ಎಟಿಎಂ ವಂಚನೆ ಜಾಲ: ಇಬ್ಬರ ಬಂಧನ !

Kannada News

15-09-2017

ಬೆಂಗಳೂರು: ಎಟಿಎಂ ಕೇಂದ್ರಗಳಲ್ಲಿ ಕಾರ್ಡ್ ಸ್ಕಿಮ್ಮಿಂಗ್ ಯಂತ್ರಗಳನ್ನು ಅಳವಡಿಸಿ ಎಟಿಎಂ ಕಾರ್ಡ್‍ದಾರರ ಮಾಹಿತಿ ಪಡೆದು ವಂಚನೆ ನಡೆಸುತ್ತಿದ್ದ ವಿದೇಶಿ ಜಾಲವನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚಿ, ಜಾಲದಲ್ಲಿದ್ದ ಹಂಗೇರಿ ಹಾಗೂ ರೊಮಾನಿಯಾದ ಇಬ್ಬರನ್ನು ಬಂಧಿಸಿದ್ದಾರೆ.

ಹಂಗೇರಿಯ ಸಿಯೋಬಾರ್ಲಿನಾದ ಮಾರೆ ಜಾನೋಸ್ (44) ಹಾಗೂ ರೊಮಾನಿಯಾದ ಏಂಜಲ್ಸ್ ನ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್ (40) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸ್ಕಿಮ್ಮಿಂಗ್ ಯಂತ್ರಗಳು, ಮೆಮೋರಿ ಕಾರ್ಡ್‍ಗಳು, ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ ತಿಳಿಸಿದರು.

ಎಟಿಎಂ ಕಾರ್ಡ್‍ದಾರರ ಮಾಹಿತಿ ಪಡೆದು ವಂಚನೆ ನಡೆಸುವ ಅಪರಾಧದ ಬಗ್ಗೆ ಬ್ಯಾಂಕ್‍ ಗಳು, ಆರ್.ಬಿ.ಐ ಗೆ ಮಾಹಿತಿ ನೀಡಿ, ಎಟಿಎಂ ಬಳಕೆದಾರರ ಕಾರ್ಡ್ ನ ಮಾಹಿತಿಗಳು ಕಳ್ಳತನವಾಗದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಕಳೆದ ಸೆಪ್ಟೆಂಬರ್ ನಲ್ಲಿ ನಗರಕ್ಕೆ ಬಂದು ಎಂ.ಜಿ. ರಸ್ತೆಯ ಕರ್ಜನ್ ಕೋಟ್ ಹೋಟೆಲ್‍ ನಲ್ಲಿ ವಾಸ್ತವ್ಯ ಹೂಡಿ, ಎಟಿಎಂಗಳಿಗೆ ಸ್ಕಿಮ್ಮಿಂಗ್ ಯಂತ್ರಗಳನ್ನು ಅಳವಡಿಸಿ ಕಾರ್ಡ್‍ಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ ಅವರು ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್‍ನ ಆರ್.ಜಿ. ರಾಯಲ್ ಹೋಟೆಲ್‍ಗೆ ವಾಸ್ತವ್ಯ ಬದಲಿಸಿದ್ದರು.

ಕೆಂಪೇಗೌಡ ವಿಮಾನ ನಿಲ್ದಾಣ, ಬ್ರಿಗೆಡ್ ರಸ್ತೆ ಜಂಕ್ಷನ್ ಹಾಗೂ ಟ್ರಿನಿಟಿ ಮೆಟ್ರೋ ಬಳಿಯ ಕೋಟೆಕ್ ಮಹೇಂದ್ರ ಬ್ಯಾಂಕ್‍ನ ಎಟಿಎಂ, ಗರುಡ ಮಾಲ್‍ನ ಸಿಟಿ ಬ್ಯಾಂಕ್‍ ನ ಎಟಿಎಂ, ಎಂ.ಜಿ. ರಸ್ತೆಯ ಕೆನರಾ ಬ್ಯಾಂಕ್‍ನ ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಯಂತ್ರಗಳನ್ನು ಆರೋಪಿಗಳು ಅಳವಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಕೋಟೆಕ್ ಮಹೇಂದ್ರ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿದ್ದು, ಅದರ ಬಳಿ ಸಂಶಯಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಅಲ್ಲದೆ, ತಾನು ಅಳವಡಿಸಿದ್ದ ಸ್ಕಿಮ್ಮಿಂಗ್ ಯಂತ್ರವನ್ನು ಗಮನಿಸಿ, ಸ್ಥಳದಲ್ಲಿನ ಪರಿಸ್ಥಿತಿಯಿಂದ ಅನುಮಾನಗೊಂಡು ಉಪಕರಣ ತೆಗೆದುಕೊಳ್ಳದೆ ಟ್ಯಾಕ್ಸಿಯಲ್ಲಿ ಪರಾರಿಯಾಗುತ್ತಿದ್ದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಯುಕೆಯಲ್ಲಿರುವ ಸಹಚರನ ನಿರ್ದೇಶನದಂತೆ ಈ ಕೃತ್ಯವನ್ನು ಎಸಗುತ್ತಿರುವುದು ಪತ್ತೆಯಾಗಿದೆ. ಭಾರತಕ್ಕೆ ಇವರಿಬ್ಬರೂ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮಾಹಿತಿಯನ್ನು ಕಳ್ಳತನ ಮಾಡುವ ಉದ್ದೇಶದಿಂದಲೇ ಬಂದಿರುವುದನ್ನು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ