ಅಪಘಾತ: ಯುವಕನ ದೇಹ ಸುಟ್ಟು ಕರಕಲು !

Kannada News

15-09-2017

ಬೆಂಗಳೂರು: ದೇವನಹಳ್ಳಿಯ ವಿಶ್ವನಾಥಪುರದ ಪೆಟ್ರೋಲ್‍ ಬಂಕ್ ಬಳಿ, ನಿನ್ನೆ ರಾತ್ರಿ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್‍ ಗೆ ಬೆಂಕಿ ಹೊತ್ತಿಕೊಂಡು ಸವಾರ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.

ಮೃತಪಟ್ಟವರನ್ನು ದೇವನಹಳ್ಳಿ ತಾಲ್ಲೂಕಿನ ಆವತಿಯ ಪರಮೇಶ್ವರ(26)ಎಂದು ಗುರುತಿಸಲಾಗಿದೆ. ರಿಟ್ಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪರಮೇಶ್ವರ ರಾತ್ರಿ 9.15ರ ವೇಳೆ ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ವಿಶ್ವನಾಥಪುರದ ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ವೇಗವಾಗಿ ಆಹಾರ ಉತ್ಪನ್ನಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್‍ ನ ಪೆಟ್ರೋಲ್ ಟ್ಯಾಂಕ್ ಒಡೆದು ಶಾರ್ಟ್ ಸರ್ಕೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಗಾಯಗೊಂಡು ಕೆಳಗೆಬಿದ್ದು ಪ್ರಜ್ಞೆ ತಪ್ಪಿದ್ದ ಪರಮೇಶ್ವರ್‍ಗೂ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದಾರೆ. ಬೈಕ್ ಡಿಕ್ಕಿ ನಂತರ ಕ್ಯಾಂಟರ್‍ ಚಾಲಕ ನಿಯಂತ್ರಣ ತಪ್ಪಿ ಮುಂದೆ ಇದ್ದ ರಸ್ತೆ ವಿಭಜಕಕ್ಕೆ ಗುದ್ದಿದ್ದ ಪರಿಣಾಮ ಕ್ಯಾಂಟರ್ ಪಲ್ಟಿ ಹೊಡೆದಿದ್ದು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಬೈಕ್‍ಗೆ ಡಿಕ್ಕಿಯ ಮುನ್ನ ಕ್ಯಾಂಟರ್ ರಸ್ತೆ ಬದಿ ನಿಂತಿದ್ದ ಅನಿಲ ಟ್ಯಾಂಕರ್ ಗೂ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಅನಿಲ ಟ್ಯಾಂಕರ್‍ ಗೆ ಯಾವುದೇ ರೀತಿಯ ಹಾನಿ ಉಂಟಾಗದೇ ದೊಡ್ಡ ಅನಾಹುತ ತಪ್ಪಿದೆ. ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಯಾಂಟರ್ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ