ಯಡಿಯೂರಪ್ಪ ಸೋಲಿಸಲು ಬಿಜೆಪಿ ತಂತ್ರ..!      

Kannada News

18-09-2017

ಯಡಿಯೂರಪ್ಪನವರು ಬಿಜೆಪಿಯಲ್ಲಿ ಬಹಳ ಜನರಿಗೆ ಬಿಸಿ ತುಪ್ಪವಾಗಿರುವುದು ಹೊಸದೇನಲ್ಲ. ತಮ್ಮ ನಡವಳಿಕೆಯಿಂದ, ಪಕ್ಷಪಾತದ ವರ್ತನೆಯಿಂದ ಅನೇಕ ಮಂದಿಗೆ ಇರುಸು ಮುರುಸು ಉಂಟು ಮಾಡುವುದು ಇಂದು ನಿನ್ನೆಯ ವಿಚಾರವೇನೂ ಅಲ್ಲ. ಆದರೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಬಿಜೆಪಿ ಜನ ಸಹಿಸಿಕೊಂಡು ಬಂದಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಯಡಿಯೂರಪ್ಪನವರು ಪುನಃ ಅಧಿಕಾರಕ್ಕೆ ಬಂದುಬಿಟ್ಟರೆ, ಅದು ಬಿಜೆಪಿ ಸರ್ಕಾರ ಎನ್ನುವುದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪನವರ ಸರ್ಕಾರವೇ ಆಗಿಬಿಡುತ್ತದೆ, ಅದರೊಂದಿಗೆ ಯಡಿಯೂರಪ್ಪನವರ ಭಂಟರು, ಆಪ್ತರು, ಬಾಲಂಗೋಚಿಗಳೆಲ್ಲ ಚಿಗಿತುಕೊಂಡುಬಿಡುತ್ತಾರೆ, ಭ್ರಷ್ಟಾಚಾರ ರಾರಾಜಿಸಿಬಿಡುತ್ತದೆ ಎಂದೆಲ್ಲ ಬಿಜೆಪಿ ಒಳಗೇ ಇರುವ ಯಡಿಯೂರಪ್ಪ ವಿರೋಧಿಗಳು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಬಿಜೆಪಿಗೆ ಯಡಿಯೂರಪ್ಪನವರ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿಗೆ ಇದೆ. ಅವರಷ್ಟು ವರ್ಚಸ್ಸು ಮತ್ತು ಹಿಡಿತ ಇರುವ ನಾಯಕ, ಕರ್ನಾಟಕ ಬಿಜೆಪಿಯಲ್ಲಿ ಸಧ್ಯಕ್ಕಿಲ್ಲ. ಲಿಂಗಾಯತ ಧರ್ಮದ ವಿಚಾರದಲ್ಲಿ ಯಡಿಯೂರಪ್ಪ ಅಥವ ಬಿಜೆಪಿ ಅಷ್ಟೊಂದು ಮಾತಾಡದಿದ್ದರೂ, ಮತ್ತು ಕೆಲವೊಮ್ಮೆ ಬಿಜೆಪಿಯವರು ಆರೆಸ್ಸೆಸ್ ನೊಡಗೂಡಿ ಪ್ರತ್ಯೇಕ ಧರ್ಮದ ಪ್ರಯತ್ನಗಳನ್ನು ಹಾಳು ಮಾಡುತ್ತಿರುವ ಸಂಶಯ ಕೆಲವು ಲಿಂಗಾಯತರಲ್ಲಿ ಬಂದಿರುವಾಗ, ಅದನ್ನೆಲ್ಲಾ ಸರಿಪಡಿಸಿ ಲಿಂಗಾಯತರನ್ನು ಮತ್ತೆ ಬಿಜೆಪಿ ಕಡೆ ಸೆಳೆಯುವ ಕೆಲಸ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ ಎಂದು ಬಿಜೆಪಿಯಲ್ಲಿ ಎಲ್ಲರಿಗೂ ಗೊತ್ತು. ಯಡಿಯೂರಪ್ಪನವರ ಅವಶ್ಯಕತೆಯಿರುವುದು ಚುನಾವಣೆಯಲ್ಲಿ ಗೆಲ್ಲುವ ತನಕ, ಆನಂತರ ಅವರು ಅನಿವಾರ್ಯವಲ್ಲ ಎಂಬುದು ಬಿಜೆಪಿಯ ಕೆಲವು ಚಿಂತಕರ ನಿಲುವು. ಆದ್ದರಿಂದ ಚುನಾವಣೆಯ ತನಕ ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಮತ್ತು ಆನಂತರ ಮುಂದಿನ ವಿಚಾರ ಯೋಚಿಸುವುದು ಎಂಬ ಚಿಂತನೆ ಬಿಜೆಪಿಯಲ್ಲಿ ಬಹಳ ಜನರದ್ದಾಗಿದ್ದಿತ್ತು. ಆದರೆ, ಚುನಾವಣೆಯಲ್ಲಿ ಬಹುಮತ ಗಳಿಸಿಕೊಟ್ಟರೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗುತ್ತದೆ , ಮತ್ತು ಆಗ ಕಾನೂನಿನ ತೊಡಕು ಅಥವ ಭ್ರಷ್ಟಾಚಾರದ ಆರೋಪಗಳು ಅಡ್ಡ ಬಂದರೆ ಏನು ಮಾಡುವುದು ಎಂಬ ಚಿಂತೆ ಕೂಡ ಆರಂಭವಾಗಿಬಿಟ್ಟಿದೆ. ಆ ಕಾರಣದಿಂದ, ಹೊಸ ಒಂದು ತಂತ್ರವನ್ನು ಮುಂದಿಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ನೀವೇ ಮುಂದಿನ ಮುಖ್ಯ ಮಂತ್ರಿ ಎಂಬ ಆಶ್ವಾಸನೆ ಕೊಡುವುದು. ನಿಮ್ಮಿಂದಲೇ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಮತ ಸಿಗುತ್ತದೆ ಎಂದು ತಲೆಗೆ ತುಂಬುವುದು, ಮತ್ತು ಲಿಂಗಾಯತರನ್ನು ಸೆಳೆಯಲು ನೀವು ಉತ್ತರ ಕರ್ನಾಟಕದಿಂದಲೇ ಸ್ಪರ್ಧಿಸಬೇಕು ಎಂದು ಉಬ್ಬಿಸಿಬಿಡುವುದು. ಒಮ್ಮೆ ನಿರ್ಧಾರ ಮಾಡಿದ ಯಡಿಯೂರಪ್ಪ ಹಿಂದೆ ಸರಿಯುವುದಿಲ್ಲ ಎಂಬ ವಿಶ್ವಾಸದಲ್ಲಿ ಅವರನ್ನು ಶಿಕಾರಿಪುರದಿಂದ ಎತ್ತಂಗಡಿ ಮಾಡಿಸಿ ಅತಂತ್ರ ಗೊಳಿಸುವುದು, ಮತ್ತು ಅವರು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಳ್ಳುವುದು. ಈ ರೀತಿ ಮಾಡಿದಾಗ ಬಿಜೆಪಿ ಗೆದ್ದ ಹಾಗೂ ಆಯ್ತು ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸರ್ಕಾರ ಮಾಡಿದ ಹಾಗೂ ಆಯಿತು ಎಂಬ ಲೆಕ್ಕಾಚಾರ ಈ ತಂತ್ರದ ಹಿಂದೆ ಇದೆ. ಒಂದು ವೇಳೆ ಪೂರ್ಣ ಬಹುಮತ ಸಿಗದ ಪರಿಸ್ಥಿತಿಯಲ್ಲಿ ಜೆಡಿಎಸ್ ಬೆಂಬಲ ಪಡೆಯಲೂ ಇದು ಸಹಕಾರಿಯಾಗುತ್ತದೆ, ಎನ್ನುವುದು ಬಿಜೆಪಿಯ ಕೆಲವು ಚಾಣಾಕ್ಷರ ಅಭಿಮತ. ದಶಕಗಳ ಅನುಭವ ಹೊಂದಿರುವ ಜನನಾಯಕ ಯಡಿಯೂರಪ್ಪ ಈ ತಂತ್ರದ ಹೊಂಡಕ್ಕೆ ಬೀಳುತ್ತಾರಾ ಇಲ್ಲ ಬಚಾವಾಗ್ತಾರಾ ಕಾದು ನೋಡಬೇಕು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ