ಯಡ್ಡಿ ಭ್ರಷ್ಟಾಚಾರ: ಗಿನ್ನೆಸ್ ಸೇರುವ ಹಂತದಲ್ಲಿದೆ..?

Kannada News

13-09-2017 459

ಬೆಂಗಳೂರು: ಯಡಿಯೂರಪ್ಪ ಅವರು ನಡೆಸಿದ ಭ್ರಷ್ಟಾಚಾರವೇ ಗಿನ್ನೆಸ್ ದಾಖಲೆ ಸೇರುವ ಹಂತದಲ್ಲಿರುವಾಗ, ಬಿಜೆಪಿ ವರಿಷ್ಠರು ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡುತ್ತಿರುವ ಬಗ್ಗೆ ವ್ಯಂಗ್ಯವಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿಯ ಸವಾಲನ್ನು ಸ್ವೀಕರಿಸಿದ್ದೇನೆ. ಬೇಕಿದ್ದರೆ ಬಹಿರಂಗವಾಗಿ ಚರ್ಚೆಗೆ ಸಿದ್ಧರಾಗಲಿ ಎಂದು ರಣವೀಳ್ಯ ನೀಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಸಾರಿಗೆ ಇಲಾಖೆಯ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರು ನಮ್ಮ ಸರ್ಕಾರ, ಸಚಿವರ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ತಯಾರಿದ್ದಾರಂತೆ. ಅವರು ತಯಾರಿದ್ದರೆ ನಾವೂ ತಯಾರಿದ್ದೇವೆ. ಬರಲಿ, ಬಹಿರಂಗ ಚರ್ಚೆಗೆ ಬರಲಿ, ಇರುವ ದಾಖಲೆಗಳನ್ನೆಲ್ಲ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಭ್ರಷ್ಟಾಚಾರವೇ ಗಿನ್ನೆಸ್ ದಾಖಲೆಗೆ ಸೇರುವಷ್ಟಿದೆ. ಹೀಗಿರುವಾಗ ಇವರು ಕಾಂಗ್ರೆಸ್‍ನ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರಂತೆ ಎಂದು ಟೀಕೆ ಮಾಡಿದರು.

ಬರೀ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರೆ ಸಾಲದು. ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಆ ಕೆಲಸ ಮಾಡದೆ ಬರೀ ಆರೋಪ ಮಾಡುತ್ತಾ ಕುಳಿತರೆ ಏನರ್ಥ? ಅಂತ ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುವುದಿಲ್ಲ ಎಂಬ ಯಡಿಯೂರಪ್ಪ ಅವರ ಮಾತಿಗೆ ತಿರುಗೇಟು ನೀಡಿದ ಅವರು, ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದಿಲ್ಲ ಎಂದು ಅದ್ಹೇಗೆ ಹೇಳ್ತಾರ್ರೀ?ಯಾಕೆ ಮೋದಿಯವರು ಪ್ರಧಾನಿಯಾಗಲಿಲ್ಲವೇ? ಎಂದು ಪ್ರಶ್ನಿಸಿದರು.

ರಾಜೀವ್ ಗಾಂಧಿಯವರು ಕೂಡಾ ಚಿಕ್ಕ ವಯಸ್ಸಿನಲ್ಲೇ ಈ ದೇಶದ ಪ್ರಧಾನಿಯಾಗಿದ್ದರು. ಹೀಗಿರುವಾಗ ರಾಹುಲ್ ಗಾಂಧಿ ಪ್ರಧಾನಿಯಾಗುವುದಿಲ್ಲ ಎಂದು ಯಾವ ನಂಬಿಕೆಯಿಂದ ಹೇಳುತ್ತಾರೆ?ಎಂದು ಅವರು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಗೃಹ ಸಚಿವರಾಗಿ ನೇಮಕಗೊಳ್ಳುವ ಮುನ್ನ ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಿ ನಾಲ್ಕು ವರ್ಷಕ್ಕೂ ಮಿಕ್ಕ ಕಾಲ ಮಾಡಿರುವ ಸಾಧನೆಗಳ ಕುರಿತು ಬಣ್ಣಿಸಿದ ಅವರು, ನಿಜಕ್ಕೂ ರಾಮಲಿಂಗಾರೆಡ್ಡಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಸಾರಿಗೆ ವ್ಯವಸ್ಥೆಯನ್ನು ಸಕಲ ರೀತಿಯಲ್ಲಿ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದ್ದು ಇದೇ ಕಾರಣಕ್ಕಾಗಿ 23 ಕ್ಲಬ್ ಕ್ಲಾಸ್ ಬಸ್ಸುಗಳನ್ನು ಖರೀದಿಸಲಾಗಿದೆ ಎಂದರು. ಕ್ಲಬ್ ಕ್ಲಾಸ್ ಬಸ್ಸುಗಳು ಸಕಲ ಸವಲತ್ತುಗಳನ್ನು ಹೊಂದಿದ್ದು ಐಷಾರಾಮಿಯಾಗಿರುತ್ತವೆ. ಇದೇ ರೀತಿ ಡಿಸೆಂಬರ್ ವೇಳೆಗೆ ಇನ್ನೂ 171 ಬಸ್ಸುಗಳನ್ನು ಕ್ಲಬ್ ಕ್ಲಾಸ್ ಬಸ್ಸುಗಳನ್ನು ಖರೀದಿ ಮಾಡುವುದಾಗಿ ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ