ಒಡೆಯರ್ ಹೆಸರಲ್ಲಿ ನಕಲಿ ಅಗ್ರಿಮೆಂಟ್ !13-09-2017 168 0

ಬೆಂಗಳೂರು: ದಿವಂಗತ ಶ್ರೀಕಂಠ ದತ್ತ ಒಡೆಯರ್ ಹೆಸರಿನಲ್ಲಿ ನಕಲಿ ಅಗ್ರಿಮೆಂಟ್ ಮಾಡಿರುವ ದೂರಿನ  ಹಿನ್ನಲೆಯಲ್ಲಿ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಸೇರಿದಂತೆ ಆರು ಮಂದಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಅರಮನೆ ಮೈದಾನದ ಸುತ್ತ 150 ಜಾಹೀರಾತು ಫಲಕ ಹಾಕಲು ಪರವಾನಗಿ ಪಡೆದ ನಕಲಿ ಅಗ್ರಿಮೆಂಟ್ ಸೃಷ್ಟಿಸಿದ್ದರ ವಿರುದ್ದ  ಅರಮನೆ ಮ್ಯಾನೇಜರ್ ಪಾಂಡಿಯನ್ ನೀಡಿದ ದೂರಿನ ಆಧರಿಸಿ ಚಂದ್ರಶೇಖರ್ ಸ್ವಾಮೀಜಿ, ಆಶ್ರಫ್ ಆಲಿ, ಮಧು ಆಚಾರ್ಯ, ಗಿರೀಶ್ ಕಾಮತ್, ಅಬ್ದುಲ್ ರೆಹಮಾನ್, ರಜನಿ.ಸಿ.ಭಟ್ ಸೇರಿ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಒಡೆಯರ್ ಬದುಕಿದ್ದ ವೇಳೆ ಅರಮನೆ ಸುತ್ತಮುತ್ತ ಜಾಹೀರಾತು ಫಲಕಗಳನ್ನು ಹಾಕಲು ಒಪ್ಪಂದ ಮಾಡಿದ್ದಾಗಿ, ರಾಣಿ ಪ್ರಮೋದಾ ದೇವಿ ಅವರ ಮುಂದೆ ಆರೋಪಿಗಳು ಹೇಳಿಕೆ ನೀಡಿದ್ದರು.

ಒಡೆಯರ್ ಬದುಕಿದ್ದ ವೇಳೆ 2012 ಜುಲೈ 18ರಂದು 7.5 ಕೋಟಿ ರೂ. ನೀಡಿ ಅಗ್ರಿಮೆಂಟ್ ಮಾಡಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದರು ಎನ್ನಲಾಗಿದೆ. 2013 ರಲ್ಲಿ ಶ್ರೀ ಕಂಠ ದತ್ತ ಒಡೆಯರ್ ಅಕಾಲಿಕ ಮರಣ ಹೊಂದಿದ ಬಳಿಕ 2014 ಫೆಬ್ರವರಿ 2 ನೇ ತಾರೀಖು ಅರೋಪಿಗಳು ರಾಣಿ ಪ್ರಮೋದಾ ದೇವಿಯವರನ್ನು ಭೇಟಿಯಾಗಿ ಉಳಿದ ದಾಖಲೆಗಳಿಗೆ ಸಹಿ ಹಾಕಲು ಕೇಳಿದ್ದರು. ಈ ವೇಳೆ ದಾಖಲೆ ಪತ್ರಗಳನ್ನು ತರುವಂತೆ ಹೇಳಿದ್ದ ರಾಣಿಗೆ ಆರೋಪಿಗಳು ನಕಲಿ ದಾಖಲೆಗಳನ್ನು ತೋರಿಸಿದ್ದರು ಎಂಬ ಆರೋಪವಿದೆ.

ರಾಣಿ ದಾಖಲೆಗಳನ್ನು ನೀಡುವಂತೆ ಕೇಳಿದಾಗ ಆರೋಪಿಗಳು ಸ್ವತಃ ಕೋರ್ಟ್ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ಆದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ ಎರಡು ಬಾರಿ ಪ್ರಮೋದಾ ದೇವಿ ಪರವಾಗಿ ತೀರ್ಪು ನೀಡಿದ್ದವು. ಅಲ್ಲದೇ ಹೈಕೋರ್ಟ್ ತನಿಖೆ ನಡೆಸಿ ವರದಿ ನೀಡಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು. ಈ ವೇಳೆ ತಮ್ಮ ಅಸಲಿ ಬಣ್ಣ ಬಯಲಾಗುವ ಭಯದಿಂದ 2016ರಲ್ಲಿ ಆರೋಪಿಗಳು ತನಿಖೆಗೆ ವಿರಾಮ ತಂದಿದ್ದರು. ವಿರಾಮದ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸರು ಇದೀಗ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Links :

ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ