ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ !

Kannada News

12-09-2017

ಬೆಂಗಳೂರು: ಡಿವೈಎಸ್ಪಿ ಗಣಪತಿ ಭಟ್ ಆತ್ಮಹತ್ಯೆ ಪ್ರಕರಣದಲ್ಲಿ ನಾನು ನಿರ್ದೋಷಿ, ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸಿಬಿಐ ತನಿಖೆ ನಡೆದು ಸತ್ಯಾಂಶ ಹೊರಬರಲಿ ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವುದು ಒಳ್ಳೆಯದು ಎಂದು ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದರು.

ಸುಪ್ರೀಂ ಕೋರ್ಟ್, ಗಣಪತಿ ಭಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಾಗ ಎಲ್ಲೂ ನನ್ನ ಹೆಸರನ್ನು ಪ್ರಸ್ತಾಪಿಸಿಲ್ಲ. ಈ ಪ್ರಕರಣದ ತನಿಖೆಯನ್ನು 3 ತಿಂಗಳಲ್ಲಿ ಮುಗಿಸಿ, ಪ್ರಕರಣವನ್ನು ಯಾರು ಮಾಡಿದರು ಎಂಬುದನ್ನು ಪತ್ತೆ ಹಚ್ಚಿ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಿರುವಾಗ ಬಿಜೆಪಿ ನಾಯಕರು ತನಿಖೆ ಮುಗಿಯುವವರೆಗೂ ಕಾಯದೆ ರಾಜೀನಾಮೆಗೆ ಆಗ್ರಹಿಸುವುದು ಸರಿಯಲ್ಲ ಎಂದರು.

ರಾಜಕೀಯ ದುರುದ್ದೇಶದಿಂದ ಬಿಜೆಪಿ ನಾಯಕರು ತಮ್ಮ ತೇಜೋವಧೆ ನಡೆಸಿದ್ದಾರೆ. ಗಣಪತಿ ಭಟ್ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ನಿರ್ದೋಷಿ ಎಂಬುದನ್ನು ಸಿಐಡಿ ಈಗಾಗಲೇ ತನಿಖಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಬಿಜೆಪಿ ನಾಯಕರು ರಾಜೀನಾಮೆ ಕೇಳುತ್ತಿರುವುದು ರಾಜಕೀಯ ಪ್ರೇರಿತ ಎಂದು ಹರಿಹಾಯ್ದರು. ಬಿಜೆಪಿ ನಾಯಕರು ಮೊದಲಿನಿಂದಲೂ ನನ್ನ ವಿರುದ್ಧ ತೇಜೋವಧೆ ಮಾಡಿಕೊಂಡೇ ಬರುತ್ತಿದ್ದಾರೆ. ಹಿಂದೆ ಡಿ.ಕೆ ರವಿ ಅವರ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದ ಸಿಬಿಐ ತನಿಖಾ ವರದಿಯಲ್ಲಿ ನನ್ನ ವಿರುದ್ಧ ಒಂದು ಅಂಶವೂ ಇರಲಿಲ್ಲ. ಕೊನೆಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಇದನ್ನು ಬಿಜೆಪಿ ನಾಯಕರು ಅರಿಯಬೇಕು. ಅವರು ಡಿ.ಕೆ ರವಿ ಅವರ ಸಿಬಿಐ ವರದಿಯನ್ನು ಓದಿದಂತಿಲ್ಲ ಎಂದು ವ್ಯಂಗ್ಯವಾಡಿದರು. ನನಗೂ ಕುಟುಂಬ ಇದೆ. ಹೆಂಡತಿ, ಮಕ್ಕಳಿದ್ದಾರೆ. ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿ ತೇಜೋವಧೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದರು.

ನ್ಯಾಯಾಂಗ ಹಾಗೂ ಸಿಬಿಐ ಮೇಲೆ ನನಗೆ ವಿಶ್ವಾಸವಿದೆ. ತನಿಖೆ ನಡೆಯಲಿ ಸತ್ಯಾಂಶ ಹೊರ ಬರುತ್ತದೆ. ಬಿಜೆಪಿ ನಾಯಕರು ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು. ಈಗಲೇ ನನ್ನ ವಿರುದ್ಧ ತೇಜೋವಧೆ ಮಾಡುವುದು ಸರಿಯಲ್ಲ. ನನ್ನ ವಿರುದ್ಧ ಸಾಕ್ಷ್ಯಾಧಾರವಿದ್ದರೆ ಸಿಬಿಐಗೆ ಕೊಡಲಿ ಎಂದು ಸಚಿವ ಜಾರ್ಜ್ ಸವಾಲು ಹಾಕಿದರು.

ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ, ಕಾಂಗ್ರೆಸ್ ಪಕ್ಷದ ಬುನಾದಿಯನ್ನು ಬಲಪಡಿಸುತ್ತಿರುವ ನನ್ನಂತವರನ್ನು ಕಂಡರೆ ಅವರಿಗೆ ಸಹಿಸಲು ಆಗುತ್ತಿಲ್ಲ ಅಮಿತ್ ಷಾ ಬಂದೋದ ಮೇಲೆ ನಿದ್ದೆಯಿಂದ ಎದ್ದಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಮುಖಂಡರ ತೇಜೋವಧೆಗೆ ಮುಂದಾಗಿದ್ದಾರೆ ಎಂದು ಹರಿಹಾಯ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ