ಉದಯ ನ್ಯೂಸಲ್ಲಿ ನೌಕರರ ಹೋರಾಟ

Kannada News

19-09-2017

ಕನ್ನಡದ ಮೊಟ್ಟ ಮೊದಲ ಖಾಸಗಿ ನ್ಯೂಸ್ ಚಾನಲ್ ಉದಯ ನ್ಯೂಸ್ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ನೌಕರರನ್ನು ಬೇಕಾಬಿಟ್ಟಿಯಾಗಿ, ಅಸಡ್ಡೆಯಿಂದ ನಡೆಸಿಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಲ್ಲಿನ ಉದ್ಯೋಗಿಗಳು, ಉದಯ ನ್ಯೂಸ್ ಚಾನಲ್‌ ನಲ್ಲಿ ಮತ್ತೊಮ್ಮೆ ನೌಕರರ ಹೋರಾಟಕ್ಕೆ ಜೀವ ತುಂಬಿದ್ದಾರೆ.

ಸನ್ ನೆಟ್‌ ವರ್ಕ್ ನವರು ಉದಯ ನ್ಯೂಸ್ ಮುಚ್ಚುವ ಬಗ್ಗೆ ರಾಜ್ಯಸರ್ಕಾರಕ್ಕೆ ಮಾತ್ರ ಮಾಹಿತಿ ನೀಡಿ, ಸಂಸ್ಥೆಯ ಉದ್ಯೋಗಿಗಳಿಗೆ ಏನನ್ನೂ ಹೇಳದಿರುವುದು, ಅವರನ್ನು ಮಾತುಕತೆಗೆ ಕರೆಯದಿರುವುದು ಮತ್ತು ಪರ್ಯಾಯ ಮಾರ್ಗ ಸೂಚಿಸದೇ ಇರುವುದು ಉದ್ಯೋಗಿಗಳ ಸಿಟ್ಟಿಗೆ ಕಾರಣವಾಗಿದೆ.

ಮೊದಲು ಅಕ್ಟೋಬರ್ 24ರಂದು ಉದಯ ನ್ಯೂಸ್ ಚಾನಲ್ ಮುಚ್ಚುತ್ತೇವೆ ಎಂದು ಹೇಳಿದ್ದರು, ಇದೀಗ ನವೆಂಬರ್ ವರೆಗೂ ಮುಂದುವರೆಸುತ್ತೇವೆ ಎಂದೆಲ್ಲಾ ಹೇಳುತ್ತಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಆದ್ದರಿಂದ, ಇದಕ್ಕೆ ಒಂದು ಸ್ಪಷ್ಟ ತಾರ್ಕಿಕ ಅಂತ್ಯ ಸಿಗಬೇಕೆಂದು ಹೋರಾಟ ಆರಂಭಿಸಿದ್ದೇವೆ ಎಂದು ನೌಕರರು ಹೇಳುತ್ತಾರೆ.

ಈಗಾಗಲೇ ಈ ವಿಷಯವಾಗಿ ಯುನಿಯನ್ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಅದರ ಮೂಲಕವೂ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕದ ತಟ್ಟುತ್ತಿದ್ದಾರೆ. ಕಾರ್ಮಿಕ ಇಲಾಖೆಯವರು, ಚಾನಲ್‌ ಗೆ ನೋಟಿಸ್ ನೀಡಿದ್ದಾರೆ. ಉದಯ ನ್ಯೂಸ್ ನೌಕರರ ಸಂಘದ ಅಧ್ಯಕ್ಷರಾಗಿ ವರದಿಗಾರ ಶ್ರೀನಿವಾಸ್, ಕಾರ್ಯಾಧ್ಯಕ್ಷರಾಗಿ ಸಮೀವುಲ್ಲ, ಉಪಾಧ್ಯಕ್ಷರಾಗಿ ನಟರಾಜ್ ಮತ್ತು ಕಾರ್ಯದರ್ಶಿಯಾಗಿ ಪ್ರಸಾದ್ ನೇಮಿಸಲ್ಪಟ್ಟಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಶೋಷಣೆ ವಿರುದ್ಧ ಗೆಲುವಾಗಲಿ
  • ಸತ್ಯಲಿಂಗತಾಜು
  • ಪತ್ರಕರ್ತ