ಮರ್ಮಾಂಗ ಕತ್ತರಿಸಿ ಕೊಲೆ: ಇಬ್ಬರ ಬಂಧನ !

Kannada News

15-09-2017

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯ ಟೋಲ್‍ನಿಂದ ದೊಡ್ಡತೋಗೂರಿಗೆ ಹೋಗುವ ಮೈದಾನದ ಹುಲ್ಲಿನ ಪೊದೆಯೊಂದರ ಬಳಿ, ದೇಹಬಿಟ್ಟು ರುಂಡ ಬೇರೆ ಮಾಡಿ ಮರ್ಮಾಂಗ ಕತ್ತರಿಸಿ ಯುವಕನ ಭೀಕರ ಕೊಲೆ ಮಾಡಿದ್ದ ಕೃತ್ಯವನ್ನು ನಗರ ಪೊಲೀಸರು ಶ್ವಾನದಳದಲ್ಲಿದ್ದ ನಾಯಿ ಜಿಮ್ಮಿಯ ಸಹಾಯದಿಂದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೊಲೆ ನಡೆದಿರುವುದು ಅನೈತಿಕ ಸಂಬಂಧ ಬೆಳೆಸಿ ಸಹೋದರಿಯನ್ನು ಗರ್ಭಿಣಿ ಮಾಡಿದ್ದರಿಂದ ರೊಚ್ಚಿಗೆದ್ದ ಇಬ್ಬರು ಸಹೋದರರು ಹಾಗೂ ಅವರ ಭಾವ ಸೇರಿ ಮೂವರಿಂದ ಎನ್ನುವುದನ್ನು ಪತ್ತೆಹಚ್ಚಿರುವ ಆಗ್ನೇಯ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ನೇಹಿತನಾಗಿದ್ದ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ಕೆಸೋಡಿಯಾ ಬಿರಾಂಚಿ ಮಾಂಝಿ (28)ನನ್ನು ಕೊಲೆಗೈದು ತಲೆ ಕತ್ತರಿಸಿ, ಮರ್ಮಾಂಗವನ್ನು ಕೊಯ್ದಿರುವುದು ಪತ್ತೆಯಾಗಿದೆ. ಕೃತ್ಯವೆಸಗಿದ ಒರಿಸ್ಸಾದ ಮಯೂರ್ ಬೋಂಚ್ ಜಿಲ್ಲೆಯ ನೋಹಾಮಣಿಯಾ, ಮಧು ಜೆರಾಯ್ (21) ಹಾಗೂ ಆತನ ಸೋದರ ಗಾಂಧಿಜೆರಾಯ್ (19) ಬಂಧಿಸಲಾಗಿದೆ.

ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಬಂಧಿತರ ಅಕ್ಕನ ಗಂಡ ಕಾಶಿರಾಂ (30)ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದರು.

ಘಟನೆ ವಿವರ: ಕಳೆದ ಸೆಪ್ಟೆಂಬರ್ 11ರ ಬೆಳಿಗ್ಗೆ ನೈಸ್ ರಸ್ತೆಯಿಂದ ದೊಡ್ಡತೋಗೂರು ಕಡೆಗೆ ಹೋಗುವ ಮೈದಾನದ ಹುಲ್ಲಿನ ಪೊದೆಯೊಂದರಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯನವರು ಪ್ರಕರಣದ ಪತ್ತೆಗಾಗಿ ರಚಿಸಿದ್ದ ವಿಶೇಷ ಪೊಲೀಸ್ ತಂಡವು ಸ್ಥಳಕ್ಕೆ ಶ್ವಾನದಳವನ್ನು ಕರೆಸಿ ತಪಾಸಣೆ ನಡೆಸಿದಾಗ ಅದರಲ್ಲಿದ್ದ ಶ್ವಾನ ಜಿಮ್ಮಿ ದೇಹದ ಸುತ್ತಮುತ್ತ ಓಡಾಡಿ ಕೊಟ್ಟ ಸುಳಿವಿನಿಂದ ಮೃತದೇಹದ ಗುರುತು ಪತ್ತೆಯಾಗಿ ಆತ ಬಿರಾಂಚಿ ಮಾಂಝಿ ಎನ್ನುವುದು ಪತ್ತೆಯಾಗಿದೆ.

ಮಾಂಝಿ ದೊಡ್ಡತೋಗೂರಿನ ಗೋವಿಂದಪ್ಪ ಎಂಬುವರ ಮನೆಯಲ್ಲಿ ತನ್ನದೇ ರಾಜ್ಯದ ಇಬ್ಬರ ಜೊತೆ ವಾಸವಾಗಿದ್ದನು. ಅವರ ಜೊತೆ ಇದ್ದ ಮಧು ಜೆರಾಯ್ ಹಾಗೂ ಗಾಂಧಿ ಜೆರಾಯ್ ಅಣ್ಣ-ತಮ್ಮಂದಿರೆಂದು ಗೊತ್ತಾಗಿ ಈ ಮೂವರು 3 ವರ್ಷಗಳ ಹಿಂದೆ ನಗರಕ್ಕೆ ಬಂದು ಹೊಸೂರು ರಸ್ತೆಯ ಶಾಯಿಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿರುವುದು ಪತ್ತೆಯಾಯಿತು.

ಅಕ್ಕನ ಜೊತೆ ಸಂಬಂಧ : ಅಣ್ಣ-ತಮ್ಮಂದಿರಾದ ಮಧು ಜೆರಾಯ್, ಗಾಂಧಿ ಜೆರಾಯ್ಗೆ ಸಾಂಬರಿಜೆರಾಯ್ ಹಾಗೂ ಸಾಬಿತ್ರಿ ಜೆರಾಯ್ ಎಂಬ ಅಕ್ಕಂದಿರಿದ್ದು, ಅವರೂ ಕೂಡ ಶಾಯಿಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದೊಡ್ಡತೋಗೂರಿನ ಪಿಜಿ ಹಾಸ್ಟೆಲೊಂದರಲ್ಲಿ ವಾಸವಿದ್ದರು.

ಸಾಂಬರಿ ಜೆರಾಯ್ಗೆ ವಿವಾಹವಾಗಿದ್ದು, ಆಕೆಯ ಪತಿ ಕಾಶಿರಾಂ ಒರಿಸ್ಸಾದಲ್ಲೇ ಇದ್ದರೆ, ಮತ್ತೊಬ್ಬಾಕೆ ಸಾಬಿತ್ರಿ ಜೆರಾಯ್‍ ಗೆ ವಿವಾಹವಾಗಿರಲಿಲ್ಲ. ಆಕೆಯನ್ನು ಪರಿಚಯ ಮಾಡಿಕೊಂಡಿದ್ದ ಕೊಲೆಯಾದ ಬಿರಾಂಚಿ ಮಾಂಜಿ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ.

ಕಳೆದ ಜುಲೈನಲ್ಲಿ ಸಾಬಿತ್ರಿ ಜೆರಾಯ್ ಹೊಟ್ಟೆನೋವೆಂದು ತಮ್ಮಂದಿರು ಹಾಗೂ ಅಕ್ಕನಿಗೆ ಹೇಳಿ ಒರಿಸ್ಸಾಗೆ ಹೋಗಿದ್ದಳು. ಅಲ್ಲಿ ಆಕೆಗೆ ಹೊಟ್ಟೆನೋವು ಹೆಚ್ಚಾಗಿ ಭಾವ ಕಾಶಿರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿ ಅದು ಇಡೀ ಗ್ರಾಮಕ್ಕೆ ತಿಳಿದು ಅವಮಾನಕ್ಕೆ ಕಾರಣವಾಯಿತು.

ಅವಮಾನದ ಆಕ್ರೋಶ: ಕಾಶಿರಾಮ್ ಈ ವಿಷಯವನ್ನು ಮಧು ಜೆರಾಯ್, ಗಾಂಧಿಜೆರಾಯ್‍ಗೆ ತಿಳಿಸಿದ್ದು, ಅಕ್ಕ ಗರ್ಭಿಣಿಯಾಗಲು ಸ್ನೇಹಿತ ಬಿರಾಂಜಿ ಮಾಂಝಿಯೇ ಕಾರಣ ಎಂದು ತಿಳಿದು ಆಕ್ರೋಶಗೊಂಡು ಆತನನ್ನು ಕೊಲೆ ಮಾಡಿ ಅವಮಾನದ ಸೇಡು ತೀರಿಸಿಕೊಳ್ಳಲು ಮುಂದಾದರು.

ಅದರಂತೆ ಒರಿಸ್ಸಾದಿಂದ ನಗರಕ್ಕೆ ಬಂದ ಕಾಶಿರಾಂ, ದೊಡ್ಡತೋಗೂರಿನ ಬಾಮೈದನರಾದ ಮಧು ಜೆರಾಯ್, ಗಾಂಧಿಜೆರಾಯ್ ಮನೆಗೆ ಬಂದು ಮೂವರು ಸೇರಿ ತಮ್ಮ ಜೊತೆಗಿದ್ದ ಬಿರಾಂಜಿ ಮಾಂಝಿಯನ್ನು ಕೊಲೆ ಮಾಡಲು ಸೆ. 10 ರಂದು ರಾತ್ರಿ ಸಂಚು ರೂಪಿಸಿದರು.

ಕುಡಿಸಿ ಕೊಲೆ: ಭಾವ ಕಾಶಿರಾಂ ಊರಿನಿಂದ ಬಂದಿದ್ದು, ಎಲ್ಲರೂ ಸೇರಿ ಬಾರ್‍ ಗೆ ಹೋಗಿ ಮದ್ಯಪಾನ ಮಾಡೋಣ ಎಂದು ಪ್ರೀತಿಯಿಂದ ಮಾತನಾಡುತ್ತ ಬಿರಾಂಜಿ ಮಾಂಝಿಯನ್ನು ಕರೆದುಕೊಂಡು ಹೋದ ಮಧು ಜೆರಾಯ್, ಗಾಂಧಿಜೆರಾಯ್ ಹತ್ತಿರದ ಬಾರ್‍ ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕುಡಿದರು.

ನಂತರ ಕಾಶಿರಾಂ ತಾನು ದೂರದಿಂದ ಬಂದಿದ್ದು, ಬಾರ್ನಿಂದ ಹೊರಗಡೆ ಹೋಗಿ ಆರಾಮವಾಗಿ ಕುಳಿತು ಕುಡಿಯೋಣ ಎಂದು ಪುಸಲಾಯಿಸಿ ಮದ್ಯದ ಬಾಟಲಿಯನ್ನು  ತೆಗೆದುಕೊಂಡು ಬಿರಾಂಜಿ ಮಾಂಝಿಯನ್ನು ಕರೆದುಕೊಂಡು ಮೈದಾನಕ್ಕೆ ಕರೆದೊಯ್ದಿದ್ದಾರೆ.

ಅಲ್ಲಿ ಎಲ್ಲರೂ ಅಲ್ಲಿ ಕುಡಿಯುವ ವೇಳೆ ತಲೆ ಬಗ್ಗಿಸಿದ ಬಿರಾಂಜಿ ಮಾಂಝಿಗೆ ಗೊತ್ತಾಗದಂತೆ ರಾಡ್‍ನಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಹುಲ್ಲಿನ ಪೊದೆಯೊಳಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ತಲೆ ಕತ್ತರಿಸಿ ಕ್ಯಾಂಡಲ್ ಲೈಟ್ ಹಿಡಿದು ವಿಜಯೋತ್ಸವ ಆಚರಿಸಿ ನಮ್ಮ ಅಕ್ಕನನ್ನು ಗರ್ಭಿಣಿ ಮಾಡಿದ್ದೀಯ ಎಂದು ಹೇಳಿ ಮರ್ಮಾಂಗವನ್ನು ಕೊಯ್ದಿದ್ದು, ಅದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ತಲೆಯನ್ನು ಕೊಲೆ ಮಾಡಿದ್ದ ಸ್ವಲ್ಪ ದೂರದಲ್ಲಿ ಎಸೆಯಲಾಗಿದ್ದು, ಅದನ್ನು ಪತ್ತೆ ಮಾಡಲಾಗಿದೆ.

ವಿಜಯೋತ್ಸವ: ಕೊಲೆಯ ನಂತರ ಕಾಶಿರಾಂ ಒರಿಸ್ಸಾಗೆ ವಾಪಸ್ಸಾಗಿದ್ದು, ಅಲ್ಲಿ ಕೂಡ ಬಿರಾಂಜಿ ಮಾಂಝಿಯ ತಲೆ ಕತ್ತರಿಸಿ ತಕ್ಕ ಶಾಸ್ತಿ ಮಾಡಿರುವುದಾಗಿ ವಿಜಯೋತ್ಸವ ಆಚರಿಸಲಾಗಿತ್ತು ಎಂದು ಅವರು ತಿಳಿಸಿದರು.

ಆರೋಪಿಗಳನ್ನು ಪತ್ತೆ ಹಚ್ಚಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಾಗೂ ಶ್ವಾನದಳಕ್ಕೆ ನಗದು ಬಹುಮಾನ ನೀಡಿ ಸೀಮಂತ್ ಕುಮಾರ್ ಸಿಂಗ್ ಗೌರವಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಬೋರಲಿಂಗಯ್ಯ ಉಪಸ್ಥಿತರಿದ್ದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ