ಸಚಿವ ಸಂಪುಟ ಸಭೆಯ ತೀರ್ಮಾನಗಳು !

Kannada News

13-09-2017 640

ಬೆಂಗಳೂರು: ರಾಜ್ಯದ 25 ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವರ್ತುಲ ರಸ್ತೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಇದೇ ಕಾರಣಕ್ಕಾಗಿ ಸಮೀಕ್ಷಾ ವರದಿ ನೀಡಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.

ಈ ಸಮಿತಿಯಲ್ಲಿ ಹಣಕಾಸು, ನಗರಾಭಿವೃದ್ಧಿ, ಲೋಕೋಪಯೋಗಿ, ಪೌರಾಡಳಿತ ಇಲಾಖೆಯ ಉನ್ನತಾಧಿಕಾರಿಗಳು ಸೇರಿ ಹಲ ಹಂತದ ಅಧಿಕಾರಿಗಳು ಇರುತ್ತಾರೆ. ಈ ಜಿಲ್ಲಾ ಕೇಂದ್ರಗಳಲ್ಲಿ ವರ್ತುಲ ರಸ್ತೆಗಳನ್ನು ನಿರ್ಮಿಸುವ  ಕುರಿತು ಎಲ್ಲ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲಿದೆ. ಯಾವ ರೀತಿ ಯೋಜನೆಯನ್ನು ಅನುಷ್ಟಾನಗೊಳಿಸಬಹುದು ಎಂಬ ಕುರಿತು ವಿವರವಾದ ಸಮೀಕ್ಷಾ ವರದಿ ನೀಡಲಿದೆ ಎಂದು ನುಡಿದರು. ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಅತ್ಯಧಿಕವಾಗಲಿದೆ. ಹೀಗಾಗಿ ಮುಂಚಿತವಾಗಿಯೇ ಈ ಕುರಿತು ಚಿಂತನೆ ನಡೆಸಿ ವರ್ತುಲ ರಸ್ತೆಗಳನ್ನು ನಿರ್ಮಿಸಲು ಸಜ್ಜಾದರೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಸದರಿ ಸಮಿತಿಗೆ 275 ಕೋಟಿ ರೂಗಳನ್ನು ಒದಗಿಸಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು ಮುಂದಿನ ಐದು ವರ್ಷಗಳಲ್ಲಿ ಸಮಗ್ರ ವರದಿ ನೀಡಲಿದೆ. ಅದರ ಆಧಾರದ ಮೇಲೆ ವರ್ತುಲ ರಸ್ತೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.

ಇದೇ ರೀತಿ ರಾಜ್ಯದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಿ, ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆಯನ್ನು ತಗ್ಗಿಸುವ ಸಲುವಾಗಿ ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲ ಹಂತದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಕುರಿತಂತೆಯೂ ಹೊಸ ನೀತಿಯೊಂದನ್ನು ರೂಪಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ, ಒಪ್ಪಿಗೆ ನೀಡಲಾಗಿದೆ ಎಂದರು.

ಇನ್ನು ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕುಗ್ಗಿಸುವ ಸಲುವಾಗಿ 2095 ಕೋಟಿ ರೂಗಳ ವೆಚ್ಚದಲ್ಲಿ 155 ಕಿಮೀ ಉದ್ದದ ನಾಲ್ಕು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಹೊಸಕೋಟೆ-ದೇವನಹಳ್ಳಿ, ನೆಲಮಂಗಲ-ಬ್ಯಾತ, ಆನೇಕಲ್-ಹೊಸಕೋಟೆ, ಹಾರೋಹಳ್ಳಿ-ಆನೇಕಲ್ ಮಾರ್ಗದ ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ವಿಮಾನ ನಿಲ್ದಾಣ ಸೇರಿ ನಾಲ್ಕು ಪ್ರಮುಖ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ನುಡಿದರು.

ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿರುವ  ವಿವಿಧ ಅಧಿನಿಯಮಗಳನ್ನು ಕ್ರೋಢೀಕರಿಸಿ ಏಕರೂಪದ ನಿಯಮಗಳನ್ನು ಜಾರಿಗೆ ತರಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಹೇಳಿದರು. ಅರಣ್ಯ ಇಲಾಖೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ನೇರ ನೇಮಕಾತಿ ನೀಡಬೇಕು ಎಂಬ ಕಾರಣಕ್ಕಾಗಿ ಈ ಹಿಂದೆ ನೂರಿಪ್ಪತ್ತೈದು ಹುದ್ದೆಗಳನ್ನು ಸೃಷ್ಟಿಸಲಾಗಿತ್ತಾದರೂ ಆ ಪೈಕಿ ಐವತ್ನಾಲ್ಕು ಹುದ್ದೆಗಳು ಖಾಲಿ ಇರುವುದರಿಂದ,ಆ ಹುದ್ದೆಗಳನ್ನು ಭರ್ತಿ ಮಾಡಲು ಇನ್ನೊಮ್ಮೆ ಅವಕಾಶ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.

ಧಾರವಾಡದ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕಟ್ಟಡಕ್ಕೆ ನೂರು ವರ್ಷಗಳು ಭರ್ತಿಯಾಗಿದ್ದು ಅದರ ದುರಸ್ಥಿ ಮತ್ತಿತರ ಕಾರ್ಯಗಳಿಗಾಗಿ ಇಪ್ಪತ್ತೈದು ಕೋಟಿ ರೂ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಗದಗ್‍ ನಲ್ಲಿರುವ ನೂರು ಹಾಸಿಗೆ ಸಾಮರ್ಥ್ಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲು ಐದು ಕೋಟಿ,ಎಂಟು ಲಕ್ಷ ರೂಗಳನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ತೋರಣಗಲ್‍ ನಲ್ಲಿರುವ ಸ್ಟೀಲ್ ಫ್ಯಾಕ್ಟರಿಗೆ ಈಗಾಗಲೇ ಏಳು ನೂರಾ ಹದಿನೈದು ಎಕರೆ ಭೂಮಿಯನ್ನು ಕೆ.ಎ.ಐ.ಡಿ.ಬಿ ವತಿಯಿಂದ ಮಂಜೂರು ಮಾಡಲಾಗಿತ್ತು. ಈಗ ಈ ಭೂಮಿಯ ಮಧ್ಯೆ ಉಳಿದಿರುವ 77 ಎಕರೆ ಭೂಮಿಯನ್ನು ಕೆರೆ ನಿರ್ಮಿಸಿ, ನೀರು ಸಂಗ್ರಹಿಸಿಕೊಳ್ಳಲು ಮಂಜೂರು ಮಾಡುವಂತೆ ಅದು ಕೇಳಿಕೊಂಡಿದೆ. ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದರು.

ದಾವಣಗೆರೆಯಲ್ಲಿ ಮಾನಸ ಸರೋವರ ಸಂಸ್ಥೆಗೆ ಕಿರು ಜಲ ವಿದ್ಯುತ್ ಯೋಜನೆಗಾಗಿ ಗುತ್ತಿಗೆ ಆಧಾರದ ಮೇಲೆ ಒಂದೂವರೆ ಎಕರೆ ಜಮೀನನ್ನು ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ನಾಲ್ಕನೇ ಹಣಕಾಸು ಆಯೋಗದ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಇದೇ ರೀತಿ ಚಾಮರಾಜನಗರ,ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಸಾವಯವ ಅಕ್ಕಿಯನ್ನು ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಮತ್ತು ಅದಕ್ಕಾಗಿ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು 25 ಕೋಟಿ ರೂ ಮಂಜೂರು ಮಾಡಲಾಗಿದೆ ಎಂದರು.

ಸದರಿ ಯೋಜನೆಯನ್ನು ಕರ್ನಾಟಕ ಆಹಾರ ನಿಗಮ ಅನುಷ್ಟಾನಗೊಳಿಸಲಿದ್ದು ಇದರಿಂದ ಹತ್ತೂವರೆ ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ ಎಂದ ಅವರು,ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 192.54 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.

ಸೀಬರ್ಡ್ ಯೋಜನೆಗೆ ನೀರು ಒದಗಿಸುವ ಸಂಬಂಧ ಬ್ಯಾರೇಜ್ ನಿರ್ಮಿಸಲು 107 ಕೋಟಿ ರೂ ವೆಚ್ಚದ ಯೋಜನೆ ಜಾರಿಯಾಗಲಿದೆ. ತುಂಗಭದ್ರಾ ಆಣೆಕಟ್ಟಿನಿಂದ ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಯಲಬುರ್ಗಾ ತಾಲ್ಲೂಕಿನ ಎಲ್ಲ ಕೆರೆಗಳಿಗೆ ಏತನೀರಾವರಿಯ ಮೂಲಕ ನೀರು ತುಂಬಿಸಲು 290 ಕೋಟಿ ರೂಗಳ ಯೋಜನೆಗೆ ಸಂಪುಟ ಅನುಮತಿ ನೀಡಿದೆ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ