ನಗರದಲ್ಲಿ ಹೆಚ್ಚಾಗ್ತಿದೆ: ಡ್ರಂಕ್ ಅಂಡ್ ಡ್ರೈವ್..?

Kannada News

12-09-2017

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ನಗರದ ಎಂಜಿ ರಸ್ತೆ,ಬ್ರಿಗೇಡ್ ರಸ್ತೆ ಸೇರಿದಂತೆ ಹೆದ್ದಾರಿ ಪ್ರಮುಖ ಪಬ್‍ ಗಳು, ಬಾರ್‍ ಗಳು ಬಂದ್ ಆಗಿದ್ದರೂ, ಕಳೆದ ಜುಲೈ ತಿಂಗಳೊಂದರಲ್ಲೇ ಅತಿ ಹೆಚ್ಚು ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ (ಡ್ರಂಕ್ ಆಂಡ್ ಡ್ರೈವ್) ಪ್ರಕರಣಗಳನ್ನು ನಗರ ಸಂಚಾರ ಪೊಲೀಸರು ದಾಖಲಿಸಿದ್ದಾರೆ.

ಜುಲೈ ತಿಂಗಳಲ್ಲಿ ಒಟ್ಟು 7438 ಚಾಲಕರ ವಿರುದ್ಧ ಪ್ರಕರಣ ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಜುಲೈ ಒಂದರಂದು ನಗರದ ಪ್ರಮುಖ ವಾಣಿಜ್ಯ ಕೇಂದ್ರ ಪ್ರದೇಶವಾದ (ಸಿಬಿಡಿ) ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಮತ್ತಿತರ ಪ್ರದೇಶಗಳಲ್ಲಿ ಮದ್ಯದಂಗಡಿ ಮತ್ತು ಬಾರ್‍ ಗಳು ಬಂದ್ ಆಗಿದ್ದವು. ಆದರೆ ಜುಲೈ 23ರಂದು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿ, ಸುಪ್ರೀಂ ತೀರ್ಪು ನಗರದೊಳಗಿನ ಬಾರ್‍ ಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿತ್ತು. ಇದಾಗ ಬಳಿಕ ನಗರದ ಬಾರ್ ಗಳು ನಿರಾಳವಾಗಿವೆ.

ದ್ವಿಚಕ್ರ ವಾಹನ ಸವಾರರು ಮದ್ಯಪಾನ ಮಾಡುವ ಪ್ರದೇಶ ಮತ್ತು ಅವರು ಪೊಲೀಸರಿಗೆ ಸಿಕ್ಕಿ ಬೀಳುವ ಸ್ಥಳ ಒಂದೇ ಆಗಿರುವುದಿಲ್ಲ. ವಾಹನ ಚಾಲಕರು ಸಿಬಿಡಿ ಪ್ರದೇಶದ ಮದ್ಯದಂಗಡಿಗಳು ಬಂದ್ ಆಗಿದ್ದರಿಂದ ಬೇರೆ ಕಡೆ ಮದ್ಯಸೇವನೆ ಮಾಡಿ ವಾಹನ ಚಲಾಯಿಸುವಾಗ ಕಾರ್ಯಚರಣೆ ನಡೆಸಿದ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ" ಎಂದು ಹೆಚ್ಚುವರಿ ಪೊಲೀಸ್ (ಸಂಚಾರ)ಆಯುಕ್ತ ಆರ್.ಹಿತೇಂದ್ರ ತಿಳಿಸಿದ್ದಾರೆ.

ಈ ವರ್ಷದ ಜನವರಿ ಮತ್ತು ಆಗಸ್ಟ್ ಮಧ್ಯೆ, ಸಂಚಾರ ಪೊಲೀಸರು 44,448 ಕುಡಿದು ವಾಹನ ಚಲಾಯಿಸಿದ ಪ್ರಕರಣ ದಾಖಲಿಸಿದ್ದಾರೆ. ಇದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಪ್ರಕರಣವಾಗಿದೆ. 2015ರಲ್ಲಿ ಇದೇ ವೇಳೆ 36,260 ಪ್ರಕರಣ ದಾಖಲಾಗಿದ್ದರೆ 2016ರಲ್ಲಿ 35,299 ಪ್ರಕರಣ ದಾಖಲಾಗಿದ್ದವು.

ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚಲು ನಾವು ವಿಶೇಷ ಅಭಿಯಾನ ಆರಂಭಿಸಿದ್ದೇವೆ. ಈ ಹಿಂದೆ ವಾರಾಂತ್ಯದಲ್ಲಿ ಮಾತ್ರ ನಡೆಸುತ್ತಿದ್ದ ಡ್ರಂಕ್ ಆಂಡ್ ಡ್ರೈವ್ ಕಾರ್ಯಾಚರಣೆಯನ್ನು  ಈಗ ದೈನಂದಿನ ಆಧಾರದಲ್ಲಿ ನಡೆಸಲಾಗುತ್ತಿದೆ. ಇದು ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಹಿತೇಂದ್ರ.

ಕುಡಿದು ವಾಹನ ಚಲಾಯಿಸುವುದರಿಂದಲೇ ಹೆಚ್ಚಿನ ಅಪಘಾತ ಸಂಭವಿಸುತ್ತವೆ. ಸಂಚಾರ ಪೊಲೀಸರು ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಾಹನಗಳ ತಪಾಸಣೆ ನಡೆಸಬೇಕು. ಈ ಸಂದರ್ಭದಲ್ಲೇ ಹೆಚ್ಚಿನ ಬಾರ್‍ ಗಳು, ಪಬ್‍  ಗಳು ರಿಯಾಯಿತಿ ದರ ಪ್ರಕಟಿಸುತ್ತವೆ. ನಿರಂತರ ತಪ್ಪು ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ರಸ್ತೆ ಸುರಕ್ಷಾ ತಜ್ಞ ಮತ್ತು ಕಮ್ಯುನಿಟಿ ಅಗೈಸ್ಟ್ ಡ್ರಂಕ್ ಆಂಡ್ ಡ್ರೈವಿಂಗ್ ಸಂಸ್ಥೆಯ ಸಂಸ್ಥಾಪಕ ಪ್ರಿನ್ಸ್ ಸಿಂಗಾಲ್ ಹೇಳುತ್ತಾರೆ.

2015ರಲ್ಲಿ ಕುಡಿದು ವಾಹನ ಚಲಾಯಿಸಿದ 4828 ಪ್ರಕರಣ ದಾಖಲಾಗಿದ್ದರೆ 2016ರಲ್ಲಿ 7506 ಪ್ರಕರಣ ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದನ್ನು ಇದು ತೋರಿಸುತ್ತದೆ. 100 ಎಂಎಲ್ ರಕ್ತದಲ್ಲಿ 30ಎಂಜಿಯಷ್ಟು ಅಲ್ಕೋಹಾಲ್ ಇದ್ದರೆ ಅದು ಕಾನೂನು ಪ್ರಕಾರ ತಪ್ಪಲ್ಲ. ಪ್ರಸ್ತಾಪಿತ ಮೋಟಾರು ವಾಹನ ಮಸೂದೆಯ ತಿದ್ದುಪಡಿ ಪ್ರಕಾರ, ಕುಡಿದು ವಾಹನ ಚಲಾಯಿಸಿದವರಿಗೆ ವಿಧಿಸುತ್ತಿದ್ದ ದಂಡವನ್ನು 2000 ರೂ.ಯಿಂದ 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.

ಕುಡಿದು ವಾಹನ ಚಲಾಯಿಸುವವರ ಚಾಲನಾ ಪರವಾನಿಗೆ ರದ್ದುಪಡಿಸುವಂತೆಯೂ ಸಂಚಾರ ಪೊಲೀಸರು ಸಾರಿಗೆ ಇಲಾಖೆಗೆ ಶಿಫಾರಸು ಮಾಡುತ್ತಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ