ಗೌರಿ ಹತ್ಯೆ: ರಿಯಲ್ ಎಸ್ಟೇಟ್ ಲಿಂಕ್ ಶಂಕೆ..?

Kannada News

14-09-2017

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆಗೈದ ಹಂತಕರ ಪತ್ತೆ ಕಾಯಾಚರಣೆ ಕೈಗೊಂಡಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ಇಲ್ಲಿಯವರೆಗೆ 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಎಸ್‍ಐಟಿಯಲ್ಲಿರುವ ಅಧಿಕಾರಿಗಳು ತಂಡಗಳಾಗಿ ವಿಭಾಗಿಸಿಕೊಂಡು ವಿವಿಧ ಆಯಾಮಗಳಿಂದ ಗೌರಿ ಲಂಕೇಶ್ ಹಂತಕರ ಪತ್ತೆ ತನಿಖೆ ನಡೆಸುತ್ತಿದ್ದು ಒಂದು ತಂಡ ಪಿಸ್ತೂಲ್ ಜಾಡು ಹಿಡಿದರೆ ಮತ್ತೊಂದು ತಂಡ ನಕ್ಸಲ್,ಮೂಲಭೂತವಾದದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರಕ್ಕೆ ತಂಡವೊಂದು ತೆರಳಿ ಇಲ್ಲಿವರೆಗೆ ಗೌರಿ ಅವರ ಮಾದರಿಯಲ್ಲಿ ನಡೆದ ಹತ್ಯಾ ತನಿಖೆಯನ್ನು ಪರಿಶೀಲನೆ ನಡೆಸಿ ಶಾರ್ಪ್ ಶೂಟರ್‍ ಗಳ ಜಾಡು ಹಿಡಿದಿದೆ. ಎಲ್ಲಾ ಆಯಾಮಗಳಿಂದಲೂ ನಡೆಯುತ್ತಿರುವ ತನಿಖೆಯಲ್ಲಿ 80 ಮಂದಿಯ ಜೊತೆಗೆ ಹಲವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಆಗಾಗ ಸಭೆ ಸೇರಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

ಮಾಹಿತಿ ಸಂಗ್ರಹಿಸುವ ವೇಳೆ ಗೌರಿ ಲಂಕೇಶ್ ಹತ್ಯೆಗೆ ಇದೆಯಾ ರಿಯಲ್ ಎಸ್ಟೇಟ್ ಲಿಂಕ್ ಇರುವ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗೆ ಅರುಣ್ ಎಂಬುವವರಿಗೆ ಎಸ್‍ಐಟಿ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ಆರಂಭದಲ್ಲಿ ಉದ್ಯಮಿ ಅರುಣ್ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿದ್ದು, ಬಳಿಕ ಪೊಲೀಸರ ಖಡಕ್ ವಾರ್ನಿಂಗ್'ನಿಂದಾಗಿ ಹಾಜರಾಗಲು ಒಪ್ಪಿಗೆ ಸೂಚಿಸಿದ್ದು ಆತನ ವಿಚಾರಣೆಯಿಂದ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡದ ಸುಳಿವು ದೊರೆಯಬಹುದು ಎನ್ನುವುದು ಎಸ್‍ಐಟಿ ಅಧಿಕಾರಿಗಳ ವಿಶ್ವಾಸವಾಗಿದೆ.

ಉದ್ಯಮಿ ಅರುಣ್, ನೆಲಮಂಗಲದ ಬಳಿ ಇರುವ ಗೌರಿ ಲಂಕೇಶ್ ಕುಟುಂಬಕ್ಕೆ ಸೇರಿದ ಫಾರ್ಮ್ ಹೌಸ್'ನಲ್ಲಿ ಲೇಔಟ್ ನಿರ್ಮಿಸಲು ಯೋಜನೆ ಮಾಡಿದ್ದರು. ಆದರೆ ಫಾರ್ಮ್ ಹೌಸ್ ಮಾಲೀಕತ್ವದ ವಿಷಯದಲ್ಲಿ ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದು ಅದೇ ಗೌರಿ ಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನಲೆಯಲ್ಲಿ ಜೈಲಿನಲ್ಲಿರುವ ಕುಣಿಗಲ್ ಗಿರಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಎಸ್‍ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ