ಪ್ರೇರಣೆಗೆ...ಸಾಧನೆಗೆ…ಬದಲಾವಣೆಗೆ….

Kannada News

16-09-2017 523

ನಮ್ಮನ್ನು ದಾಸರನ್ನಾಗಿಸಿಕೊಂಡಿದ್ದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 70 ವರ್ಷಗಳೇ ಕಳೆದಿವೆ. ಆದರೆ, ಇವತ್ತಿಗೂ ಭಾರತದ ಜನಸಂಖ್ಯೆಯ ಹೆಚ್ಚಿನ ಜನರಿಗೆ, ತಮ್ಮ ಹಕ್ಕುಗಳ ಬಗ್ಗೆಯೇ ಸರಿಯಾದ ಅರಿವಿಲ್ಲ.

ನಾಗರಿಕ ಸಮಾಜಕ್ಕೆ ಬೇಕಾಗಿರುವ ಅನುಕೂಲತೆಗಳನ್ನು ಪಡೆಯಲು ಯಾವ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಬೇಕು, ಒಂದು ಹೊಸ ಅಭಿಯಾನ ಆರಂಭಿಸಲು ಯಾವ ರೀತಿಯಲ್ಲಿ ಸಿದ್ಧತೆ ನಡೆಸಬೇಕು ಅನ್ನುವುದೂ ಕೂಡ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲ.

 ಕೆಲವರು ಏನೋ ಒಂದು ಹೊಸ ಹುರುಪಿನಲ್ಲಿ ಹೋರಾಟ ಆರಂಭಿಸಲು ಹೊರಡುತ್ತಾರೆ, ಆದರೆ, ಒಂದು ಹೋರಾಟ ಅಥವ ಸಮಾಜ ಸೇವೆಯನ್ನು ಏಕೆ ಮತ್ತು ಹೇಗೆ ಮಾಡುವುದು, ಅದನ್ನು ಯಾವ ಮಟ್ಟಿಗೆ ಅಥವ ಯಾವ ಹಂತಕ್ಕೆ ಮಾಡುವುದು? ಎಂಬೆಲ್ಲಾ ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತವೆ.  ಈ ಕೆಲಸ ನಮ್ಮಿಂದ ಆಗುತ್ತದೆಯೋ ಇಲ್ಲವೋ? ನಿಜವಾಗಲೂ ನಮ್ಮ ಸಾಮರ್ಥ್ಯ ಏನಿದೆ? ಎಷ್ಟರ ಮಟ್ಟಿಗಿದೆ? ಎಂಬೆಲ್ಲಾ ಅನುಮಾನಗಳೂ ಅವರಲ್ಲಿರುತ್ತವೆ.

ಮೊದಲಿಗೆ, ಯಾವುದೇ ಒಂದು ಹೋರಾಟ ಅಥವ ಅಭಿಯಾನ ಆರಂಭಿಸಲು, ನೀವು ಒಳ್ಳೆಯ ರೀತಿಯ  ಮಾತುಗಾರಿಕೆ ಬೆಳೆಸಿಕೊಳ್ಳಬೇಕಾಗಿರುತ್ತದೆ.  ನಿಮ್ಮ ಎದುರಿನಲ್ಲಿರುವವರನ್ನು ಒಪ್ಪಿಸಲು ಬೇಕಿರುವ ನೈಪುಣ್ಯತೆಯನ್ನು ಕಲಿತುಕೊಳ್ಳಬೇಕಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಅಲ್ಲಿನ ಅಧಿಕಾರಿಗಳು, ಪೊಲೀಸರು ಮತ್ತಿತರರ ಜೊತೆ, ಪರಿಣಾಮಕಾರಿಯಾಗಿ ಮಾತನಾಡಬೇಕಾಗುತ್ತದೆ. ಈ ರೀತಿ ಮಾಡುವ ಮೂಲಕ, ಜನರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ನಡೆಸಬಹುದಾಗಿದೆ. ಆದರೆ, ಇದಕ್ಕೆ ಇತರರ ಸಹಕಾರ ಪಡೆದುಕೊಳ್ಳುವುದೂ ಕೂಡ ಅತ್ಯಗತ್ಯ. ಒಂದು ಉತ್ತಮ ಉದ್ದೇಶಕ್ಕಾಗಿ ಇತರರನ್ನು ಹೇಗೆ ನಮ್ಮ ಜೊತೆಗೆ ತೆಗೆದುಕೊಂಡುಹೋಗುವುದು ಅನ್ನುವುದರ ಬಗ್ಗೆ ನೀವು ಸಮೂಹ ಶಕ್ತಿ ಮೂಲಕ ತಿಳಿದುಕೊಳ್ಳಬಹುದು.

ನಿಮ್ಮಲ್ಲಿ ಧೈರ್ಯದ ಕೊರತೆ ಇದ್ದರೆ, ಆತ್ಮವಿಶ್ವಾಸದ ಕೊರತೆ ಇದ್ದರೆ, ಅದನ್ನು ಹೋಗಲಾಡಿಸುವ ಕೆಲಸವನ್ನು ಸಮೂಹ ಶಕ್ತಿ ಮಾಡುತ್ತದೆ. ಆತ್ಮ ವಿಶ್ವಾಸದಿಂದ ದೃಢವಾದ ಹೆಜ್ಜೆಗಳನ್ನು ಇಡುತ್ತಾ ಮುಂದಕ್ಕೆ ಸಾಗುವುದು ಹೇಗೆ ಅನ್ನುವುದನ್ನು ನೀವು ಸಮೂಹ ಶಕ್ತಿಯ ಜೊತೆ ಗುರುತಿಸಿಕೊಳ್ಳುವುದರ ಮೂಲಕ ಅರಿತುಕೊಳ್ಳಬಹುದು.

ಆದರೆ, ಇದೆಲ್ಲವನ್ನೂ ಮಾಡುವ ಮೊದಲು, ಸಾಮಾಜಿಕ ರಂಗಕ್ಕೆ ಹೆಜ್ಜೆಯಿಡಲು ಹೊರಟಿರುವ ನಿಮ್ಮಲ್ಲಿ, ಪ್ರಾಮಾಣಿಕತೆ, ವಿಚಾರನಿಷ್ಠೆ ಮತ್ತು ಶಿಸ್ತು ಅತ್ಯಗತ್ಯ. ಏಕೆಂದರೆ, ಇತರರಿಗೆ ಅಥವ ಒಟ್ಟಾರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಲು, ಮೊದಲು ನೀವು ಒಳ್ಳೆಯವರಾಗಿರಬೇಕು, ನಿಮ್ಮಲ್ಲಿ ಒಳ್ಳೆಯತನ ಇರಬೇಕು. ಒಂದು ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿಯಲ್ಲಿ ಒಳ್ಳೆಯ ಗುಣಗಳಿದ್ದರೆ, ಆತ  ಕೈಗೊಳ್ಳುವ ಕಾಮಗಾರಿಗಳು ಉತ್ತಮವಾಗಿ ಮೂಡಿಬರುತ್ತವೆ. ಆತನೇ ಭ್ರಷ್ಟನಾಗಿದ್ದರೆ, ಅವನು ಕೈಗೊಳ್ಳುವ ಕಾಮಗಾರಿಯೂ ಕಳಪೆ ಆಗುತ್ತದೆ ಅಲ್ಲವೇ?

ಹೀಗಾಗಿ, ಯಾವುದಾದರೂ ಒಂದು ಕೆಲಸವನ್ನು ನಿರ್ವಹಿಸಲು ಯಾರು ಸೂಕ್ತರಾಗುತ್ತಾರೆ ಅನ್ನುವುದನ್ನು, ನಾವು ಮೊದಲೇ ನಿರ್ಧರಿಸುವುದು ಒಳ್ಳೆಯದು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ, ಸಾಕಷ್ಟು ಪ್ರಯತ್ನಗಳ ನಂತರವೂ ನಾವು ನಿರೀಕ್ಷಿತ ಗುರಿ ಅಥವ ಫಲಿತಾಂಶ ಪಡೆಯುವಲ್ಲಿ ವಿಫಲರಾಗುವ ಸಾಧ್ಯತೆ ಹೆಚ್ಚು.  ಸಾಧಿಸಬೇಕಾದ ಕೆಲಸಕ್ಕೆ ತಕ್ಕ ವ್ಯಕ್ತಿಯನ್ನು ಹುಡುಕುವುದು ಮೊದಲ ಸರಿಯಾದ ಕ್ರಮ. ಅಥವ, ನೀವು ಕೈಗೊಳ್ಳಬೇಕಿರುವ ಕೆಲಸಕ್ಕೆ, ನೀವು ಆಯ್ಕೆ ಮಾಡಿರುವ ವ್ಯಕ್ತಿಯನ್ನು ಸಿದ್ಧಗೊಳಿಸಬೇಕು, ತಯಾರು ಮಾಡಬೇಕು. ಇದಕ್ಕೆ ಅಗತ್ಯವಿರುವ ಕೌಶಲ್ಯಗಳನ್ನೂ ನೀವು ಬೆಳೆಸಿಕೊಳ್ಳಬೇಕು.

ಆದರೆ, ಸಮೂಹ ಶಕ್ತಿ ಸಂಘಟನೆಯಲ್ಲಿ ನಾವು ಯಾರಿಗೂ ರೆಡಿ ಮೇಡ್ ವ್ಯವಸ್ಥೆ ಕಲ್ಪಿಸುವುದಿಲ್ಲ. ಸಮೂಹ ಶಕ್ತಿ, ಬಾಯಿಗೆ ತುತ್ತು ಮಾಡಿ ತಿನ್ನಿಸುವ ಕೆಲಸ ಮಾಡುವುದಿಲ್ಲ. ಸಮೂಹ ಶಕ್ತಿ ಸಂಘಟನೆಯಲ್ಲಿ ಸ್ವತಂತ್ರ ಚಿಂತನೆಗಳನ್ನು ಬೆಳೆಸಿಕೊಳ್ಳಲು ಉತ್ತೇಜನ ನೀಡಲಾಗುತ್ತದೆ. ನೀವೇ ಸ್ವಪ್ರೇರಣೆಯಿಂದ ಕಾರ್ಯಗಳನ್ನು ಹಮ್ಮಿಕೊಳ್ಳಲು, ಸಮಸ್ಯೆಗಳು ಮತ್ತು ವಿಚಾರಗಳನ್ನು ನೀವೇ ಗುರುತಿಸಿ, ಅವನ್ನು ನಿಭಾಯಿಸಲು, ಪರಿಹರಿಸಲು ಇರುವ ದಾರಿಗಳನ್ನು ಹುಡುಕಲು ಸಮೂಹ ಶಕ್ತಿ ನೆರವಾಗುತ್ತದೆ.

ಸಮೂಹ ಶಕ್ತಿ ಸಂಘಟನೆ, ಸಂಪೂರ್ಣವಾಗಿ ಜನಹಿತವನ್ನೇ ತನ್ನ ಗುರಿಯಾಗಿ ಹೊಂದಿದೆ. ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂಬ ದಾಸ ವಾಣಿಯಂತೆ’,  ನಾವು ಮನುಷ್ಯರಾಗಿ ಹುಟ್ಟಿರುವುದೇ ಬಹು ದೊಡ್ಡ ವಿಚಾರ, ಹೀಗಾಗಿ ಮೊದಲು, ನಾವು ನಮ್ಮ ಬದುಕನ್ನು ಎತ್ತರಿಸಿಕೊಳ್ಳಬೇಕು. ನಾವು ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡರೆ, ನಮ್ಮ ಜೀವನ ಶೈಲಿ ಉತ್ತಮವಾಗುತ್ತದೆ, ನಮಗೆ ಉತ್ತಮರ ಸಹವಾಸ ಸಿಗುತ್ತದೆ, ಉತ್ತಮ ಬದುಕು ನಮ್ಮದಾಗುತ್ತದೆ, ನಮ್ಮ ಒಟ್ಟಾರೆ ಬದುಕಿನ ಗುಣಮಟ್ಟದಲ್ಲಿ ಗಣನೀಯ ಏರಿಕೆ ಆಗುತ್ತದೆ.

ಇದರ ಜೊತೆಗೆ, ಸಾರ್ವಜನಿಕ ಕ್ಷೇತ್ರಕ್ಕೆ ಬರುವವರು, ಪರಿಶ್ರಮವಹಿಸಲು, ಟೀಕೆಗಳನ್ನು ಸ್ವೀಕರಿಸಲು, ಸದಾ ಸಿದ್ಧರಾಗಿರುವಂಥ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿರುವ ಯಾರೇ ಆದರೂ ಕೂಡ, ಸಮಯದ ಮಿತಿ ನಿಗದಿ ಮಾಡಿಕೊಂಡು ಕೆಲಸ ಮಾಡುತ್ತೇನೆ ಎಂದರೆ, ಅದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ, ಅದರಿಂದ ಹೆಚ್ಚು ಲಾಭವೂ ಆಗುವುದಿಲ್ಲ.

ಇದರ ಜೊತೆಗೆ, ಇವತ್ತಿನ ಜಗತ್ತಿನಲ್ಲಿ ನಾವು ಚುರುಕುತನದಿಂದ ಕೆಲಸ ಮಾಡಬೇಕು. ಕೇವಲ ಹಾರ್ಡ್ ವರ್ಕ್ ಮಾಡಿದರೆ ಸಾಲದು, ಅದು ಸ್ಮಾರ್ಟ್ ವರ್ಕ್ ಕೂಡ ಆಗಬೇಕು.  ಹಾಗೆ ಮಾಡಿದರೆ ಮಾತ್ರ ನಮ್ಮ ಗುರಿ ಸಾಧಿಸುವುದು ಸುಲಭವಾಗುತ್ತದೆ.

ಯಾವುದೇ ಒಂದು ಪತ್ರ ವ್ಯವಹಾರ ಮಾಡಲು, ದೂರು ದಾಖಲಿಸಲು, ಅರ್ಜಿ ಬರೆಯಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಾಧ್ಯವಾಗಬೇಕು ಅನ್ನುವುದು ಸಮೂಹ ಶಕ್ತಿಯ ಪ್ರಾಥಮಿಕ ನಿರೀಕ್ಷೆ. ಇಂಥದ್ದಕ್ಕೆಲ್ಲಾ ಬೇರೆ ಯಾರನ್ನೋ ಆಶ್ರಯಿಸುವಂತಾದರೆ ಅದು ನಿಮ್ಮ ದೌರ್ಬಲ್ಯವಾಗುತ್ತದೆ. ಸಮೂಹ ಶಕ್ತಿ ಸಂಘಟನೆ, ತನ್ನ ಜೊತೆಗೆ ಗುರುತಿಸಿಕೊಳ್ಳುವ ಎಲ್ಲರೂ ಕನಿಷ್ಟಪಕ್ಷ, ದಿನಕ್ಕೆ ಒಂದು ಗಂಟೆಯಾದರೂ ಸುದ್ದಿ ಪತ್ರಿಕೆಗಳನ್ನು, ಪುಸ್ತಕಗಳನ್ನು  ಓದುವ ಹವ್ಯಾಸ  ಬೆಳೆಸಿಕೊಳ್ಳಬೇಕು, ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಬಯಸುತ್ತದೆ.  ಒಟ್ಟಾರೆಯಾಗಿ, ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬ ವ್ಯಕ್ತಿಯ ಮತ್ತು ಆ ಮೂಲಕ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ನಿರೀಕ್ಷಿಸುತ್ತದೆ.

ಯಾವುದೇ ಒಂದು ಸಮಾಜದಲ್ಲಿ  ನೀವು ಗೌರವಯುತವಾಗಿ ಬದುಕಬೇಕೆಂದರೆ, ಜವಾಬ್ದಾರಿಯುತ ಸ್ವಾತಂತ್ರ್ಯ ಅನುಭವಿಸಬೇಕೆಂದರೆ, ಆ ಸಮಾಜದ ನಾಗರಿಕರಾಗಿ ನೀವು ಹೊಂದಿರುವ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಇದೇ ವೇಳೆ, ಸಮಾಜದ ಮತ್ತು ನೆರೆಹೊರೆಯಲ್ಲಿನ ಬೆಳವಣಿಗೆಗಳ ಬಗ್ಗೆಯೂ ನೀವು ಅರಿತಿರಬೇಕು. ನೀವು ಸಬಲರಾಗಬೇಕು, ಧೈರ್ಯಶಾಲಿಗಳಾಗಬೇಕು. ಇತರೆಯವರ ಅಸಂಬದ್ಧ ಅಥವ ಬುದ್ಧಿಗೇಡಿತನದ ವರ್ತನೆಗಳನ್ನು ನೀವು ಒಪ್ಪಬಾರದು. ನೀವು ವಿಚಾರಶೀಲರಾಗಿ, ತರ್ಕಬದ್ಧ ಚಿಂತನೆ ನಡೆಸುವಂಥವರಾಗಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ, ನೀವು ಸಾಮಾಜಿಕ ಚಟುವಟಿಕೆಗಳ ಮುಂದಾಳತ್ವ ವಹಿಸಬೇಕು. ನಿಮ್ಮ ನಡೆ ನುಡಿಗಳಲ್ಲಿ ರಚನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ, ನಿಮ್ಮ ಬದುಕು ಮತ್ತು ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆ ಹಾಸುಹೊಕ್ಕಾಗಿರುವಂತೆ ನೋಡಿಕೊಳ್ಳಬೇಕು ಅನ್ನುವುದು ಸಮೂಹ ಶಕ್ತಿ ಸಂಘಟನೆಯ ಖಚಿತ ನಿಲುವಾಗಿದೆ.

ನಾಗರಿಕ ಸಮಾಜದ ಸದಸ್ಯರಾಗಿ, ನೀವು ಸ್ವತಂತ್ರ ಚಿಂತನೆ ಮತ್ತು  ತಾಳ್ಮೆ ಬೆಳೆಸಿಕೊಳ್ಳಬೇಕು. ವೃತ್ತಿಗೌರವ, ದೇಶಪ್ರೇಮ ಮತ್ತು ಜಾಗತಿಕ ದೃಷ್ಟಿಕೋನ ನಿಮ್ಮದಾಗಬೇಕು. ನೀವು ಮೌಲ್ಯಗಳಲ್ಲಿ ನಂಬಿಕೆ ಇಡಬೇಕು ಮತ್ತು ಅನುಸರಿಸಬೇಕು. ಇದರ ಜೊತೆಗೆ, ಸಮತೋಲನದ ಜಾತ್ಯತೀತ ನಿಲುವನ್ನು ಇರಿಸಿಕೊಂಡು, ಬಹುತ್ವವನ್ನು ಗೌರವಿಸುವ ವ್ಯಕ್ತಿ ಆಗಬೇಕು ಎಂಬ ಚಿಂತನೆ ಸಮೂಹ ಶಕ್ತಿಯದ್ದು.  ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಶಕ್ತಿಯನ್ನು ಜಾಗೃತಗೊಳಿಸಿ, ಅದನ್ನು ಸಮೂಹ ಶಕ್ತಿಯಾಗಿ ಬೆಳೆಸುವ ಮೂಲಕ, ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದೇ ಸಮೂಹ ಶಕ್ತಿಯ ಸಂಘಟನೆಯ ಪ್ರಮುಖ ಉದ್ದೇಶ. 

ಯಾರೋ ಬರುತ್ತಾರೆ, ನಾಯಕತ್ವ ವಹಿಸುತ್ತಾರೆ, ನಿರ್ದೇಶನ ನೀಡುತ್ತಾರೆ, ಸ್ಫೂರ್ತಿ ನೀಡುತ್ತಾರೆ ಎಂದೆಲ್ಲಾ ನಿರೀಕ್ಷೆ ಮಾಡುತ್ತಾ ಕುಳಿತುಕೊಳ್ಳುವುದನ್ನು ಸಮೂಹ ಶಕ್ತಿ ಸಂಘಟನೆ ಬಯಸುವುದಿಲ್ಲ. ಸಮೂಹ ಶಕ್ತಿ ಜೊತೆಗೆ ಗುರುತಿಸಿಕೊಳ್ಳುವ ನೀವುಗಳೆಲ್ಲರೂ ಸಮಸ್ಯೆಯನ್ನು ಗಮನಿಸಬೇಕು, ಅದನ್ನು ಪರಿಹರಿಸಲು ಏನು ಮಾಡಬೇಕು ಅನ್ನುವುದರ ಬಗ್ಗೆ ಚಿಂತನೆ ನಡೆಸಬೇಕು. ಬಳಿಕ, ಮುಂದಿನ ಕಾರ್ಯತಂತ್ರಗಳ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಿ ನೇರವಾಗಿ ಕಣಕ್ಕಿಳಿಯಬೇಕು, ಅದೇ ಸಮೂಹ ಶಕ್ತಿ ಸಂಘಟನೆಯ ವೈಶಿಷ್ಟ್ಯ.

ದೇಶದ ಬಗ್ಗೆ ಆಪಾರ ಅಭಿಮಾನ ಇರಿಸಿಕೊಂಡಿರುವ, ಸಮಾಜವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಲು ಮಹತ್ವದ ಕಾಣಿಕೆ ನೀಡಲೇಬೇಕು ಎಂಬ ನಿಲುವನ್ನು ಇರಿಸಿಕೊಂಡಿರುವ ಎಲ್ಲಾ ಪ್ರಜ್ಞಾವಂತರಿಗೂ ಸಮೂಹ ಶಕ್ತಿಗೆ ಸ್ವಾಗತ.

ಸಮೂಹ ಶಕ್ತಿ ಮೂಲಕ ನಮ್ಮ ಹೋರಾಟಗಳನ್ನು, ಸೂಕ್ತ ರೀತಿಯಲ್ಲಿ  ನಡೆಸೋಣ. ಜನಪರವಾಗಿ, ಸಾಮೂಹಿಕ ಹಿತಾಸಕ್ತಿಗೆ ಬದ್ಧರಾಗಿ, ಸಣ್ಣ ಕೂಗುಗಳಿಗೂ ಧ್ವನಿಯಾಗಿ, ನಾಡಿನ ನಾಗರಿಕರ ಪ್ರಶ್ನೆಗಳನ್ನು ಎತ್ತಿಹಿಡಿಯೋಣ. ಹಿಂದೆಂದಿಗಿಂತಲೂ ಹೆಚ್ಚಾಗಿ, ಇವತ್ತು ನಮ್ಮ ಸಮಾಜವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯುವತ್ತ ದೃಢ ಹೆಜ್ಜೆಯಿಡೋಣ. 

ಅಸಹಾಯಕತೆ, ಬೆಳೆಯುವುದಕ್ಕೆ ಅವಕಾಶ ಇರುವುದಿಲ್ಲ

ನಿಮ್ಮ ಇತಿ ಮಿತಿಗಳನ್ನು ತಿದ್ದಲು ಅವಕಾಶವಿಲ್ಲ

ಸ್ಪೆಷಲ್ ರಿಪೋರ್ಟರ್ ಒಡಗೂಡಿ ಕೆಲಸ ಮಾಡುತ್ತಿದೆ.

 

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ