ಅಲ್ಪಸಂಖ್ಯಾತರ ಚೇತನವೊಂದು ಕಮರಿದೆ !

Kannada News

18-09-2017 444

ಬೆಂಗಳೂರು: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆರು ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದ ಖಮರುಲ್ ಇಸ್ಲಾಂ ಅವರು ಹೈದರಾಬಾದ್-ಕರ್ನಾಟಕ ಪ್ರದೇಶ ಭಾಗದಲ್ಲಿ ಅತ್ಯಂತ ಜನಪ್ರಿಯ ಜನ ನಾಯಕರಾಗಿದ್ದರು. ಎಸ್ ಎಂ ಕೃಷ್ಣ ಸಂಪುಟದಲ್ಲಿ ವಸತಿ ಹಾಗೂ ಕಾರ್ಮಿಕ ಖಾತೆಯನ್ನು ನಿರ್ವಹಿಸಿದ್ದ ಖಮರುಲ್ ಇಸ್ಲಾಂ ಅವರು ನನ್ನ ಸಚಿವ ಸಂಪುಟದಲ್ಲಿ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹೈದರಾಬಾದ್-ಕರ್ನಾಟಕದ ಅಭಿವೃದ್ಧಿ ಖಮರುಲ್ ಇಸ್ಲಾಂ ಅವರ ಹೃದಯಕ್ಕೆ ಸದಾ ಹತ್ತಿರವಾಗಿತ್ತು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ಬಿದಾಯಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪುಷ್ಠಿ ನೀಡಿದ್ದರು. ರಾಷ್ಟ್ರದ ಗಮನ ಸೆಳೆದ ಈ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರವೇ ಅನುಕರಿಸಲು ಹೊರಟಿದೆ !

ನಮ್ಮ ಸರ್ಕಾರವು ಅಸ್ತಿತ್ವಕ್ಕೆ ಬರುವ ಮುನ್ನ ರಾಜ್ಯದಲ್ಲಿದ್ದ ಅಲ್ಪಸಂಖ್ಯಾತರ ವಸತಿ ನಿಲಯಗಳ ಸಂಖ್ಯೆಗೆ ಪ್ರಸ್ತುತ ಇರುವ ವಸತಿ ನಿಲಯಗಳ ಸಂಖ್ಯೆಯನ್ನು ಹೋಲಿಕೆ ಮಾಡಿದಲ್ಲಿ, ದುಪ್ಪಟ್ಟು-ಮುಪ್ಪಟ್ಟು ಆಗಿದೆ ಎಂಬುದು ಇದೀಗ ಇತಿಹಾಸ. ಇದರ ಹಿಂದೆ ಖಮರುಲ್ ಇಸ್ಲಾಂ ಅವರ ಶ್ರಮ ಹಾಗೂ ಪರಿಶ್ರಮವೂ ಇತ್ತು ಎಂಬುದು ಸಾರ್ವಜನಿಕ ಸತ್ಯ.

ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಅವರು ಸಾರ್ವಜನಿಕ ಸೊತ್ತು. ಬ್ರಿಟೀಷರ ವಿರುದ್ಧ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸಿದ ಟಿಪ್ಪೂ ಅವರನ್ನು ಒಂದು ನಿದಿಷ್ಟ ಸಮುದಾಯಕ್ಕೆ ಬಂಧಿಸಿಡಬಾರದು. ಟಿಪ್ಪೂ ಅವರಲ್ಲಿದ್ದ ಜಾತ್ಯಾತೀತ ಪರಿಕಲ್ಪನೆಗಳನ್ನು ಎಲ್ಲರಿಗೂ ತಲುಪಿಸಬೇಕು ಎಂಬ ಸದಾಶಯದೊಂದಿಗೆ ಟಿಪ್ಪೂ ಜಯಂತಿ ಸಂಭ್ರಮಾಚರಣೆಗೆ ನಮ್ಮ ಸರ್ಕಾರವು ಚಾಲನೆ ನೀಡಲು ಖಮರುಲ್ ಇಸ್ಲಾಂ ಅವರ ಒತ್ತಾಸೆ ಹಾಗೂ ಒತ್ತಡವೂ ಕಾರಣ.

ಖಮರುಲ್ ಇಸ್ಲಾಂ ಅವರ ನಿಧನದಿಂದ ಅಲ್ಪಸಂಖ್ಯಾತರ ಸಮುದಾಯದ ಶ್ರೇಯೋಭಿವೃದ್ಧಿಗೆ ಸದಾ ಕಾಲ ಶ್ರಮಿಸುತ್ತಿದ್ದ ವಿಶೇಷ ಚೇತನವೊಂದು ಕಮರಿದಂತಾಗಿದೆ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.

ಖಮರುಲ್ ಇಸ್ಲಾಂ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಖಮರುಲ್ ಇಸ್ಲಾಂ ಅವರ ಅಪಾರ ಬಂಧುಗಳು, ಅಭಿಮಾನಿಗಳಿಗೆ ಈ ಹಿರಿಯ ನಾಯಕನ ಅಗಲಿಕೆಯಿಂದ ಉಂಟಾದ ದುಃಖ ಮತ್ತು ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ