ಚೇಲಾ ಮಂತ್ರಿಗಳು: ಸಮಾಜ ಒಡೆಯುತ್ತಿದ್ದಾರೆ..?

Kannada News

14-09-2017

ಬಾಗಲಕೋಟೆ: ಸಿದ್ದರಾಮಯ್ಯ ಸಚಿವ ಸಂಪುಟದ ನಾಲ್ಕು ಜನ ಚೇಲಾ ಮಂತ್ರಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಸಚಿವ ಎಂ.ಬಿ ಪಾಟೀಲ್ ಹೇಳಿಕೆ ಸಾಕ್ಷಿ ಎಂದು, ಎಂ.ಬಿ. ಪಾಟೀಲ್ ಗೆ, ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾಜದಲ್ಲಿ ಒಡಕನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ಮಠಾಧೀಶರು ಸರ್ವಸ್ವತಂತ್ರರು ಯಾವುದೇ ಪಕ್ಷಕ್ಕೂ ಮಠಗಳಿಗೂ ಸಂಬಂಧವಿಲ್ಲ, ಯಾವುದೇ ಪಕ್ಷದ ಅಧೀನದಲ್ಲಿ ಯಾವುದೇ ಮಠಗಳಿಲ್ಲ ಎಂದರು.

ಇನ್ನು ಡಿ.ವೈ.ಎಸ್.ಪಿ ಆತ್ಮಹತ್ಯೆ ಪ್ರಕರಣದ ಕುರಿತು, ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದೆ, ಸಿಐಡಿ ತನಿಖೆ ಏಕಪಕ್ಷೀಯವಾಗಿ ನಡೆದಿದೆ, ಎಲ್ಲ ಸಾಕ್ಷಿಗಳನ್ನು ಪಡೆದಿಲ್ಲ, ಗಣಪತಿ ಮೊಬೈಲ್ ಡಿಟೇಲ್ ನಲ್ಲಿರುವ ವ್ಯಕ್ತಿಗಳಿಗೆ ರಾಜ್ಯಸರಕಾರ ಧಮಕಿ ಹಾಕುತ್ತಿದೆ ಎಂದು ಆರೋಪಿಸಿದರು. ಸಿಬಿಐ ತನಿಖೆ ಮೇಲೂ ಜಾರ್ಜ್ ಪ್ರಭಾವ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಜಾರ್ಜ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಅಷ್ಟೇ ಅಲ್ಲದೇ, ಕಳೆದ ನಾಲ್ಕು ವರ್ಷಗಳಿಂದ ಕೆಂಪಯ್ಯ ಪೊಲೀಸ್ ಇಲಾಖೆ ದುರ್ಬಲಗೊಳಿಸಿದ್ದಾರೆ. ನಕಲಿ ಪ್ರಮಾಣಪತ್ರ ಭ್ರಷ್ಟಾಚಾರ ಆರೋಪ ಕೆಂಪಯ್ಯ ಮೇಲಿದೆ, ಕೆಂಪಯ್ಯ ಅವರನ್ನು ಗೃಹ ಇಲಾಖೆಯಿಂದ ದೂರವಿಡಬೇಕು, ಗೃಹ ಇಲಾಖೆಯಲ್ಲಿನ ಯಾವುದೇ ಹಗರಣಕ್ಕೂ ಕೆಂಪಯ್ಯ ನೇರ ಹೊಣೆ ಎಂದರು.

ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷ ಆಯಿತು, ಇದುವರೆಗೂ ಆರೋಪಿಗಳನ್ನು ಹಿಡಿದಿಲ್ಲ, ಗೌರಿ ಹತ್ಯೆ ವಿಧಾನ ಸೌಧದ ಕೂಗಳತೆ ದೂರದಲ್ಲಿ ನಡೆದಿದ್ದು, ಇದರಿಂದ ಕಾನೂನು ಸುವ್ಯವಸ್ಥೆ ಹೇಗಿದೆ ಅಂತ ತಿಳಿಸುತ್ತೆ. ಆದಷ್ಟು ಬೇಗ ಗೌರಿ ಹಂತಕರನ್ನು ಬಂಧಿಸಬೇಕೆಂಬುದು ಬಿಜೆಪಿ ನಿಲುವು, ವಿನಾಕಾರಣ ಮನಸ್ಸಿಗೆ ಬಂದವರ ಮೇಲೆ ಆರೋಪ ಮಾಡಬಾರದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ