ವರ್ಬೆಟಲ್ -2017 ಯಶಸ್ಸು….

Kannada News

15-09-2017 669

ಪ್ರಿಯ ಸ್ಪೆಷಲ್ ರಿಪೋರ್ಟ್ ವೀಕ್ಷಕರೇ…2005ನೇ ಇಸವಿಯಿಂದಲೂ, ಕರ್ನಾಟಕದಲ್ಲಿ ಪ್ರತಿವರ್ಷ ಆಯೋಜಿಸಲಾಗುವ ರಾಜ್ಯಮಟ್ಟದ ವರ್ಬೆಟಲ್ ಚರ್ಚಾ ಸ್ಪರ್ಧೆಗಳ ಬಗ್ಗೆ ಈಗಾಗಲೇ ನಿಮಗೆ ಗೊತ್ತಿದೆ. ಈ ಬಾರಿ ಆಯೋಜಿಸಲಾಗಿದ್ದ 13ನೇ ವರ್ಷದ ವರ್ಬೆಟಲ್ ವಾದವಿನಿಮಯ ಸ್ಪರ್ಧೆಗಳು ಅತ್ಯಂತ ಯಶಸ್ವಿಯಾಗಿ  ಮುಕ್ತಾಯವಾಗಿವೆ.

ಭಾರತದ ಅತ್ಯಂತ ದೊಡ್ಡ ಡಿಬೇಟ್ ತರಬೇತಿ ಮತ್ತು ಉತ್ತೇಜಕ ಸಂಸ್ಥೆಯಾಗಿರುವ ವರ್ಬೆಟಲ್, ಕರ್ನಾಟಕ ರಾಜ್ಯವೂ ಸೇರಿದಂತೆ, ದಕ್ಷಿಣ ಭಾರತದಲ್ಲಿ ಮತ್ತು ದೇಶದ ಇತರ ಹಲವು ಸ್ಥಳಗಳಲ್ಲಿ, ದೊಡ್ಡ ಮಟ್ಟದ ಚರ್ಚಾ ಕೂಟಗಳನ್ನು ಆಯೋಜಿಸಿದೆ. ವರ್ಬೆಟಲ್, ತನ್ನ ವಿಶಿಷ್ಟ ಚರ್ಚಾ ನಮೂನೆಗಳ ಮೂಲಕ ವಿಶ್ವಾದ್ಯಂತ ಇರುವ ಪ್ರಖ್ಯಾತ ಚರ್ಚಾ ಸಂಸ್ಥೆಗಳ ಗಮನ ಸೆಳೆದಿದೆ.

2005ರಿಂದ ಇಲ್ಲಿಯವರೆಗೂ ಹತ್ತಾರು ಪ್ರಮುಖ ಇಂಗ್ಲಿಷ್ ಚರ್ಚಾ ಸ್ಪರ್ಧೆಗಳನ್ನು, ಚಿಂತನ ಕೂಟಗಳನ್ನು ಆಯೋಜಿಸುತ್ತಾ ಬಂದಿರುವ ವರ್ಬೆಟಲ್, ಕನ್ನಡ ಮಾಧ್ಯಮದ ಶಾಲೆಗಳ ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು, ಅವರಿಗೂ ಕೂಡ ತರ್ಕಬದ್ಧ ಚಿಂತನೆಯ ಅನುಭವ ನೀಡುತ್ತಿದೆ. ಈ ನಿಟ್ಟಿನಲ್ಲಿ,  ಕಳೆದ ನಾಲ್ಕು ವರ್ಷಗಳಿಂದಲೂ ವರ್ಬೆಟಲ್ ಕನ್ನಡ ಚರ್ಚಾ ಸ್ಪರ್ಧೆಯನ್ನೂ ಏರ್ಪಡಿಸುತ್ತಿದೆ. 

ಈ ಬಾರಿಯ ವರ್ಬೆಟಲ್-2017ರ ಚರ್ಚಾ ಸ್ಪರ್ಧೆಗಳು, ಇದೇ ಆಗಸ್ಟ್ 1 ರಿಂದ ಸೆಪ್ಟಂಬರ್ 13ರ ವರೆಗೂ ಅತ್ಯಂತ ಯಶಸ್ವಿಯಾಗಿ ನಡೆದಿವೆ. ಈ ಬಾರಿಯ  ವರ್ಬೆಟಲ್ ಸ್ಪರ್ಧಾವಳಿಯಲ್ಲಿ ರಾಜ್ಯದ  ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡು ವಿಶಿಷ್ಟ ಚರ್ಚೆಯ ಅನುಭವ ಪಡೆದುಕೊಂಡಿದ್ದಾರೆ.

ವರ್ಬೆಟಲ್ ನ ವಿವಿಧ ಹಂತ ಮತ್ತು ವಲಯಗಳ ಸ್ಪರ್ಧೆಗಳು ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು ನಗರಗಳಲ್ಲಿ ನಡೆದವು. ಇದೇ ಸೆಪ್ಟಂಬರ್ 13ರಂದು ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನ ಸಭಾಂಗಣದಲ್ಲಿ ವರ್ಬೆಟಲ್ ಫೈನಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 

ವರ್ಬೆಟಲ್ ಸಂಸ್ಥಾಪಕ, ಪ್ರಖ್ಯಾತ ರಾಜಕೀಯ ವಿಶ್ಲೇಷಕ, ಪತ್ರಕರ್ತ ಮತ್ತು ಸಂವಹನ ತಜ್ಞ ದೀಪಕ್ ತಿಮ್ಮಯ ವರ್ಬೆಟಲ್ ಫೈನಲ್ ಸ್ಪರ್ಧೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ACT ಫೈಬರ್ ನೆಟ್ ಸಂಸ್ಥೆಯ ರಿಯಾಲಿಟಿ ವಿಭಾಗದ ಮುಖ್ಯಸ್ಥ ರಾಜೀವ್ ನಾಯ್ಡು, ನಗರ ಯೋಜನಾ ತಜ್ಞ ರವಿಚಂದರ್, ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಡಾ.ವಿನಯ್ ಲೂತ್ರಾ,

ಸಾರಿಗೆ ಇಲಾಖೆಯ ಮಾಜಿ ಆಯುಕ್ತ, ಡಾ.ರಾಮೇಗೌಡ, ಐಟಿ ಉದ್ಯಮಿ ಪ್ರೀತಮ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವರ್ಬೆಟಲ್ ವಾದವಿನಿಮಯ ಸ್ಪರ್ಧೆಗಳ ಅಂತಿಮ ಹಂತದ ಹಣಾಹಣಿಗೆ ಸಾಕ್ಷಿಯಾದರು.

8 ರಿಂದ 12 ವರ್ಷ ವಯಸ್ಸಿನ ಮಕ್ಕಳು ಪಾಲ್ಗೊಂಡಿದ್ದ ಈ ಬಾರಿಯ ವರ್ಬೆಟಲ್ ಬಿಗಿನರ್ ಇಂಗ್ಲಿಷ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮಣಿಪಾಲ್ ಸ್ಕೂಲ್ ಮಂಗಳೂರಿನ ಕೇದಾರ್ ರಾಜ್ ಮತ್ತು ಸುಹಾನ್ ಅಶ್ರಫ್ ತಂಡ ಮೂವತ್ತು ಸಾವಿರ ರೂಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಇದೇ ವಿಭಾಗದಲ್ಲಿ ಫೈನಲ್ ತಲುಪಿದ ವಿದ್ಯಾಶಿಲ್ಪ ಅಕಾಡೆಮಿ ಬೆಂಗಳೂರಿನ ಆದ್ಯ ವರ್ಮಾ, ಅನಿಕಾ ಜಯಂತ್ ಮತ್ತು ದೆಹಲಿ ಪಬ್ಲಿಕ್ ಸ್ಕೂಲಿನ ದಿಶಾ.ಎಸ್ ಮತ್ತು ಕೆವಿನ್ ಜೋಸ್ ಥಾಮಸ್ ತಂಡಗಳಿಗೆ ತಲಾ ಐದುಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ. 

12 ರಿಂದ 16   ವಯೋಮಿತಿಯ ವಿದ್ಯಾರ್ಥಿಗಳು ಪಾಲ್ಗೊಂಡ ವರ್ಬೆಟಲ್ ಜೂನಿಯರ್ ವಿಭಾಗದಲ್ಲಿ ಸರಿಯಾಗಿ ಒಂದು ಲಕ್ಷ ರೂಪಾಯಿಗಳ ಮೊದಲ ಬಹುಮಾನ ಇರಿಸಲಾಗಿತ್ತು. ಈ ಬಾರಿ ಅತ್ಯುತ್ತಮವಾಗಿ ವಾದಮಂಡಿಸುವ ಮೂಲಕ ಮೊದಲ ಸ್ಥಾನ ಪಡೆದು, ಈ ದೊಡ್ಡ ಬಹುಮಾನವನ್ನು ಗೆದ್ದು ಬೀಗಿದವರು ಹುಬ್ಬಳ್ಳಿಯ ಚಿನ್ಮಯ ಇಂಗ್ಲೀಷ್ ಸ್ಕೂಲ್ ನ ಆದಿತ್ಯ.ಬಿ.ಕಲ್ಯಾಣಿ ಮತ್ತು ಸಮೀರ್ ಶರೀಫ್ ತಂಡ. ವರ್ಬೆಟಲ್ ಜೂನಿಯರ್ ವಿಭಾಗದಲ್ಲಿ ಅಂತಿಮ ಹಣಾಹಣಿ ತಲುಪಿದ ಮಂಗಳೂರಿನ ಯೆನೆಪೋಯ ಶಾಲೆಯ ಸಮ್ಹಾ ಆಸಿಯ ಅಬ್ಬಾಸ್ ಮತ್ತು ಆರ್ಣವ್ ಆಳ್ವಾ ಹಾಗೂ ಪ್ರೆಸಿಡೆನ್ಸಿ ಶಾಲೆ ಬೆಂಗಳೂರಿನ ನಿಖಿತ ಮಿಲಿನ ಅಫಾಲೆ ಮತ್ತು ಅಭಿರಾಮ್. ಹೆಚ್ ತಂಡಗಳು ತಲಾ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ಪಡೆದುಕೊಂಡವು.  ವರ್ಬೆಟಲ್ ಜೂನಿಯರ್ ವಿಭಾಗದ ಮಾರ್ಗದರ್ಶಕರಿಗೆ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ವಿತರಿಸಲಾಯಿತು.

ಇದೇ ರೀತಿ  16 ರಿಂದ 24ರ ವಯೋಮಿತಿಯ ವರ್ಬೆಟಲ್ ಸೀನಿಯರ್  ಸ್ಪರ್ಧೆಗಳಲ್ಲಿ ಐವತ್ತು ಸಾವಿರ ರೂಪಾಯಿಗಳ ಮೊದಲ ಬಹುಮಾನ ನಿಗದಿಪಡಿಸಲಾಗಿತ್ತು. ವರ್ಬೆಟಲ್ ಸೀನಿಯರ್ ವಿಭಾಗದಲ್ಲಿ ವಿದ್ಯಾನಿಕೇತನ್ ಶಾಲೆಯ ಮಹಮದ್ ಅಮಾನ್ ಆಸಿಮ್ ಮತ್ತು ಸಿರಿ ಶೆಟ್ಟಿ ತಂಡದವರು ತಮ್ಮ ವಾಗ್ಝರಿಯಿಂದ ತೀರ್ಪುಗಾರರ ಮನಗೆದ್ದು ಐವತ್ತುಸಾವಿರ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಫೈನಲ್ ಪ್ರವೇಶಿಸಿದ ಇನ್ನೂ ಎರಡು ತಂಡಗಳಾದ ಸಹ್ಯಾದ್ರಿ ಕಾಲೇಜು ಮಂಗಳೂರಿನ ಪಿ.ಸಂಜಯ್, ನಿಶಾಲ್ ನಿವ್ಯ ರೋಡ್ರಿಗಸ್ ಹಾಗೂ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಕೃತಿಕಾ ರಘೋತ್ತಮನ್, ದಿವ್ಯಾ ಶೇಖರ್ ತಲಾ ಐದುಸಾವಿರ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ.

ಅಂತಿಮವಾಗಿ ವರ್ಬೆಟಲ್ ಕನ್ನಡ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಚಂದನ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಜಾತವೇದಾ ಭಟ್ ಮತ್ತು ಅನನ್ಯ ಆರ್.ವಿ ತಂಡ 20 ಸಾವಿರ ರೂಪಾಯಿಗಳ ಮೊದಲ ಬಹುಮಾನವನ್ನು ತನ್ನದಾಗಿಸಿಕೊಂಡಿತು. ವರ್ಬೆಟಲ್ ಕನ್ನಡ ವಿಭಾಗದಲ್ಲಿ ಫೈನಲ್ ತಲುಪಿದ ಪ್ರೆಸಿಡೆನ್ಸಿ ಶಾಲೆ ನಂದಿನಿ ಲೇಔಟ್ ನ ತನುಶ್ರೀ ಕೆ. ಮತ್ತು ಲಕ್ಷ್ಮೀ ಐಶ್ವರ್ಯ  ತಂಡ ಹಾಗೂ ಕಲ್ಪತರು ಸೆಂಟ್ರಲ್ ಸ್ಕೂಲ್ ನ ಹಸನ್ ಪಾಷ ಮತ್ತು ಶ್ರವ್ಯಾ ಎಸ್.ಬಾಬು ಅವರ ತಂಡಗಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ನೀಡಲಾಯಿತು. ACT Fiber Net ಕಂಪನಿ ಸತತ ಎರಡನೇ ವರ್ಷ ವರ್ಬೆಟಲ್ ಚರ್ಚಾ ಸ್ಪರ್ಧೆಗಳ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಪ್ರಸಿದ್ಧ

Microlabs ಸಂಸ್ಥೆ ಮತ್ತು Vencobb ಕಂಪನಿಗಳೂ ಕೂಡ ವರ್ಬೆಟಲ್ ಚರ್ಚಾ ಸ್ಪರ್ಧೆಗಳ ಆಯೋಜನೆಗೆ ನೆರವು ನೀಡಿದ್ದವು. ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜು, ರಾಜ್ಯ ಮಟ್ಟದ ವರ್ಬೆಟಲ್ ಸ್ಪರ್ಧೆಗಳ ಆತಿಥ್ಯ ವಹಿಸಿಕೊಂಡರೆ ಪ್ರಖ್ಯಾತ ಆರ್.ವಿ ಶಿಕ್ಷಣ ಸಂಸ್ಥೆಯ ಎನ್.ಎಂ.ಕೆ.ಆರ್.ವಿ ಕಾಲೇಜಿನ ಶಾಶ್ವತಿ ಸಭಾಂಗಣದಲ್ಲಿ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಗಳು ನಡೆದಿದ್ದವು.

ಪ್ರಜಾತಂತ್ರದ ಮೌಲ್ಯಗಳು, ವಾಕ್ ಸ್ವಾತಂತ್ರ್ಯ, ಸಹನೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದೇ ವರ್ಬೆಟಲ್ ನ ಉದ್ದೇಶ. ವರ್ಬೆಟಲ್ ವಾದ ವಿನಿಮಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳು ತಮ್ಮ ಚಿಂತನಾ ಲಹರಿ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಅವರೆಲ್ಲರೂ ಹೊಸ ರೀತಿಯ ಮಾತುಗಾರಿಕೆ, ಸೊಗಸಾದ ವಾದ ಮಂಡನೆ ಶೈಲಿ ರೂಪಿಸಿಕೊಳ್ಳಲೂ ಕೂಡ ವರ್ಬೆಟಲ್ ನೆರವಾಗುತ್ತಿದೆ. ವಿದ್ಯಾರ್ಥಿ ದೆಸೆಯಲ್ಲೇ ಪ್ರಬಲ, ವಿಚಾರಪೂರ್ಣ ತರ್ಕಬದ್ಧವಾದ ಮಾತುಗಾರಿಕೆ ಬೆಳೆಸಿಕೊಳ್ಳಲು ನೆರವಾಗುತ್ತಿರುವ ವರ್ಬೆಟಲ್ ಯಾವುದೇ ಲಾಭದ ಉದ್ದೇಶವಿಲ್ಲದೆ ಸೇವೆ ಸಲ್ಲಿಸುತ್ತಿದೆ. ವರ್ಬೆಟಲ್ ಸಂಸ್ಥೆ ನೀಡುವ ತರಬೇತಿಯಿಂದ ವಿದ್ಯಾರ್ಥಿಗಳು ಮತ್ತು ನಾಗರಿಕರು ಉದಾರತೆ, ಮುಕ್ತ ಚಿಂತನೆ ಬೆಳೆಸಿಕೊಳ್ಳಲು ಪ್ರೇರೇಪಣೆ ದೊರೆಯುತ್ತದೆ. ಇದರ ಜೊತೆಗೆ ಸಮಾಜದಲ್ಲಿ  ಸ್ವೀಕಾರಾರ್ಹವಾದ ಹಾಗೂ ಜವಾಬ್ದಾರಿಯುತ ನಡವಳಿಕೆಯ ರೀತಿ ನೀತಿಗಳನ್ನು ಬೆಳೆಸಿಕೊಳ್ಳುವಲ್ಲಿ  ನೆರವಾಗುತ್ತದೆ.  ವರ್ಬೆಟಲ್ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ತರ್ಕಜ್ಞಾನ ದೊರೆಯುತ್ತದೆ. ಅದು, ಸ್ಪರ್ಧಾತ್ಮಕ ಚಿಂತನೆ ಬೆಳೆಸಿಕೊಂಡು ಮುಂಚೂಣಿಗೆ ಹೋಗಲು ಮತ್ತು ನಾಯಕತ್ವ ಬೆಳೆಸಿಕೊಳ್ಳಲು ನೆರವಾಗುತ್ತದೆ. ವರ್ಬೆಟಲ್ ನಲ್ಲಿ ಪ್ರಜಾತಾಂತ್ರಿಕ ನಡವಳಿಕೆಗಳನ್ನು ಕಲಿಯುವುದರಿಂದ ವಿದ್ಯಾರ್ಥಿಗಳು ಬದುಕನ್ನು ಕಲಿಯುತ್ತಾರೆ, ಉತ್ತಮ ನಾಗರಿಕರಾಗುತ್ತಾರೆ. ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣರಾಗುತ್ತಾರೆ.

ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಚರ್ಚಾ ವೇದಿಕೆಯಾಗಿ ಬೆಳೆಯುವ ಗುರಿ ಹೊಂದಿರುವ ವರ್ಬೆಟಲ್ ಸಂಸ್ಥೆ,  ಪ್ರಜಾತಾಂತ್ರಿಕ ಆದರ್ಶ ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡುವ ಉದ್ದೇಶ ಹೊಂದಿದೆ. ಇವೆಲ್ಲಾ ಕಾರ್ಯಸಾಧನೆಗಳ ಮೂಲಕ ವರ್ಬೆಟಲ್,  ಜಗತ್ತಿನ ಅತಿ ದೊಡ್ಡ ಜ್ಞಾನ ಪ್ರಸರಣ ಸಂಸ್ಥೆಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇರಿಸಿಕೊಂಡು ಸೇವೆ ಸಲ್ಲಿಸುತ್ತಿದೆ. ನಿಮ್ಮ ಮಕ್ಕಳು ಮುಂದಿನ ವರ್ಷದ ವರ್ಬೆಟಲ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಶಿಷ್ಟ ಅನುಭವ ಪಡೆಯುವುದರ ಜೊತೆಗೆ, ದೊಡ್ಡ ದೊಡ್ಡ ಬಹುಮಾನಗಳನ್ನು ಪಡೆಯಲಿ ಅನ್ನುವುದು ವರ್ಬೆಟಲ್ ಆಶಯ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ