೂರವಾಣಿ ಸಂಖ್ಯೆಯಿಂದ ಯಾವುದೇ ಕರೆಗಳು ಹೋಗಿಲ್ಲ, ಜೊತೆಗೆ ಸಿಮ್ ಸ್ಥಗಿತಗೊಂಡಿದೆ.

ನಕಲಿ ವಿಳಾಸ: ಈ ದೂರವಾಣಿ ಸಿಮ್ ಮಾಹಿತಿ ಸಂಗ್ರಹಿಸಿರುವ ತನಿಖಾ ದಳ, ನಕಲಿ ವಿಳಾಸ ನೀಡಿ ಸಿಮ್ ಖರೀದಿಸಿರುವುದನ್ನು ಪತ್ತೆ ಹಚ್ಚಿದೆ. ಅದೇ ಜಾಡಿನಲ್ಲಿ ತನಿಖೆ ಮುಂದುವರೆಸಿರುವ ತನಿಖಾ ದಳ ಯಾರು ನಕಲಿ ದಾಖಲೆ ನೀಡಿ ಸಿಮ್ ಖರೀದಿಸಿದ್ದರು. ಯಾವ ಅಂಗಡಿಯಿಂದ ಖರೀದಿಸಲಾಗಿದೆ ಎಂದು, ಈ ಸಿಮ್ ಯಾವಾಗಿಂದ ಬಳಸಲು ಆರಂಭಿಸಲಾಗಿದೆ. ಹೀಗೆ ಎಲ್ಲ ವಿವರಗಳನ್ನು ಕಲೆ ಹಾಕುತ್ತಿದೆ.

ಈ ಕಾನ್ಫರೆನ್ಸ್ ಕರೆಯ ಸಂಪೂರ್ಣ ವಿವರಗಳು ಲಭ್ಯವಾದರೆ ಹಂತಕರ ಜಾಡು ಪತ್ತೆ ಸುಲಭವಾಗಲಿದೆ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ.

ಶತಾಯ-ಗತಾಯ ಈ ಹತ್ಯೆ ಪ್ರಕರಣವನ್ನು ಭೇದಿಸಲು ಐಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದು, ತನಿಖೆ ತೀವ್ರ ಸ್ವರೂಪದಲ್ಲಿ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ