ಕ್ಯಾಬ್ ಚಾಲಕನ ಭೀಕರ ಕೊಲೆ !

Kannada News

14-09-2017

ಬೆಂಗಳೂರು: ಮಡಿವಾಳದ ಜಕ್ಕಸಂದ್ರದಲ್ಲಿ ನಿನ್ನೆ ಮಧ್ಯರಾತ್ರಿ ಮಕ್ಕಳಿಗೆ, ಎಗ್‍ರೈಸ್ ಕಟ್ಟಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೋಲಾ ಕ್ಯಾಬ್ ಚಾಲಕರೊಬ್ಬರನ್ನು ಅಡ್ಡಗಟ್ಟಿದ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗ್‍ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ಕ್ಯಾಬ್ ಚಾಲಕನನ್ನು ಜಕ್ಕಸಂದ್ರದ ಸುಬ್ರಮಣಿ (30)ಎಂದು ಗುರುತಿಸಲಾಗಿದೆ. ರಾತ್ರಿ 11ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಹತ್ತಿರದ ರಸ್ತೆಯ ತಳ್ಳುಗಾಡಿ ಹೋಟೆಲ್‍ನಲ್ಲಿ  ಎಗ್ರೈಸ್ ಕಟ್ಟಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದಾಗ ಏಕಾಏಕಿ ಬಂದ ದುಷ್ಕರ್ಮಿಗಳು ಸುಬ್ರಮಣಿಯನ್ನು ಅಡ್ಡಗಟ್ಟಿ ಜಗಳ ತೆಗೆದು ಬೆನ್ನು, ತಲೆ ಕುತ್ತಿಗೆಗೆ ಲಾಂಗ್‍ ನಿಂದ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.

ಮೊದಲು ಬಂಡೇಪಾಳ್ಯದಲ್ಲಿ ವಾಸಿಸುತ್ತಿದ್ದ ಸುಬ್ರಮಣಿ, ಇತ್ತೀಚೆಗೆ ಜಕ್ಕಸಂದ್ರಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದ. ತನ್ನ ಇಟಿಯೋಸ್ ಕಾರನ್ನು ವೊಲಾಗೆ ಬಿಟ್ಟು ಚಾಲಕನಾಗಿದ್ದ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಮಕ್ಕಳು ಎಗ್ರೈಸ್ ಕೇಳಿದ್ದು, ಅದನ್ನು ತರಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಪ್ರಕರಣ ದಾಖಲಿಸಿರುವ ಮಡಿವಾಳ ಪೊಲೀಸ್ ಇನ್ಸ್ ಪೆಕ್ಟರ್ ಮಲ್ಲೇಶ್ ಬೋಳೆತ್ತಿನ ಅವರು, ದುಷ್ಕರ್ಮಿಗಳ ಪತ್ತೆಗಾಗಿ ತೀವ್ರಶೋಧ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ