ವಿ.ವಿ.ಅವ್ಯವಹಾರ: ಪ್ರೊ.ರಂಗಪ್ಪ ನೇರ ಕಾರಣ..?

Kannada News

14-09-2017

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯು.ಜಿ.ಸಿ ಮಾನ್ಯತೆ ಸಿಗದ ಪರಿಣಾಮ 3.25 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಆದರೂ ಈ ವಿಚಾರದಲ್ಲಿ ವಿದ್ಯಾವಂತರು ಮೌನ ವಹಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು, ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮುಕ್ತ ವಿ.ವಿ. ಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ವಿಶ್ರಾಂತ ಉಪ ಕುಲಪತಿ ಪ್ರೊ.ರಂಗಪ್ಪ ನೇರ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.  ಹೀಗಾಗಿ ಮುಕ್ತ ವಿ.ವಿ.ಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಯನ್ನು ಸಿ.ಬಿ.ಐ ಗೆ ವಹಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಇಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದರು.

ಬ್ರಿಡ್ಜ್ ಕೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಜವಾಬ್ದಾರರಾಗಿರುವ ಅಂದಿನ ಉಪ ಕುಲಪತಿ ರಂಗಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಮುಕ್ತ ವಿ.ವಿ ಯ ಹಾಲಿ ಉಪ ಕುಲಪತಿ ಪ್ರೊ. ಶಿವಲಿಂಗಯ್ಯಗೂ ಪತ್ರ ಬರೆಯುತ್ತಿದ್ದೇನೆ ಎಂಬುದಾಗಿಯೂ, ಮತ್ತು ರಂಗಪ್ಪ ವಿರುದ್ದ ಸಿಬಿಐ ತನಿಖೆಗೆ ಆಗ್ರಹಿಸಿರುವ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೂ ಪತ್ರ ಬರೆದು ಗಮನಕ್ಕೆ ತರುತ್ತಿದ್ದೇನೆ, ರಂಗಪ್ಪನಂತಹ ಕ್ರಿಮಿನಲ್ ವ್ಯಕ್ತಿ ರಾಜಕಾರಣಕ್ಕೆ ಬರಬಾರದು, ರಂಗಪ್ಪರನ್ನು ಜೆಡಿಎಸ್ ಗೆ ಸೇರಿಸಿಕೊಳ್ಳಲು ಎಷ್ಟು ಹಣ ಪಡೆದಿದ್ದೀರಿ?  ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿ ಪತ್ರದ ಮೂಲಕ ದೇವೇಗೌಡರನ್ನು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ದೇವೇಗೌಡರ ಕೃಪಾಕಟಾಕ್ಷದಿಂದ ರಾಜಕೀಯ ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ದೇವೇಗೌಡ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.  ಹೀಗಾಗಿ ಮೈಸೂರಿನಲ್ಲಿ ತಮ್ಮ ಮೂಗಿನ ಕೆಳಗೆ ಬಹುದೊಡ್ಡ ಹಗರಣ ನಡೆದಿದ್ದರೂ ಕಂಡು ಕಾಣದಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ, ಸಾವಿರಾರು ಕೋಟಿ ರೂಪಾಯಿ ಹಗರಣವನ್ನು ಸಿಬಿಐ ಗೆ ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಯುಜಿಸಿ ಅಧ್ಯಕ್ಷರಾಗಿರುವ ವೇದಪ್ರಕಾಶ್ ಕೂಡ ಬಹುದೊಡ್ಡ ಕ್ರಿಮಿನಲ್. ವೇದಪ್ರಕಾಶ್ ಕೂಡ ವಿ.ವಿ.ಯಲ್ಲಿ ನಡೆದಿರುವ ಹಗರಣದ ಫಲಾನುಭವಿ ಆಗಿದ್ದಾರೆ, ಅಕ್ರಮ, ಅವ್ಯವಹಾರದ ಹಣದಲ್ಲಿ ವೇದಪ್ರಕಾಶ್ ಕೂಡ ಪಾಲು ಪಡೆದಿದ್ದಾರೆ ಎಂದು ಆರೋಪಿಸಿದರು.

ವಿ.ವಿ. ಗಳ ಕುಲಪತಿಗಳ ವಿರುದ್ಧ ಈ ಹಿಂದೆ ಗಂಭೀರ ಆರೋಪ ಮಾಡಿದ್ದ ಸಚಿವ ಬಸವರಾಜ ರಾಯರೆಡ್ಡಿ ಕೂಡ ಉಪ ಕುಲಪತಿಗಳಿಂದ ಹಫ್ತಾ ವಸೂಲಿ ಮಾಡಿಕೊಂಡು ಮೌನ ವಹಿಸಿರುವಂತಿದೆ. ಕರ್ನಾಟಕ ರಾಜ್ಯ ಮುಕ್ತ ವಿ.ವಿ ಹಗರಣಕ್ಕೆ ಸಂಬಂಧಿಸಿದಂತೆ ರಾಜಭವನ ಕೂಡ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಇನ್ನು ಮುಂದಾದರೂ ರಾಜ್ಯಪಾಲರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಗೋ.ಮಧುಸೂದನ್ ಆಗ್ರಹಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ