ಸುಳಿವಿನ ಕುರಿತು ಮಾಹಿತಿ ನೀಡುವುದಿಲ್ಲ !

Kannada News

13-09-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣವಾಗುವವರೆಗೆ ಯಾವ ಸುಳಿವಿನ ಕುರಿತೂ ಮಾಹಿತಿ ನೀಡುವುದಿಲ್ಲ. ಹಾಗೆ ನೀಡಿದರೆ ಅದು ಹಂತಕರಿಗೆ ಅನುಕೂಲ ಒದಗಿಸುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಖಂಡ ತುಂಡವಾಗಿ ಹೇಳಿದ್ದಾರೆ.

ವಿಧಾನಸೌಧದ ಸಮ್ಮುಖದಲ್ಲಿ 23 ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಚಾಲನೆ ಮತ್ತು ನಾಲ್ಕು ವರ್ಷಗಳ ಕಾಲ ಸಾರಿಗೆ ಸಚಿವರಾಗಿ ತಮ್ಮ ಸಾಧನೆಯ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಈಗಾಗಲೇ ಭರದಿಂದ ತನಿಖೆ ನಡೆಸಿದೆ. ಈ ಹಂತದಲ್ಲಿ ಯಾವ ಮಟ್ಟದ ಸುಳಿವು ಸಿಕ್ಕಿದೆ? ಅನ್ನುವ ಕುರಿತು ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಿಸುತ್ತಿದ್ದಾರೆ.

ಆದರೆ ತನಿಖೆ ಪೂರ್ಣವಾಗುವವರೆಗೆ ನಮಗೆ ಸಿಗುವ ಒಂದು ಸುಳಿವಿನ ಕುರಿತೂ ಹೇಳುವುದಿಲ್ಲ. ಮೊದಲು ತನಿಖೆ ಪೂರ್ಣವಾಗಿ ತಪ್ಪಿತಸ್ಥರು ಸಿಕ್ಕಲಿ. ಆನಂತರ ಎಲ್ಲವನ್ನೂ ಹೇಳುತ್ತೇವೆ ಎಂದು ನುಡಿದರು. ಎಸ್.ಐ.ಟಿ ಎಲ್ಲ ಹಂತಗಳಲ್ಲೂ ತನಿಖೆ ನಡೆಸುತ್ತಿದೆ. ಅದು ನಡೆಸುವ ತನಿಖೆಯಲ್ಲಿ ಸರ್ಕಾರ ಯಾವ ರೀತಿಯಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಆದಷ್ಟು ಶೀಘ್ರವಾಗಿ ಅದು ತನಿಖೆ ಪೂರ್ಣಗೊಳಿಸುತ್ತದೆ. ತಪ್ಪಿತಸ್ಥರನ್ನು ಬಂಧಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗೌರಿ ಲಂಕೇಶ್ ಅವರ ಹತ್ಯೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಮಾತನ್ನು ತಳ್ಳಿ ಹಾಕಿದ ಅವರು,ತಮಗೆ ಜೀವ ಬೆದರಿಕೆ ಇದೆ ಎಂದು ಗೌರಿ ಲಂಕೇಶ್ ಅವರು ಯಾವತ್ತೂ ಸರ್ಕಾರಕ್ಕೆ ದೂರು ನೀಡಿರಲಿಲ್ಲ ಎಂದರು. ತಮಗೆ ಜೀವ ಬೆದರಿಕೆ ಇದೆ ಎಂದು ಅವರು ಹೇಳಿದ್ದರೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೆವು.ಆದರೆ ಅವರೇ ದೂರು ನೀಡಿರಲಿಲ್ಲ.ಹೀಗಿರುವಾಗ ನಡೆದ ಘಟನೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎನ್ನುವುದು ಸರಿಯಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ