ಅರಮನೆಯಲ್ಲಿ: ದಸರಾ ಕಾರ್ಯಕ್ರಮಗಳು ಆರಂಭ !

Kannada News

15-09-2017 304

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಇಂದಿನಿಂದ ಅಂಬಾವಿಲಾಸ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಆರಂಭವಾಗಿವೆ.

ಮೈಸೂರಿನ ರಾಜವಂಶಸ್ಥರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿರುವ ನವರಾತ್ರಿ ಉತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ಈ ಬಾರಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಡಲಿದ್ದಾರೆ.

ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳ ಮೊದಲ ದಿನವಾದ ಇಂದು ದರ್ಬಾರ್ ಹಾಲ್‍ ನಲ್ಲಿ ನವಗ್ರಹ ಹೋಮ, ಶಾಂತಿ ಪೂಜೆ ಸೇರಿದಂತೆ ನವರಾತ್ರಿ ಆರಂಭದ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಅಂಬಾವಿಲಾಸ ದರ್ಬಾರ್ ಹಾಲ್‍ ನಲ್ಲಿ ಗೆಜ್ಜಗನಹಳ್ಳಿ ಗ್ರಾಮಸ್ಥರಿಂದ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯುತ್ತಿದೆ. ಸಿಂಹಾಸನ ಜೋಡಣಾ ಕಾರ್ಯ ಹಿನ್ನೆಲೆಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ತಿಂಗಳ 21ರಿಂದ  ರಾಜವಂಶಸ್ಥರ ಖಾಸಗಿ ದರ್ಬಾರ್ ಆರಂಭವಾಗಲಿದೆ. 29ರಂದು ಆಯುಧ ಪೂಜೆ, 30ರಂದು ವಿಜಯದಶಮಿಯ ಜಂಬೂ ಸವಾರಿ ನಡೆಯಲಿದೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್, ಅರಮನೆ ಸಂಪ್ರದಾಯದಂತೆ ದಸರಾ ಕಾರ್ಯಕ್ರಮಗಳು ನಡೆಯಲಿವೆ, ರಾಜ್ಯದ ಜನತೆ ಸುಖ, ಸಮೃದ್ಧಿಯಿಂದ ಬಾಳಲಿ, ಶಾಂತಿ ನೆಲೆಸಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ