ಮೊದಲು ನೋಡಿದ್ದು ಕೇಬಲ್ ಆಪರೇಟರ್..!

Kannada News

18-09-2017

ಬೆಂಗಳೂರು: ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಖ್ಯಾತ ಬರಹಗಾರ ವಿಕ್ರಂ ಸಂಪತ್ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ.

ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ರಚನಾತ್ಮಕ ತಂತ್ರ ಎಂದು ವಿಕ್ರಂ ಸಂಪತ್ ಹೇಳಿದ್ದರು. ಎರಡು ದಿನಗಳ ಹಿಂದೆಯಷ್ಟೇ ಲಂಡನ್ ನಿಂದ ನಗರಕ್ಕೆ ವಾಪಸ್ಸಾದ ವಿಕ್ರಂ ಸಂಪತ್ ಅವರನ್ನು ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಎಸ್‍ಐಟಿ ಅಧಿಕಾರಿಗಳ ವಿಚಾರಣೆ ಸಂದರ್ಭದಲ್ಲಿ ಎಲ್ಲ ಸಹಕಾರವನ್ನು ನೀಡಿದ್ದಾರೆ ವಿಕ್ರಂ ಸಂಪತ್ ಹೇಳಿದ್ದಾರೆ.

ಈ ಹಿಂದೆ ಗೌರಿ ಲಂಕೇಶ್ ಅವರು ವಿಕ್ರಂ ಸಂಪತ್ ಅವರ ಬಗ್ಗೆ ವಿಮರ್ಶಾತ್ಮಕ ಲೇಖನವನ್ನು ಪ್ರಕಟಿಸಿದ್ದರು. ಈ ಹಿನ್ನಲೆಯಲ್ಲಿ ಎಸ್‍ಐಟಿ ವಿಚಾರಣೆಗೆ ಒಳಪಡಿಸಿತು ಎನ್ನಲಾಗಿದೆ.

ಗೌರಿ ಅವರು 2015ರಲ್ಲಿ ಪ್ರಶಸ್ತಿ ವಾಪಸ್ ಅಭಿಯಾನ ಸಂದರ್ಭದಲ್ಲಿ ವಿಕ್ರಂ ಸಂಪತ್ ಬಗ್ಗೆ ಲೇಖನ ಬರೆದಿದ್ದರು. ಆದರೆ ಈ ಲೇಖನಗಳಿಗೆ ವಿಕ್ರಂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ. ಎಸ್‍ಐಟಿ ತಂಡ ಈಗಾಗಲೇ ಹಲವು ಬರಹಗಾರರನ್ನು ವಿಚಾರಣೆಗೊಳಪಡಿಸಿದೆ.

ಗೌರಿ ಲಂಕೇಶ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಅವರ ಮೃತದೇಹವನ್ನು ನೋಡಿದ್ದು ಕೇಬಲ್ ಆಪರೇಟರ್ ಎಂದು ತನಿಖಾ ದಳಕ್ಕೆ ಮಾಹಿತಿ ಲಭ್ಯವಾಗಿದೆ.

ಗೌರಿ ಲಂಕೇಶ್ ಅವರ ಮನೆಯಲ್ಲಿ ಕೇಬಲ್ ಕೆಟ್ಟು ಹೋಗಿತ್ತು. ಹಾಗಾಗಿ, ಅದರ ರಿಪೇರಿಗೆಂದು ಕೇಬಲ್ ಆಪರೇಟರ್ 8 ಗಂಟೆಗೆ ಬರುವುದಾಗಿ ಗೌರಿ ಲಂಕೇಶ್ ಗೆ ತಿಳಿಸಿದ್ದ. ಅದರಂತೆ ಅವರು 8 ಗಂಟೆಹೊತ್ತಿಗೆ ಮನೆಗೆ ಬಂದಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ಗೌರಿ ಲಂಕೇಶ್ ರಾತ್ರಿ 10ರ ಸುಮಾರಿಗೆ ಮನೆ ಸೇರುತ್ತಿದ್ದರು. ಕೇಬಲ್ ಕೆಟ್ಟಿದ್ದರಿಂದ ಅಂದು ರಿಪೇರಿಗಾಗಿ ಬೇಗ ಬಂದಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.

ಕೇಬಲ್ ಆಪರೇಟರ್ ಗೌರಿ ಅವರ ಮನೆಗೆ ಬಂದು ಮೊಬೈಲ್ ಬೆಳಕಿನಲ್ಲಿ ನೋಡಿದಾಗ ಗೌರಿ ಲಂಕೇಶ್ ಕೆಳಗೆ ಬಿದ್ದಿದ್ದರು. ನಂತರ ಆತ ಮೊಬೈಲ್ ನಲ್ಲಿ ಅವರ ಫೋಟೋ ಸರ್ಚ್ ಮಾಡಿ, ಅವರೇ ಕೆಳಗೆ ಬಿದ್ದಿದ್ದಾರೆ ಎಂದು ದೃಢಪಡಿಸಿಕೊಂಡು ಗಾಬರಿಯಾಗಿ ಮನೆಯ ಸುತ್ತಮುತ್ತ ಓಡಾಡಿದ್ದ ಎಂದು ಸಿಸಿಟಿವಿ ದೃಶ್ಯಗಳಿಂದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಗೌರಿಲಂಕೇಶ್ ಹತ್ಯೆಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿರುವ ವಿಶೇಷ ತನಿಖಾ ದಳ, ತನಿಖೆಯನ್ನು ಚುರುಕುಗೊಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ