ಎಸ್ಐಟಿ ಕಚೇರಿಗೆ ಬಂದ ಕುಣಿಗಲ್ ಗಿರಿ !

Kannada News

15-09-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ ಕುಖ್ಯಾತ ರೌಡಿ ಕುಣಿಗಲ್‍ ಗಿರಿ ಕೈವಾಡವಿರುವ ಸಂಶಯ ಸುಳ್ಳಾಗಿದೆ ಎನ್ನುವುದು ಗೊತ್ತಾಗಿದೆ. ಏಕೆಂದರೆ ಎಸ್‍ಐಟಿ ಅಧಿಕಾರಿಗಳ ಮುಂದೆ ಹಾಜರಾಗಲು ಸಿಐಡಿ ಕಚೇರಿಯಲ್ಲಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಕಚೇರಿಗೆ ಜಾಮೀನಿನ ಮೇಲೆ ಆಗಮಿಸಿದ್ದ ಗಿರಿಯ ವಿಚಾರಣೆ ನಡೆಸದಿದ್ದರಿಂದ ವಾಪಸಾಗಿದ್ದಾನೆ.

ರಾಮನಗರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗಿರಿ ಜಾಮೀನಿನ ಮೇಲೆ ಹೊರಬಂದಿದ್ದು ಮಾದ್ಯಮಗಳಲ್ಲಿ ಗೌರಿ ಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರವಿರುವ ವರದಿಗಳನ್ನು ನೋಡಿ ಎಸ್‍ಐಟಿ ಕಚೇರಿಗೆ ಬಂದಿದ್ದನು ಎಂದು ತಿಳಿದುಬಂದಿದೆ.

ಆದರೆ ಗೌರಿ ಹತ್ಯೆ ಪ್ರಕರಣದಲ್ಲಿ ಕುಣಿಗಲ್‍ ಗಿರಿಯನ್ನು ನಾವು ವಿಚಾರಣೆ ಕರೆದಿಲ್ಲ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಎಸ್‍ಐಟಿಯ ತನಿಖಾಧಿಕಾರಿಯಾಗಿರುವ ಡಿಸಿಪಿ ಎಂ.ಎನ್.ಅನುಚೇತ್ ಅವರು ಸ್ಪಷ್ಟಪಡಿಸಿದ್ದಾರೆ. ಕುಣಿಗಲ್ ಗಿರಿ ಎಸ್‍ಐಟಿ ಕಚೇರಿಗೆ ಬಂದಿರುವುದು ದೃಶ್ಯ ಮಾದ್ಯಮಗಳಲ್ಲಿ ಪ್ರಸಾರಗೊಂಡ ಬಳಿಕ ಈ ಸ್ಪಷ್ಟನೆ ಹೊರಬಿದ್ದಿದೆ.

ತಂದೆ-ತಾಯಿಯ ಜೊತೆ ಎಸ್‍ಐಟಿ ಕಚೇರಿಗೆ ಕುಣಿಗಲ್ ಗಿರಿ ಬಂದಿದ್ದ. ಆದರೆ, ತನಿಖಾಧಿಕಾರಿಗಳು ಸಿಗದ ಹಿನ್ನೆಲೆಯಲ್ಲಿ ಗಿರಿ ವಾಪಸಾಗಿದ್ದಾನೆ. ಗೌರಿ ಲಂಕೇಶ್ ಹತ್ಯೆಯಲ್ಲಿ ಕುಣಿಗಲ್ ಗಿರಿ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಬಂದಿದ್ದ ಎನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಗಿರಿಯನ್ನು ನಿನ್ನೆ ಎಸ್‍ಐಟಿ ಅಧಿಕಾರಿಗಳು ರಾಮನಗರ ಜೈಲಿನಲ್ಲಿ ವಿಚಾರಣೆಗೊಳಪಡಿಸಿದ್ದರು. ಗುರುವಾರ ಸಂಜೆ 7 ಗಂಟೆ ವೇಳೆಗೆ ಕುಣಿಗಲ್ ಗಿರಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾನೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗಿರಿ, ಯಾವ ಕಾರಣಕ್ಕೆ ಗೌರಿ ಪ್ರಕರಣದಲ್ಲಿ ನನ್ನ ಹೆಸರು ಬಂದಿದೆ ಎನ್ನುವುದು ಗೊತ್ತಿಲ್ಲ. ನನ್ನ ಕಡೆಯವರು ಯಾರೂ ಇದರಲ್ಲಿ ಭಾಗಿಯಾಗಿಲ್ಲ. ಯಾರೋ ನನಗೆ ಆಗದವರು ನನ್ನ ಹೆಸರನ್ನು ಸೇರಿಸಿದ್ದಾರೆ. ನಾನು ನಿನ್ನೆಯಷ್ಟೇ ಜಾಮೀನಿನ ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದೇನೆ ಎಂದು ಹೇಳಿದ್ದಾನೆ.

ಗುರುವಾರ ಜೈಲಿಗೆ ಎಸ್‍ಐಟಿ ಅಧಿಕಾರಿಗಳು ಬಂದು ಮಾತನಾಡಿಸಿದ್ದರು. ಆದರೆ ಮಾಧ್ಯಮಗಳಲ್ಲಿ ನನ್ನ ಹೆಸರು ಕೇಳಿ ಬಂದಿರುವುದರಿಂದ ತಂದೆ-ತಾಯಿ ಸಲಹೆ ಮೇರೆಗೆ ನಾನೇ ಎಸ್‍ಐಟಿ ಅಧಿಕಾರಿಗಳನ್ನು ನೋಡಲು ಬಂದಿದ್ದೆ. ನನಗೆ ಹಾಜರಾಗುವಂತೆ ಅಧಿಕಾರಿಗಳು ಸಮನ್ಸ್ ನೀಡಿರಲಿಲ್ಲ ಎಂದು ಗಿರಿ ತಿಳಿಸಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ