ರೇಪ್ ವೀಡಿಯೊ ಅಪ್ಲೋಡ್: ಆರೋಪಿ ಸೆರೆ !

Kannada News

12-09-2017

ಬೆಂಗಳೂರು: ಸಹೋದ್ಯೋಗಿಯಾಗಿದ್ದ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಗಳನ್ನು, ಅಶ್ಲೀಲ ವೆಬ್‍ ಸೈಟ್‍ಗಳಿಗೆ ಅಪ್ಲೋಡ್ ಮಾಡಿ ವಿಕೃತಿ ಮರೆದಿದ್ದ ಸಾಫ್ಟ್‍ ವೇರ್ ಎಂಜಿನಿಯರ್‍ನೊಬ್ಬನನ್ನು ನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರಿಂದಮ್ ನಾಥ್(28) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ವರ್ಷ ಈ ಘಟನೆ ನಡೆದಿದ್ದು, ಆರೋಪಿ ಸಂತ್ರಸ್ತೆಗೆ ಮತ್ತೆ ತನ್ನ ಮನೆಗೆ ಬರುವಂತೆ ಮತ್ತು ಹಣ ನೀಡುವಂತೆ ಹೆದರಿಸುತ್ತಿದ್ದ. ಅಲ್ಲದೇ ಬಾರದೆ ಹೋದರೆ ರೇಪ್ ದೃಶ್ಯವನ್ನು ಇಂಟರ್‍ ನೆಟ್‍ಗೆ ಅಲ್ಲೋಡ್ ಮಾಡುವುದಾಗಿ ಹೆದರಿಸಿದ್ದ. ಇದಕ್ಕೆ ಸಂತ್ರಸ್ತ ಮಹಿಳೆ ನಿರಾಕರಿಸಿದಾಗ ಸೆ.4 ರಂದು ಕಾಮುಕ ರೇಪ್ ದೃಶ್ಯಗಳನ್ನು ಪೋರ್ನ್ ವೆಬ್‍ ಸೈಟ್‍ಗೆ ಹಾಕಿದ್ದನು.

ಇಷ್ಟೇ ಅಲ್ಲದೇ ಇಂಟರ್‍ ನೆಟ್‍ಗೆ ಹಾಕಿದ್ದ ಲಿಂಕ್ ಅನ್ನು ಸಂತ್ರಸ್ತೆಗೆ ಕಳುಹಿಸಿ ವಿಕೃತಿ ಮೆರೆದಿದ್ದ. ಇದರಿಂದ ಆಘಾತಕ್ಕೊಳಗಾದ ಸಂತ್ರಸ್ತೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಅದೃಷ್ಟವಶಾತ್ ಸ್ನೇಹಿತೆ ತಕ್ಷಣ ನೋಡಿ ಆಕೆಯನ್ನು ಉಳಿಸಿಕೊಂಡಿದ್ದಾಳೆ. ಆ ನಂತರ ಸ್ನೇಹಿತೆಯ ಸಲಹೆಯ ಮೇರೆಗೆ ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳೆದ ಬುಧವಾರ(ಸೆ.6) ರಂದು ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಘಟನೆ ವಿವರ: ಸಂತ್ರಸ್ತೆ ಮತ್ತು ಆರೋಪಿ ಅರಿಂದಮ್ ನಾಥ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅರಿಂದಮ್ ಸಂತ್ರಸ್ತೆಗೆ ಪ್ರೇಮ ನಿವೇದನೆ ಮಾಡಿದ್ದು ಆದನ್ನು ಆಕೆ ನಿರಾಕರಿಸಿದ್ದಳು. ಒಂದು ದಿನ ತನ್ನ ಮನೆಗೆ ಬರುವಂತೆ ಆಮಂತ್ರಿಸಿದ್ದ. ಸ್ನೇಹಿತ ಎಂದು ಕೊಂಡು ಮನೆಗೆ ಹೋದಾಗ ಅರಿಂದಮ್ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ದೃಶ್ಯಗಳನ್ನು ತನ್ನ ಮೊಬೈಲ್‍ನಲ್ಲಿ ಕದ್ದು ಸೆರೆ ಹಿಡಿದಿದ್ದ. ಘಟನೆ ನಂತರ ಸಂತ್ರಸ್ತೆ ಆ ಕಂಪನಿ ಬಿಟ್ಟು ಬೇರೆ ಕಂಪನಿಗೆ ಸೇರಿಕೊಂಡಿದ್ದಳು. ಇದಾದ ನಂತರವೂ ಕಾಮುಕ ಪದೇ ಪದೆ ಆಕೆಗೆ ಫೋನ್ ಮಾಡಿ ಮತ್ತೆ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ ಎಂದು ಸಂತ್ರಸ್ಥೆ ತಿಳಿಸಿದ್ದರು. ಘಟನೆ ಸಂಬಂಧ ವಿವೇಕನಗರ ಪೊಲೀಸರು ಅತ್ಯಾಚಾರ, ಸುಲಿಗೆ, ಐಟಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ