ಕೈಲುಪೊಳ್ದ್  ಸಂತೋಷ ಕೂಟ..

Kannada News

19-09-2017

ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿಯಲ್ಲಿ ಮೂವತ್ತೆಂಟನೇ ವರ್ಷದ, ಕೊಡವರ ಕೈಲುಪೊಳ್ದ್  ಸಂತೋಷ ಕೂಟವು ವಿಜೃಂಭಣೆಯಿಂದ ನಡೆಯಿತು. ಇದು ಕೊಡವರ ಆಚಾರ, ವಿಚಾರ, ಸಂಸ್ಕೃತಿಯ ಹಬ್ಬ.  

ಕಾರ್ಯಕ್ರಮದ  ಮುಖ್ಯ  ಅತಿಥಿಯಾಗಿ  ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ ನವರು ,ದಾಸರಹಳ್ಳಿಯ ಕೊಡವ ಸಮಾಜ ಸ್ಥಾಪನೆಯಾಗಿ ಮೂವತ್ತೆಂಟು ವರ್ಷ ಕಳೆದರೂ, ವರ್ಷದಿಂದ ವರ್ಷಕ್ಕೆ ಇದು ಅಭಿವೃದ್ಧಿ ಕಂಡು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿರುವುದು ತಮಗೆ ಸಂತಸ ತಂದಿದೆ ಎಂದರು. ಬಳಿಕ ಮಾತು ಮುಂದುವರಿಸಿದ ಅವರು,  ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿದ್ದು ಅದರಲ್ಲಿ ನನಗೆ ಕಳೆದ ಮೂರೂ ವರ್ಷದ ಅಧ್ಯಕ್ಷರ ಅವಧಿ ಸಿಕ್ಕಿದ್ದು ,ಅದನ್ನು ನಾನು ಕೊಡಗಿನ ಜನರ ಹಾಗು ಕೊಡಗಿನ  ಹಲವು ಸಂಘಟನೆಯ ಸಹಕಾರದಿಂದ ಎಲ್ಲ ಕೊಡವ ಭಾಷಿಕರನ್ನು ಪರಿಗಣನೆಗೆ ತೆಗೆದುಕೊಂಡು 105 ಕಾರ್ಯಕ್ರಮಗಳನ್ನು ತುಂಬ ಚೆನ್ನಾಗಿ ನಿಭಾಯಿಸಿರುತ್ತೇನೆ ಎಂದರು . ನಮ್ಮ ಸಂಸ್ಕೃತಿಯ ಪ್ರತೀಕವಾದ ಕುಲದೇವರಾದ ಕಾವೇರಿಯನ್ನು ಶುದ್ಧವಾಗಿ ಉಳಿಸಿದರೆ ಮಾತ್ರ ನಮ್ಮ ಏಳಿಗೆ ಸದ್ಯ. ಈಗಿನ  ಪರಿಸ್ಥಿತಿಯಲ್ಲಿ ಕಾವೇರಿ ಕ್ಷೇತ್ರವು ಕೇವಲ ಪ್ರವಾಸಿಗರ ಮೋಜಿನ ತಾಣವಾಗಿದೆ . ತಮ್ಮ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಬೆಂಗಳೂರಿನ  ನಮ್ಮ ಜನಾಂಗ ಬಾಂಧವರಾಗಿ ಕೊಡಗಿನ ಎಲ್ಲ ಜನ ಹಾಗು ಸಂಘಟನೆಗಳು ಕೈ ಜೋಡಿಸಬೇಕೆಂದರು.

ನಂತರ ಮಾತನಾಡಿದ ಇನ್ನೊಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೂಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನವರು, ಕೊಡವರ ಸಂಸ್ಕೃತಿಯು ಹಾಗು ಆಚಾರ ವಿಚಾರ, ಪದ್ದತಿಗಳು ಪ್ರತಿಯೊಂದು ಅವರವರ ಗದ್ದೆಯ ಮೇಲೆ ಅವಲಂಬಿಸಿದೆ ಎಂದರು , ಏಕೆಂದರೆ ಕೊಡವರ ಆರು ಹಬ್ಬ ಹರಿದಿನಗಳಾದ  ಬೇದಚಂಗ್ರಾಂದಿ,  ಎಡಂಯಾರ್ ಒಂದು ,ಕಕ್ಕಡ  ಹದಿನೆಂಟ್ಟು, ಕೈಲೂ ಮೂಹೂರ್ತ ,ತೊಲೆಯರ್ ಚಂಗ್ರಾಂದಿ, ಅಂದರೆ ಕಾವೇರಿ ಸಂಕ್ರಮಣ ,ಮತ್ತು ಪುತ್ತರಿ , ಈ ಎಲ್ಲ ಹಬ್ಬವು ಗದ್ದೆಯ ಉಳುಮೆ ಮತ್ತು ಕೊಯ್ಲಿನ ಮೂಲದಿಂದಲೇ ಬಂದಿದೆ ಎಂದರು. ಅದರಿಂದ ತಾವುಗಳು ಗದ್ದೆಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿ ಜನಾಂಗ ಬಾಂಧವರಿಗೆ ಕಿವಿ ಮಾತು ಹೇಳಿದರು .

ನಂತರ  ಮುಂದುವರಿದ ಅವರು ಕೊಡವ ಜನಾಂಗ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದ್ದು ಅದನ್ನು ನಮ್ಮ ಹಿರಿಯರು  ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರ ಪದ್ಧತಿ ಬಗ್ಗೆ ಸಕಾರಾತ್ಮಕವಾಗಿ ತಿಳಿಸಿ ಜಾಗ್ರತಿ  ಮೂಡಿಸ ಬೇಕೆಂದರು. ತಮ್ಮಲ್ಲಿಯೇ ಸ್ವಂತಿಕೆ ಹಾಗು ಆತ್ಮಗೌರವವನ್ನು ಮೂಡಿಸಿಕೊಂಡು ಹಿರಿಯರಿಗೆ ಗೌರವವನ್ನು ನೀಡುವುದನ್ನು ಮೈಗೂಡಿಸಿಕೊಳ್ಳಬೇಕೆಂದರು .

ಕಾರ್ಯಕ್ರಮದಲ್ಲಿ ದುಡಿಕೊಟ್ಟು ಹಾಡಿನೊಂದಿಗೆ ಗಣ್ಯರನ್ನು ಸ್ವಾಗತಿಸಿ ವೇದಿಕೆಗೆ ಕರೆತಂದರೆ ಕೊಡವ ಸಮಾಜದ ಅಧ್ಯಕ್ಷರಾದ ಅರ್ಮಾಣಮಾಡ ಶಂಕರಿ ಕಾರ್ಯಪ್ಪನವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಸದಸ್ಯರ ವಿವಿಧ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಾದ ಬೊಟ್ಟೋಳಂಡ ಚಾಂದಿನಿ ,ಅಪ್ಪಚೆಟ್ಟೋಳಂಡ ರೋಷನ್ ಪೂಣಚ್ಚ ,ಕೈಪೆಡೆರ ಸ್ಪೂರ್ತಿ ,ಕೊಲೆಂಗದ ವಿನೀತ , ಪುಚ್ಛಂದ ಬೋಪಣ್ಣ ,ಮಾತಂಡ ವಿಮಾಶ್,ನಿಖಿಲ್ ನಾಚಪ್ಪ ,ನೆಲ್ಲಪಟ್ಟಿರ  ಸ್ರೇಯಸ್, ತಾಚಾಮುಂಡ ಅಕ್ಷಯ್ ,ಮುಂತಾದವರನ್ನು ಸನ್ಮಾನಿಸಲಾಯಿತು . ,ವೇದಿಕೆಯಲ್ಲಿ ಅತಿಥಿಗಳಾದ ಪುತ್ತರಿರ ಪಪ್ಪು ತಿಮ್ಮಯ ,ಮಲ್ಲಮಾಡ ದೇವಯ್ಯ ,ಹರ್ಷಿತ್ ಸೋಮಯ್ಯ ಬಿದ್ದಾಟಂಡ ಉಪಸ್ಥಿತರಿದ್ದರು .ಕೊಟ್ರಂದ ಶ್ರೀಕಾಂತ್ ಪೂವಣ್ಣ ನಿರೂಪಿಸಿ ,ಸಮಾಜದ ಕಾರ್ಯದರ್ಶಿಯಾದ ಕೊಪ್ಪಿರ ವಿನು ಕಮಾರ್ ವಂದಿಸಿದರು

ವರದಿ: ಪಪ್ಪು ತಿಮ್ಮಯ


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕೈಲುಪೊಳ್ದ್  ಸಂತೋಷ ಕೂಟ..


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ